Friday, 1st November 2024

Kannada Rajyotsava: ಕನ್ನಡ, ಕನ್ನಡಿಗರನ್ನು ಹೀಯಾಳಿಸಿದರೆ ಕಠಿಣ ಕ್ರಮ; ಸಿಎಂ ಖಡಕ್‌ ಎಚ್ಚರಿಕೆ

Kannada Rajyotsava

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಾಮಾಜಿಕ ಜಾಲಾತಾಣಗಳಲ್ಲಿ ಕನ್ನಡ, ಕನ್ನಡಿಗರನ್ನು ಹೀಯಾಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ , ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿಯು ಕಂಡುಬರುತ್ತಿದೆ. ಇದು ನಾಡದ್ರೋಹ ಎಂದು ಪರಿಗಣಿಸಿ, ಅಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಕನ್ನಡಿಗರಿಗೆ ಕೇಂದ್ರದ ಅನ್ಯಾಯ; ಲೋಕಸಭೆಯಲ್ಲಿ ಸಂಸದರು ದನಿಯೆತ್ತಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕಕ್ಕೆ (Karnataka) 15ನೇ ಹಣಕಾಸು ಆಯೋಗದಲ್ಲಿ (Finance commission) ಆದ ಅನ್ಯಾಯವನ್ನು ಕೇಂದ್ರ ಸರ್ಕಾರ (Central government) ಸರಿಪಡಿಸಿಲ್ಲ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಈ ಕುರಿತು ಕರ್ನಾಟಕದ ಸಂಸದರು ಲೋಕಸಭೆಯಲ್ಲಿ (Lok sabha) ದನಿಯೆತ್ತಬೇಕು ಎಂದು ಆಗ್ರಹಿಸಿದ್ದಾರೆ.

69ನೇ ಕನ್ನಡ ರಾಜ್ಯೋತ್ಸವ (Kannada Rajyotsava) ಪ್ರಯುಕ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯವಿದೆ ಎಂದು ಆರೋಪಿಸಿದರು. ಜೊತೆಗೆ,ಕನ್ನಡಿಗರ ವಿರುದ್ಧ ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ.

ಕರ್ನಾಟಕಕ್ಕೆ 15ನೇ ಹಣಕಾಸಿನ ಆಯೋಗದಲ್ಲಿ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ. ಕೇಂದ್ರದ ಅನುದಾನದ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಆಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದೆ. ಆದರೂ ನಾವು ಶಾಲಾ ಕಾಲೇಜು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ನಾವು ರಾಜ್ಯಕ್ಕೆ ನ್ಯಾಯಯುತವಾಗಿ ತೆರಿಗೆ ಪಾಲು ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳುವ ಯತ್ನ ಮಾಡಬೇಕಾಗಿದೆ. ರಾಜ್ಯದಿಂದ ಆಯ್ಕೆಯಾದ ಎಂಪಿಗಳು ಲೋಕಸಭೆಯಲ್ಲಿ ಧ್ವನಿ ಎತ್ತಬೇಕಿದೆ. ರಾಜ್ಯಸಭಾ ಸದಸ್ಯರೂ ತೆರಿಗೆ ಪಾಲು ಕೊಡಿ ಎಂದು ಕೇಳಬೇಕು. ಆ ರೀತಿಯ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲಾ ಮಕ್ಕಳಿಗೆ ಯೋಜನೆಗಳನ್ನು ರೂಪಿಸಿದ್ದಾರೆ. ವಾರದಲ್ಲಿ ಆರು ದಿನ ಮೊಟ್ಟೆ ಕೊಡುತ್ತೇವೆ. ಚಿಕ್ಕಿ,‌ ಬಾಳೆ ಹಣ್ಣು ಕೊಡುತ್ತಿದ್ದೇವೆ. ದಿನ 57 ಲಕ್ಷ ಮಕ್ಕಳಿಗೆ ಮೊಟ್ಟೆ ಕೊಡುತ್ತಿದ್ದೇವೆ. ಸಾಯಿ ಅನ್ನಪೂರ್ಣ ಟ್ರಸ್ಟ್ ವಾರದಲ್ಲಿ 3ದಿನ ರಾಗಿ ಮಾಲ್ಟ್ ನೀಡುತ್ತಿದೆ. ಅಪೌಷ್ಟಿಕತೆ ದೂರ ಮಾಡಲು ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕತೆ ದೂರ ಮಾಡಲು ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡ ದೀವಿಗೆ ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಕ್ಕಳಿಗಾಗಿ ದೀವಿಗೆ ಬಿಡುಗಡೆ ಮಾಡಿದ್ದೇವೆ. ಎಲ್ಲರೂ ಕೂಡ ಕನ್ನಡ ಭಾಷೆ ಮಾತನಾಡಬೇಕು. ಭಾಷೆ ಕುರಿತು ದುರಭಿಮಾನ ಇರಬಾರದು, ಅಭಿಮಾನ ಇರಬೇಕು. ಕನ್ನಡ ಮಾತನಾಡಲು ಬರದೇ ಇರುವವರ ಬಳಿ ಬೇರೆ ಭಾಷೆ ಮಾತನಾಡಬಾರದು. ಕನ್ನಡವನ್ನೇ ಅವರಿಗೆ ಕಲಿಸಬೇಕು ಎಂದು ಸಿಎಂ ಹೇಳಿದರು.

ಇದನ್ನೂ ಓದಿ: Rajyotsava Award 2024: ಶಿಲ್ಪಿ ಅರುಣ್ ಯೋಗಿರಾಜ್, ​ಎಂಜಿನಿಯರ್ ಕನ್ನಯ್ಯ ನಾಯ್ಡು ಸೇರಿ 69 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಮತ್ತು ಕನ್ನಡಿಗರ ಅವಹೇಳನ ಮಾಡುವುದು, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ. ಕನ್ನಡಿಗರ ಅವಹೇಳನ ಮಾಡುವವರ ವಿರುದ್ಧ ಸರ್ಕಾರದಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇವತ್ತು ಕನ್ನಡಿಗರಾಗುತ್ತೇವೆ ಎಂದು ಶಪಥ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.