Saturday, 23rd November 2024

Health Tips: ದೀಪಾವಳಿ ಸಿಹಿ ಭೋಜನದ ಬಳಿಕ ನಮ್ಮ ಶರೀರವನ್ನು ಮೊದಲ ಸ್ಥಿತಿಗೆ ತರುವುದು ಹೇಗೆ?

Health Tips

ಒಂದೇ ಸಮನೆ ಕೆಲಸವನ್ನು ಎಷ್ಟು ಹೊತ್ತು ಮಾಡಬಹುದು? ಸತತ ಕೆಲಸ ಮಾಡುವುದರಿಂದ ದಣಿವಾಗುವುದು ಸಹಜ ತಾನೇ? ಹಾಗೆ ದೇಹ, ಮನಸ್ಸು (Health Tips) ಆಯಾಸಗೊಂಡ ಮೇಲೆ ಯಾವ ಕೆಲಸ ಮಾಡಿದರೂ ಹೆಚ್ಚಿನ ಫಲ ದೊರೆಯುವುದಿಲ್ಲ ಅಲ್ಲವೇ? ಕಳೆದ ಹಲವಾರು ದಿನಗಳಿಂದ ಸಾಲುಗಟ್ಟಿ ಬರುತ್ತಿರುವ ಹಬ್ಬಗಳ ಜಾತ್ರೆ ಮುಗಿಯುವಷ್ಟರಲ್ಲಿ ನಮ್ಮ ಜೀರ್ಣಾಂಗಗಳ ಅವಸ್ಥೆಯೂ ಅದೇ ಆಗಿರುತ್ತದೆ. ಗಿರಣಿಯಂತೆ ಸತತ ಕಡೆದೂ ಕಡೆದು ಸುಸ್ತಾಗಿರುತ್ತವೆ. ಘಟೋತ್ಘಚನ ಮಾಯಾ ಬಜಾರಿನಂತೆ ತರಹೇವಾರಿ ತಿನಿಸುಗಳ ಗುಡ್ಡೆಯನ್ನೇ ಈ ಹಬ್ಬಗಳ ಎಡೆಯಲ್ಲಿ ಹೊಟ್ಟೆಗೆ ಸೇರಿಸಿರುತ್ತೇವೆ ನಾವು. ಅದಷ್ಟನ್ನೂ ಕರಗಿಸುವ ಹೊಣೆಯನ್ನು ಹೊತ್ತ ಹೊಟ್ಟೆಯ ಪರಿಸ್ಥಿತಿಯ ಬಗ್ಗೆ ಇನ್ನೀಗ ನಾವು ಯೋಚಿಸಬೇಡವೇ?

ದೀಪಾವಳಿಯ ಅನಂತರ ನಮ್ಮ ದಿನಚರಿಗೆ ಮರಳಿ, ಜೀರ್ಣಾಂಗಗಳಿಗೂ ದಿನಚರಿಗೆ ಮರಳಲು ನೆರವಾಗುವುದು ಮುಖ್ಯ. ಹಬ್ಬದ ಬಳಿಕ ಶರೀರವನ್ನು ಮೊದಲಿನ ಸ್ಥಿತಿಗೆ ತರುವಂತೆ ಡಿಟಾಕ್ಸ್‌ ಮಾಡುವುದು ಹೇಗೆ ಗೊತ್ತಾ?

Health Tips

ನೀರು-ನಾರು ಇರಲಿ

ದಿನಕ್ಕೆ ಸುಮಾರು 3 ಲೀ.ನಷ್ಟು ನೀರನ್ನು ಕುಡಿಯುವುದು ಅಗತ್ಯ. ಇದರಿಂದ ಜೀರ್ಣಾಂಗಗಳನ್ನು ಶುಚಿ ಮಾಡಲು ಮತ್ತು ಆಹಾರವನ್ನು ಸರಿಯಾಗಿ ಪಚನ ಮಾಡಲು ಅನುಕೂಲವಾಗುತ್ತದೆ. ಜೊತೆಗೆ, ಕರುಳಿನ ಆರೋಗ್ಯ ರಕ್ಷಣೆಗೆ ಸಾಕಷ್ಟು ನೀರು ಕುಡಿಯುವುದು ಮಹತ್ವದ್ದು. ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳ ನಿವಾರಣೆಗೂ ನೀರು ಕುಡಿಯುವುದು ಮುಖ್ಯ. ತಿಂದಿದ್ದನ್ನು ನೆನಪಿಸಿಕೊಳ್ಳುತ್ತಾ ನೀರು ಕುಡಿಯೋಣ!

