ಟೆಲ್ ಅವಿವ್: ಇಸ್ರೇಲ್ (Airstrike in Israel) ಮೇಲೆ ಲೆಬೆನಾನ್ (Lebanon)ನಿಂದ ಹೆಜ್ಬುಲ್ಲಾ ಉಗ್ರರು (Hezbollah) ನಡೆಸಿದ ರಾಕೆಟ್ ದಾಳಿಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಗಳು (Israel Defense Forces) ತಿಳಿಸಿದ್ದಾರೆ. ಎರಡೂ ಕಡೆಗಳಲ್ಲಿ ನಡೆಯುತ್ತಿರುವ ವಾಯುದಾಳಿಗಳ (Air Strikes) ಪೈಕಿ ಹೆಜ್ಬುಲ್ಲಾ ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ ಇದು ತೀವ್ರಸ್ವರೂಪದ್ದಾಗಿತ್ತು ಎಂಬ ಮಾಹಿತಿಯನ್ನು ಇಸ್ರೇಲ್ ಮಿಲಿಟರಿ ನೀಡಿದೆ.
ಇಸ್ರೇಲ್ ನ ಕೃಷಿ ಪ್ರದೇಶಗಳಾಗಿರುವ ಮೆಟುಲಾ ಮತ್ತು ಹೈಫಾ ಎಂಬ ಪ್ರದೇಶಗಳ ಮೇಲೆ ಈ ಭೀಕರ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಗಾಯಗೊಂಡವರಲ್ಲಿ ನಾಲ್ಕು ಜನ ವಿದೇಶಿ ಕಾರ್ಮಿಕರಾಗಿದ್ದಾರೆ ಮತ್ತು ಮೂವರು ಇಸ್ರೇಲಿ ಪ್ರಜೆಗಳು ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ಲೆಬೆನಾನ್ ಮೇಲೆ ನಡೆಸಿದ ದಾಳಿಯಲ್ಲಿ 24 ಮಂದಿ ಮೃತಪಟ್ಟಿರುವುದಾಗಿ ಅಲ್ಲಿನ ಆರೋಗ್ಯ ಅಧಿಕಾರಿಗಳ ಮಾಹಿತಿಯನ್ನು ಉದ್ಧರಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
‘ಹೆಜ್ಬುಲ್ಲಾ ಉಗ್ರರು ಉಡಾಯಿಸಿದ ರಾಕೆಟ್ ಗಳು ನಮ್ಮ ದೇಶದ 7 ನಾಗರಿಕರನ್ನು ಬಲಿ ತೆಗೆದುಕೊಂಡಿದೆ. ಈ ಭೀಕರ ದಾಳಿಗೆ ನಾವು ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ..” ಎಂದು ಇಸ್ರೇಲಿ ಭದ್ರತಾ ಪಡೆ (IDF) ತನ್ನ ಎಕ್ಸ್ (X) ಖಾತೆಯಲ್ಲಿ ಖಡಕ್ ರಿಪ್ಲೈ ನೀಡಿದೆ. ಈ ದಾಳಿಯ ಬೆನ್ನಲ್ಲೇ, ಲೆಬೆನಾನ್ ಉಗ್ರರು ಉಡಾಯಿಸಿದ ಸುಮಾರು 25 ರಾಕೆಟ್ ಗಳು ಇಸ್ರೇಲಿನ ಉತ್ತರ ಭಾಗದಲ್ಲಿರುವ ಬಂದರು ನಗರವಾಗಿರುವ ಹೈಫಾದಲ್ಲಿರುವ ಆಲಿವ್ ತೋಟಗಳಿಗೆ ಅಪ್ಪಳಿಸಿದ ಕಾರಣ ಇಬ್ಬರು ಸಾವನ್ನಪ್ಪಿದ್ದು ಮತ್ತಿಬ್ಬರು ಗಾಯಗೊಂಡಿದ್ದಾರೆ.
ಕಳೆದ ಶುಕ್ರವಾರದಂದು ಬೈರೂತ್ ನ ದಕ್ಷಿಣ ಅರೆ-ನಗರ ಭಾಗದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಗುರುವಾರದಂದು ಇಸ್ರೇಲಿ ಪಡೆಗಳು ಹೆಜ್ಬುಲ್ಲಾ ಉಗ್ರರ ಶಸ್ತ್ರಾಗಾರ ಸೌಲಭ್ಯಗಳು ಮತ್ತು ನಿಯಂತ್ರಣ ಕೇಂದ್ರವಿದ್ದ ಸಿರಿಯಾದ ಕೆಲವು ನಿರ್ದಿಷ್ಟ ಭಾಗಗಳ ಮೇಲೆ ವಾಯುದಾಳಿ ನಡೆಸಿ ಅವುಗಳನ್ನು ನಾಶಗೊಳಿಸಿತ್ತು.
ಉತ್ತರ ಗಾಜಾ ಮೇಲೆ ಇಸ್ರೇಲ್ ದಾಳಿ
ಉತ್ತರ ಗಾಝಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಕಡೆಯ ಆಸ್ಪತ್ರೆಯೊಂದರ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯ ಕಾರಣದಿಂದ ವಿಶ್ವಸಂಸ್ಥೆಯ ಏಜೆನ್ಸಿಗಳು ಈ ಭಾಗಕ್ಕೆ ಪೂರೈಕೆ ಮಾಡಿದ್ದ ಅತ್ಯಗತ್ಯ ಸಲಕರಣೆಗಳು ನಾಶವಾಗಿದೆ. ಈ ದಾಳಿಯ ಕಾರಣದಿಂದ ಡಯಾಲಿಸಿಸ್ ಯುನಿಟ್, ನೀರಿನ ಟ್ಯಾಂಕ್ ಮತ್ತು ಶಸ್ತ್ರಚಿಕಿತ್ಸಾ ಕಟ್ಟಡ ನಾಶಗೊಂಡಿದೆ ಎಂದು ವರದಿಯಾಗಿದೆ.
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್, ಪ್ಯಾಲೆಸ್ತೀನ್ ನಿರಾಶ್ರಿತರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಪಡೆ (UNRWA) ದೇಶದೊಳಗಿನಿಂದ ಕಾರ್ಯನಿರ್ವಹಿಸುವುದಕ್ಕೆ ನಿಷೇಧ ಹೇರಿರುವುದು ಈ ಭಾಗದಲ್ಲಿನ ಪರಿಹಾರ ಕಾರ್ಯಗಳ ಮೇಲೆ ಗಂಭೀರ ಪರಿಣಾಮ ಬೀರಿದಂತಾಗಿದೆ. ಮದ್ಯಪ್ರಾಚ್ಯ ಭಾಗದಲ್ಲಿ ಸಂಘರ್ಷ ಮಯ ವಾತಾವರಣ ತಾರಕ್ಕೇರಿರುವ ಬೆನ್ನಲ್ಲೇ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಗಳು ಈ ಭಾಗದಲ್ಲಿ ಕದನ ವಿರಾಮ ಸ್ಥಾಪಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Isrel Hezbollah War: ಇಸ್ರೇಲ್ ವಿರುದ್ಧ ಯುದ್ಧ ನಿರಂತರ; ಹೆಜ್ಬುಲ್ಲಾ ನೂತನ ನಾಯಕ