Friday, 1st November 2024

Wasim Rizvi : ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ವಕ್ಛ್‌ ಬೋರ್ಡ್‌ ಮಾಜಿ ಅಧ್ಯಕ್ಷನ ಜಾತಿಯೂ ಈಗ ಬದಲು!

Wasim Rizvi

ಲಖನೌ: ಉತ್ತರ ಪ್ರದೇಶದ (UP) ಶಿಯಾ ವಕ್ಛ್‌ ಬೋರ್ಡ್‌ನ (Waqf Board) ಮಾಜಿ ಅಧ್ಯಕ್ಷ ವಾಸಿಂ ರಜ್ವಿ (Wasim Rizvi) ಎರಡು ವರ್ಷಗಳ ಹಿಂದೆ ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ (Converts to Hinduism) ಮತಾಂತರಗೊಂಡಿದ್ದರು. ಇದೀಗ ಅವರು ತಮ್ಮ ಜಾತಿಯನ್ನೂ ಕೂಡ ಬದಲಾಯಿಸಿ ಕೊಂಡಿದ್ದಾರೆ. ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಮಹಂತ್ ನರಸಿಂಹ ಆನಂದ ಸರಸ್ವತಿ ಅವರ ಸಮ್ಮುಖದಲ್ಲಿ ಸಮಾರಂಭವನ್ನು ನಡೆಸಿದ್ದು, ಈಗ ಜಿತೇಂದ್ರ ನಾರಾಯಣ ಸಿಂಗ್ ಸೆಂಗಾರ್ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಕಾಂಗ್ರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಭಾತ್ ಸಿಂಗ್ ಸೆಂಗಾರ್ ಅವರೊಂದಿಗೆ ಹಳೆಯ ಸ್ನೇಹವನ್ನು ಹೊಂದಿದ್ದು, ಅವರನ್ನು ತಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳಲು ಪ್ರಸ್ತಾಪಿಸಿದ್ದರು. ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಪ್ರಭಾತ್ ಸೆಂಗಾರ್ ಅವರ ತಾಯಿ ಯಶವಂತ್ ಕುಮಾರಿ ಸೆಂಗಾರ್ ಅವರನ್ನು ಕಾನೂನು ಅಫಿಡವಿಟ್ ಮೂಲಕ ತನ್ನ ಮಗನಾಗಿ ದತ್ತು ಪಡೆದಿದ್ದಾರೆ. ಇದರಿಂದಾಗಿ ಅವರು ಈ ಉಪನಾಮವನ್ನು ಇಡಲು ಸಾಧ್ಯವಾಯಿತು. ಆದರೆ, ಆಸ್ತಿಯ ಮೇಲೆ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : Love Jihad: ಮುಸ್ಲಿಂ ಯುವಕನ ಲವ್‌ ಜಿಹಾದ್‌ನಿಂದ ಮಗಳನ್ನು ಕಾಪಾಡಿ: ದೇವರಿಗೆ ಪತ್ರ ಬರೆದ ಹಿಂದೂ ಯುವತಿಯ ತಾಯಿ

ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ್ದ ಅವರು “ಇಂದು, ನಾನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಆಯ್ಕೆ ಮಾಡಿದ್ದೇನೆ. ಸನಾತನ ಧರ್ಮವು ಪ್ರಪಂಚದ ಮೊದಲ ಧರ್ಮವಾಗಿದೆ. ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ಇದು ಮಾನವೀಯತೆಯ ನಂಬಿಕೆಯಿಂದ ತುಂಬಿದೆ” ಎಂದು ಹೇಳಿದ್ದರು. ಖುರಾನ್‌ನ 26 ಶ್ಲೋಕಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ ನಂತರ ರಿಜ್ವಿ ಅವರ ವಿರುದ್ಧ ಇಡೀ ಸಮುದಾಯವೇ ತಿರುಗಿ ಬಿದ್ದಿತ್ತು. ರಿಜ್ವಿ ಧರ್ಮದ ವಿರುದ್ಧ “ಆಕ್ಷೇಪಾರ್ಹ ಕಮೆಂಟ್” ಗಾಗಿ ಮುಸ್ಲಿಂ ಧರ್ಮಗುರುಗಳು ಅವರನ್ನು ಇಸ್ಲಾಂನಿಂದ ಹೊರಹಾಕಿದ್ದರು. ನಂತರ ರಜ್ವಿ ಹಿಂದೂ ಧರ್ಮಕ್ಕೆ ಸೇರಿದ್ದರು.

“ಹಿಂದೂ ಆಗಿರುವುದು ಒಂದು ಜೀವನಶೈಲಿಯಾಗಿದೆ, ಯಾರು ಬೇಕಾದರೂ ತಮ್ಮ ಧರ್ಮವನ್ನು ಕಾನೂನು ಮಾರ್ಗದಿಂದ ಸುಲಭವಾಗಿ ಬದಲಾಯಿಸಬಹುದು ಆದರೆ ದೇವಸ್ಥಾನಕ್ಕೆ ಹೋಗುವುದರಿಂದ ಸಂಪೂರ್ಣವಾಗಿ ಹಿಂದೂ ಆಗಲು ಸಾಧ್ಯವಿಲ್ಲ, ಇದಕ್ಕಾಗಿ ಸಂಪೂರ್ಣ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕಾಗಿದೆ” ಎಂದು ಸಮಾರಂಭದ ನಂತರ ಮಾಧ್ಯಮದವರಿಗೆ ತಿಳಿಸಿದ್ದರು.

ಇಂದಿನಿಂದ ನಾನು ಕೇವಲ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇನೆ. ಇತರ ಯಾವುದೇ ಧರ್ಮಗಳಲ್ಲಿ ಹಿಂದೂ ಧರ್ಮದಷ್ಟು ಗುಣಗಳಿಲ್ಲ ಎಂದು ಹೇಳಿದರು. ‘ಮುಸ್ಲಿಮರು ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವುದಿಲ್ಲ, ಹಿಂದೂ ಧರ್ಮದ ವಿರುದ್ಧ ಹಾಗೂ ಹಿಂದೂಗಳನ್ನು ಸೋಲಿಸಲು ಮತ ಹಾಕುತ್ತಾರೆ ಎಂದಿದ್ದಾರೆ. ಈ ಹಿಂದೆ, ಅವರು ತಮ್ಮ ಮರಣದ ನಂತರ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.