ನೀರಿನಷ್ಟೇ ಮುಖ್ಯವಾದ ಇನ್ನೊಂದು ಆಹಾರದಲ್ಲಿ ಇರಬೇಕಾದದ್ದು ನಾರಿನಂಶ. ಮಲಬದ್ಧತೆಗೆ ಎಡೆಮಾಡದೆ, ಜೀರ್ಣಾಂಗದ ದಕ್ಷತೆಯನ್ನು ಹೆಚ್ಚಿಸಬೇಕು ಎಂದಾದರೆ ಆಹಾರದಲ್ಲಿ ನಾರು ಅಗತ್ಯ. ದೇಹದಲ್ಲಿ ಕರಗಬಲ್ಲ ಮತ್ತು ಕರಗಲಾರದ- ಈ ಎರಡೂ ರೀತಿಯ ನಾರುಗಳು ನಮಗೆ ಬೇಕು. ಕಾಳುಗಳು, ಓಟ್ಸ್‌, ತರಕಾರಿಗಳು ಮುಂತಾದವುಗಳಲ್ಲಿ ಕರಗಬಲ್ಲ ನಾರು ಇದ್ದರೆ ಇಡೀ ಧಾನ್ಯಗಳಲ್ಲಿ ಕರಗಲಾರದ ನಾರು ಹೆಚ್ಚಿರುತ್ತದೆ. ತಿಂದಿದ್ದು ಹೊರಗೆ ಹೋಗಲೂ ಬೇಕಲ್ಲವೇ?

ಡಿಟಾಕ್ಸ್‌ ಪೇಯಗಳು

ದೇಹದಲ್ಲಿ ಜಮೆಯಾಗಿರುವ ಬೇಡದ ಅಂಶಗಳನ್ನು ಹೊರಹಾಕಿ, ಜೀರ್ಣಕ್ರಿಯೆಯನ್ನು ಸರಿ ಮಾಡಿ, ಚಯಾಪಚಯವನ್ನು ಹೆಚ್ಚಿಸುವಂಥ ಪೇಯಗಳಿವು. ಇವುಗಳನ್ನು ಮೂರು ಹೊತ್ತಿನ ಆಹಾರಗಳಿಗೆ ಸರಿಯಾಗಿ ಹೊಂದಿಸಿಕೊಂಡರೆ ತೂಕ ಇಳಿಸುವುದಕ್ಕೆ ಇನ್ನೂ ಅನುಕೂಲವಾಗುತ್ತದೆ. ಅಂದರೆ, ಬೆಳಗಿನ ತಿಂಡಿಯ ಅನಂತರ ಕೆಲವು ಹನಿ ನಿಂಬೆ ರಸ ಹಾಕಿದ ಸೋಂಪು ನೆನೆಸಿದ ನೀರು. ಸೋಂಪು ಜೀರ್ಣಕ್ರಿಯೆಗೆ ನೆರವಾದರೆ, ನಿಂಬೆ ರಸ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ

ಮಧ್ಯಾಹ್ನದ ಊಟದ ಬಳಿಕ ನಿಂಬೆ ರಸ ಬೆರೆಸಿದ ಅಜವಾನದ ನೀರನ್ನು ಸೇವಿಸಬಹುದು. ಅಜವಾನ ಅಥವಾ ಓಂಕಾಳು ಸಹ ಜೀರ್ಣಕ್ರಿಯೆಗೆ ಸಹಕಾರಿ. ರಾತ್ರಿಯೂಟದ ಬಳಿಕ ಕ್ಯಾಮೊಮೈಲ್‌ ಚಹ ಅಥವಾ ಯಾವುದೇ ರೀತಿಯ ಗ್ರೀನ್‌ ಟೀ ಒಳ್ಳೆಯ ಆಯ್ಕೆ. ಹೀಗೆ ಡಿಟಾಕ್ಸ್‌ ಪೇಯಗಳು ತೂಕ ಇಳಿಸುವ ಮತ್ತು ಜಠರ ಶುಚಿ ಮಾಡುವ ಕೆಲಸದಲ್ಲಿ ನಮ್ಮ ಕೈಜೋಡಿಸಬಲ್ಲವು.

