Friday, 1st November 2024

NASA: ಅದ್ಬುತ ಫೊಟೋ ಹಂಚಿಕೊಂಡು ದೀಪಾವಳಿ ಶುಭಾಶಯ ಕೋರಿದ ನಾಸಾ; ಈ ಚಿತ್ರದ ವಿಶೇಷತೆ ಏನ್‌ ಗೊತ್ತಾ?

NASA News

ವಾಷಿಂಗ್ಟನ್ : ಜಗತ್ತಿನಾದ್ಯಂತ ಅದ್ಧೂರಿಯಾಗಿ ದೀಪಾವಳಿ (Deepavali) ಹಬ್ಬವನ್ನು ಆಚರಿಸಲಾಗುತ್ತಿದೆ. ಮೊನ್ನೆಯಷ್ಟೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್(Joe Biden) ಸಮ್ಮುಖದಲ್ಲಿ ಶ್ವೇತ ಭವನದಲ್ಲಿ ದೀಪಾವಳಿಯನ್ನು ಆಚರಿಸಲಾಗಿತ್ತು. ಇದೀಗ ನಾಸಾ ತನ್ನ ಎಕ್ಸ್‌ ಖಾತೆಯಲ್ಲಿ ದೀಪಾವಳಿ ಶುಭಾಶಯ ಕೋರಿ ಟ್ವೀಟ್‌ ಮಾಡಿದೆ. ನಾಸಾ (NASA) ತನ್ನ ಎಕ್ಸ್‌ ಖಾತೆಯಲ್ಲಿ ದೀಪಾವಳಿ ಶುಭಾಶಯಗಳೊಂದಿಗೆ ಒಮೆಗಾ ನೆಬ್ಯುಲಾದಲ್ಲಿ ಮೂಡಿರುವ ನಕ್ಷತ್ರ ರಚನೆಯ ಫೋಟೊವನ್ನು ಹಂಚಿಕೊಂಡಿದೆ. ಹಾಗೂ ಈ ನಕ್ಷತ್ರಗಳು ಬ್ರಹ್ಮಾಂಡ ಬೆಳಗುತ್ತಿರುವಂತೆ ನಿಮ್ಮ ಮನೆ, ಮನ ಬೆಳಗುತ್ತಿರಲಿ ಎಂಬ ಸಂದೇಶವನ್ನು ಬರೆದುಕೊಂಡಿದೆ.

ಬಾಹ್ಯಾಕಾಶದಿಂದ ಶುಭಾಶಯ :

ಇದಕ್ಕೂ ಮೊದಲು, ಪ್ರಸ್ತುತ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ನೆಲೆಸಿರುವ ನಾಸಾದ (NASA) ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಅವರು ಅಮೆರಿಕ ಮತ್ತು ಜಗತ್ತಿನಾದ್ಯಂತ ಇರುವ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದರು. ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ. ಅಲ್ಲೇ ದೀಪಾವಳಿ ಆಚರಿಸಿರುವ ಅವರು ಅಮೆರಿಕ ಮತ್ತು ಪ್ರಪಂಚದಾದ್ಯಂತ ಹಬ್ಬ ಆಚರಿಸುವ ಜನರಿಗೆ ದೀಪಾವಳಿ ಶುಭಾಶಯ ಹೇಳಿದ್ದಾರೆ. ಬಾಹ್ಯಾಕಾಶದಿಂದ ರೆಕಾರ್ಡ್ ಮಾಡಿದ ವೀಡಿಯೊ ಸಂದೇಶದಲ್ಲಿ, ವಿಲಿಯಮ್ಸ್ ಭೂಮಿಯಿಂದ, 260 ಮೈಲಿ ಎತ್ತರದಲ್ಲಿ ದೀಪಾವಳಿ ಆಚರಿಸುವ ತನ್ನ ವಿಶಿಷ್ಟ ಅನುಭವವನ್ನು ಹೇಳಿಕೊಂಡರು

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಶುಭಾಶಯಗಳು ಎಂದು ಅವರು ಹೇಳಿದ್ದಾರೆ. ಶ್ವೇತಭವನದಲ್ಲಿ ಮತ್ತು ಪ್ರಪಂಚದಾದ್ಯಂತ ಇಂದು ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಲು ನಾನು ಬಯಸುತ್ತೇನೆ ಎಂದು ವಿಡಿಯೊ ಸಂದೇಶ ಕಳುಹಿಸಿದ್ದಾರೆ.

ವಿಲಿಯಮ್ಸ್ ತನ್ನ ಸಂದೇಶದಲ್ಲಿ ತನ್ನ ಕುಟುಂಬದ ಸಾಂಸ್ಕೃತಿಕ ಬೇರುಗಳನ್ನು ಉಳಿಸಲು ತಮ್ಮ ತಂದೆ ಮಾಡಿರುವ ಪ್ರಯತ್ನಗಳ ಬಗ್ಗೆ ಮಾತನಾಡಿದರು. ದೀಪಾವಳಿ ಮತ್ತು ಇತರ ಮಹತ್ವದ ಭಾರತೀಯ ಹಬ್ಬಗಳನ್ನು ಅವರು ಹೇಗೆ ಬಣ್ಣಿಸಿದ್ದಾರೆ ಎಂದು ಹೇಳಿದರು. ಈ ವರ್ಷ ಬಾಹ್ಯಾಕಾಶ ಕೇಂದ್ರದಲ್ಲಿ ಭೂಮಿಯಿಂದ 260 ಮೈಲಿ ಎತ್ತರದಿಂದ ದೀಪಾವಳಿ ಆಚರಿಸುವ ವಿಶಿಷ್ಟ ಅವಕಾಶ ನನಗೆ ಸಿಕ್ಕಿದೆ. ನನ್ನ ತಂದೆ ದೀಪಾವಳಿ ಮತ್ತು ಇತರ ಭಾರತೀಯ ಹಬ್ಬಗಳ ಬಗ್ಗೆ ನಮಗೆ ಕಲಿಸುವ ಮೂಲಕ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು

ಇದನ್ನೂ ಓದಿ : Deepavali celebration : ಅಮೆರಿಕಾದ ಶ್ವೇತ ಭವನದಲ್ಲಿ ಮೊಳಗಿದ ‘ಓಂ ಜೈ ಜಗದೀಶ ಹರಿ’ ಭಜನೆ

ಆಲ್ಫಾಬೆಟ್ ಮತ್ತು ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಥ್ರೆಡ್‌ನಲ್ಲಿ ದೀಪಾವಳಿಯ ಶುಭಾಶಯವನ್ನು ಕೋರಿದ್ದಾರೆ. ಹಬ್ಬದ ಬಗ್ಗೆ ತಮ್ಮ ಒಲವನ್ನು ಹಂಚಿಕೊಂಡ ಅವರು, “ದೀಪಾವಳಿಯು ವರ್ಷದ ನನ್ನ ನೆಚ್ಚಿನ ಹಬ್ಬಗಳಲ್ಲಿ ಒಂದಾಗಿದೆ, ಮನೆಯಲ್ಲಿ ಖುಷಿ ಹಾಗೂ ಬೆಳಕು ತುಂಬಿರುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ, ಆಪಲ್ ಸಿಇಒ ಟಿಮ್ ಕುಕ್ ಅವರು ಭಾರತೀಯ ಛಾಯಾಗ್ರಾಹಕ ರೋಹಿತ್ ವೋಹ್ರಾ ಅವರು ತೆಗೆದ ಛಾಯಾಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.