Friday, 22nd November 2024

Maharashtra Assembly Elections: ಚುನಾವಣೆ ಹೊತ್ತಲ್ಲೇ ಮುಂಬೈನಲ್ಲಿ 9 ಕೋಟಿ ರೂ. ಮೌಲ್ಯದ ಡಾಲರ್ಸ್‌ ಸೀಜ್‌

Dollars seize

ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ(Maharashtra Assembly Elections) ರಂಗೇರಿದ್ದು, ಇದರ ಬೆನ್ನಲ್ಲೇ ಅಕ್ರಮ ಹಣ ಸಾಗಾಟದ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ದಕ್ಷಿಣ ಮುಂಬೈನಲ್ಲಿ 9 ಕೋಟಿ ರೂಪಾಯಿ ಮೌಲ್ಯದ ಡಾಲರ್‌(Dollars)ಗಳನ್ನು ವಶಪಡಿಸಿಕೊಂಡಿದೆ. ಈ ಘಟನೆ ಕೊಲಾಬಾದಲ್ಲಿ ನಡೆದಿದ್ದು, ಆ ಪ್ರದೇಶದಲ್ಲಿನ ಬ್ಯಾಂಕ್‌ಗೆ ಸೇರಿದ ನಗದು ಎಂದು ವರದಿಯಾಗಿದೆ. ನಗದು ಸಾಗಿಸುವ ಲಾಜಿಸ್ಟಿಕ್ಸ್ ಕಂಪನಿಯು ನಗದು ಸಂಬಂಧಪಟ್ಟ ಬ್ಯಾಂಕ್‌ಗೆ ಸೇರಿದೆ ಎಂದು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವಲ್ಲಿ ತಕ್ಷಣಕ್ಕೆ ವಿಫಲವಾದ ಕಾರಣ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು.

ಸೂಕ್ತ ದಾಖಲೆಗಳನ್ನು ಸಲ್ಲಿಸಿದ ನಂತರ, ನಗದು ಬಿಡುಗಡೆ ಮಾಡಬಹುದು. ಪರಿಶೀಲನೆ ಪೂರ್ಣಗೊಳ್ಳುವವರೆಗೆ, ನಗದು ಕಸ್ಟಮ್ಸ್‌ನಲ್ಲಿ ಇರುತ್ತದೆ. ವಾಹನವು ಮುಂಬೈ ವಿಮಾನ ನಿಲ್ದಾಣದಿಂದ ಹೊರಟು ಕೊಲಾಬಾ ಕಡೆಗೆ ಹೋಗುತ್ತಿತ್ತು. ಕೈವಲ್ಯಧಾಮದ ಬಳಿ ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಚುನಾವಣಾ ಆಯೋಗವು (EC) ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯ ಮತ್ತು ಕೇಂದ್ರ ಅಧಿಕಾರಿಗಳನ್ನು ಒಳಗೊಂಡಿರುವ 5,000 ಕ್ಕೂ ಹೆಚ್ಚು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಿದೆ. ಅಕ್ಟೋಬರ್ 15, 2024 ರಿಂದ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನೀತಿ ಸಂಹಿತೆ ಜಾರಿಯಾದ ಮೊದಲ 15 ದಿನಗಳಲ್ಲಿ ಚುನಾವಣಾ ಆಯೋಗವು 187 ಕೋಟಿ ರೂಪಾಯಿ ಅಕ್ರಮ ನಗದನ್ನು ವಶಪಡಿಸಿಕೊಂಡಿದೆ ಎಂದು ಹೆಚ್ಚುವರಿ ಚುನಾವಣಾ ಆಯುಕ್ತ ಡಾ.ಕಿರಣ್ ಕುಲಕರ್ಣಿ ತಿಳಿಸಿದ್ದಾರೆ. ಚುನಾವಣಾ ಆಯೋಗ ಅಕ್ರಮ ನಗದು, ಮದ್ಯ, ಮಾದಕ ದ್ರವ್ಯಗಳು, ಬೆಲೆಬಾಳುವ ವಸ್ತುಗಳನ್ನು ಸೀಜ್‌ ಮಾಡಿದೆ.

ವಶಪಡಿಸಿಕೊಂಡ ವಸ್ತುಗಳನ್ನು ಕಾನೂನು ವ್ಯವಹಾರಗಳಿಗೆ ಬಳಸಲಾಗಿದೆ ಎಂದು ಸಾಬೀತುಪಡಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾದರೆ, ಆಸ್ತಿಯನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಅಕ್ಟೋಬರ್ 15 ರಿಂದ 29 ರವರೆಗೆ ರಾಜ್ಯಾದ್ಯಂತ ಸಿ-ವಿಜಿಲ್ ಆ್ಯಪ್‌ನಲ್ಲಿ ಒಟ್ಟು 1648 ದೂರುಗಳು ಬಂದಿದ್ದು, ಈ ಪೈಕಿ 1646 ದೂರುಗಳನ್ನು ಚುನಾವಣಾ ಆಯೋಗವು ಪರಿಹರಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ. ಇನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ದಿನಗಣನೆ ಶುರುವಾಗಿದೆ. ನವೆಂಬರ್ 20ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.

ಈ ಸುದ್ದಿಯನ್ನೂ ಓದಿ: Maharashtra Assembly Election: ಮಹಿಳೆಯರಿಗೆ ಜ್ಯೂಸರ್‌ ಮಿಕ್ಸರ್‌ ಫ್ರೀ..ಫ್ರೀ.. ಆಮಿಷವೊಡ್ಡಿದ ಮಹಾರಾಷ್ಟ್ರ ಶಾಸಕನ ವಿರುದ್ಧ ECಗೆ ದೂರು