Friday, 1st November 2024

Murder Case: ಬಿಸಿನೀರು ಚೆಲ್ಲಿದ್ದಕ್ಕೆ ಬಾಲಕಿಯ ಥಳಿಸಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಸಿ ಎಸೆದ ಟೆಕ್ಕಿ ದಂಪತಿ!

techie murder case

ಬೆಂಗಳೂರು: ಕೆಲವೊಮ್ಮೆ ನಿಜಜೀವನದ ಅಪರಾಧ ಸ್ಟೋರಿಗಳು (Crime news) ಸಿನಿಮಾಗಿಂತಲೂ ಬರ್ಬರವಾಗಿರುತ್ತವೆ. ಸಾಮಾನ್ಯರೆನಿಸಿಕೊಂಡ ಮನುಷ್ಯರು ತೋರಿಸುವ ಕ್ರೌರ್ಯ ಭಯಾನಕವಾಗಿರುತ್ತದೆ. ಇದು ಬೆಂಗಳೂರಿನ (Bengaluru news) ಟೆಕ್ಕಿ ದಂಪತಿಯ ಅಂಥದೊಂದು ಕ್ರೈಂ (Bengaluru crime news) ಕಥೆ. ಇವರು ಮೈಮೇಲೆ ಬಿಸಿನೀರು ಚೆಲ್ಲಿದ್ದಕ್ಕೇ ಮನೆಗೆಲಸದ ಬಾಲಕಿಯನ್ನು ಥಳಿಸಿ ಕೊಂದು (Murder case), ಹೆಣವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಸಾಗಿಸಿ ಸೇಲಂನಲ್ಲಿ ರಸ್ತೆ ಬದಿ ಎಸೆದವರು!

ಬೆಂಗಳೂರಲ್ಲಿ ಶುರುವಾದ ಈ ಕ್ರೈಮ್ ಕಥೆ ತಮಿಳುನಾಡಿನ ಸೇಲಂವರೆಗೆ ಹೋಗಿ ಕೊನೆಗೆ ಒಡಿಶಾದಲ್ಲಿ ಅಂತ್ಯವಾಗಿದೆ. ಒಡಿಶಾ ಮೂಲದ ಈ ಐಟಿ ದಂಪತಿ ಕೆಲಸ ಮಾಡ್ತಾ ಇದ್ದದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ. ಹೆಸರು ಅಭಿನೇಶ್ ಹಾಗೂ ಅಶ್ವಿನಿ ಪಟೇಲ್. ಅನಾಥಾಶ್ರಮದಿಂದ ಸಮೀನಾ ಎಂಬ 15 ವರ್ಷದ ಬಾಲಕಿಯನ್ನು ಮನೆಕೆಲಸಕ್ಕೆ ಕರೆತಂದಿದ್ದರು. ಜತೆಗೆ ತಮ್ಮ 5 ವರ್ಷದ ಮಗುವನ್ನು ನೋಡಿಕೊಳ್ಳುವ ಹೊಣೆಯನ್ನೂ ಆಕೆಗೆ ವಹಿಸಿದ್ದರು.

ಆದರೆ, ಈ ದಂಪತಿಯೇ ದೇವರೆಂದು ತಿಳಿದು ಬಂದವಳಿಗೆ ಇವರೇ ಅಕ್ಷರಶಃ ರಾಕ್ಷಸರಾದರು. ಒಂದು ದಿನ ಅಶ್ವಿನಿ ಪಟೇಲ್​ಗೆ ಬಿಸಿ ನೀರು ತಂದು ಕೊಡುವಾಗ ಸಮೀನಾ ಕೈ ಜಾರಿ ಬಿಸಿ ನೀರು ಅಶ್ವಿನಿ ಮೇಲೆ ಬಿದ್ದಿದೆ. ಅಷ್ಟಕ್ಕೇ ಕೋಪಗೊಂಡ ಅಶ್ವಿನಿ ದೊಣ್ಣೆಯಿಂದ ಸಮೀನಾಗೆ ಯದ್ವಾತದ್ವಾ ಹೊಡೆದಿದ್ದಾಳೆ. ಪರಿಣಾಮ ಸಮೀನಾ ನೆಲಕ್ಕೆ ಬಿದ್ದಿದ್ದಾಳೆ. ಪತಿ ಮನೆಗೆ ಬಂದಾಗ ನೋಡಿದರೆ, ಸಮೀನಾ ಸತ್ತಿರೋದು ಗೊತ್ತಾಗಿದೆ.

ಹುಡುಗಿ ಸತ್ತದ್ದು ಗೊತ್ತಾದ ಬಳಿಕ ದಂಪತಿ ಆಕೆಯನ್ನು ವಿವಸ್ತ್ರಗೊಳಿಸಿ ಸೂಟ್​ಕೇಸ್​ಗೆ ತುಂಬಿದ್ದಾರೆ. ತಮಿಳುನಾಡಿದ ಸೇಲಂಗೆ ಹೋಗಿ ಸಂಗಿಕರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸೂಟ್​​ಕೇಸ್​ ಎಸೆದಿದ್ದಾರೆ. ನಂತರ ಒಡಿಶಾಗೆ ಪರಾರಿಯಾಗಿದ್ದರು.

ಸೂಟ್​ಕೇಸ್​ನಲ್ಲಿ ದೊರೆತ ಮೃತದೇಹದ ಬೆನ್ನುಹತ್ತಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಜಾಡು ಹಿಡಿದು ಹೊರಟು, ಒಡಿಶಾದ ಭುವನೇಶ್ವರದಲ್ಲಿ ತಲೆ ಮರೆಸಿಕೊಂಡಿದ್ದ ದಂಪತಿಯ ಮನೆಯ ಬಾಗಿಲು ಬಡಿದಿದ್ದಾರೆ. ಕೊಲೆ ಮಾಡಿದ ದಂಪತಿ ಜೈಲು ಸೇರಿದ್ದಾರೆ. ಅವರ ಐದು ವರ್ಷದ ಮಗು ಕೂಡ ಇದರಿಂದ ಅನಾಥವಾಗಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಬೆಂಗಳೂರಲ್ಲೇ ಚಿಕಿತ್ಸೆ ಪಡೆಯಬೇಕು, ಮೈಸೂರಿಗೆ ಹೋಗುವಂತಿಲ್ಲ ಎಂದ ಕೋರ್ಟ್