ಪ್ರೊಬಯಾಟಿಕ್

ಜೀರ್ಣಾಂಗಗಳಲ್ಲಿ ಇರಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳನ್ನು ದೇಹಕ್ಕೆ ಸೇರಿಸುವಂಥ ಆಹಾರಗಳೆಂದರೆ ಪ್ರೊಬಯಾಟಿಕ್‌ಗಳು. ಹುದುಗು ಬಂದಂಥ ಯಾವುದೇ ಉತ್ತಮ ತಿನಿಸುಗಳು ಇದಕ್ಕೆ ಉದಾಹರಣೆ. ಅಂದರೆ, ಮೊಸರು, ಮಜ್ಜಿಗೆ, ದೋಸೆ ಅಥವಾ ಇಡ್ಲಿ ಹಿಟ್ಟು (ಹಸಿಯಾಗಿ ತಿನ್ನದಿದ್ದರೂ ಬೇಯಿಸಬಹುದಲ್ಲ), ಮೊಳಕೆ ಕಾಳುಗಳು ಮುಂತಾದವು. ಇವುಗಳು ಸತ್ವಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವು ನೀಡುವುದು ಮಾತ್ರವಲ್ಲ, ಪ್ರತಿರೋಧಕ ಶಕ್ತಿಯನ್ನೂ ಇವು ಹೆಚ್ಚಿಸುತ್ತವೆ.

Health Tips

ವ್ಯಾಯಾಮ

ಇದನ್ನಂತೂ ಬಿಡುವ ಹಾಗೆಯೇ ಇಲ್ಲ. ಇವು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ. ಜೊತೆಗೆ, ಜೀರ್ಣಾಂಗದ ಮಾಂಸಖಂಡಗಳನ್ನು ಸಡಿಲಗೊಳಿಸಿ, ಪಚನಕ್ರಿಯೆಯನ್ನು ಚುರುಕಾಗಿಸುತ್ತವೆ ಮತ್ತು ಮಲಬದ್ಧತೆ ನಿವಾರಿಸುತ್ತವೆ. ಇದಲ್ಲದೆ ಜಠರದಲ್ಲಿ ಇರುವಂಥ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆ ವೃದ್ಧಿಸುವಲ್ಲಿ ವ್ಯಾಯಾಮದ ಪಾತ್ರವೂ ಇದೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ದೇವರ ತಲೆಯ ಮೇಲೆ ಹೂವು ಹಾಕಿದಷ್ಟೇ ಶ್ರದ್ಧೆಯಿಂದ ವ್ಯಾಯಾಮ ಮಾಡಿದರೆ ಬರಬಹುದಾದ ಒಂದಿಷ್ಟು ಸಮಸ್ಯೆಗಳನ್ನು ಮುಂಚೆಯೇ ತಡೆಯಬಹುದು.

Brushing Tips: ಹಲ್ಲು ಕ್ಲೀನಾಗಲಿ ಎಂದು ಸಿಕ್ಕಾಪಟ್ಟೆ ಬ್ರಷ್ ಮಾಡುತ್ತಿದ್ದೀರಾ? ಹುಷಾರು!

ಸಂಸ್ಕರಿತ ಆಹಾರಗಳಿಂದ ದೂರ

ಹಬ್ಬದ ಹೆಸರಿನಲ್ಲಿ ಹಲವು ರೀತಿಯ ಸಿಹಿ ತಿಂಡಿಗಳು ಮತ್ತು ಸಂಸ್ಕರಿತ ಆಹಾರಗಳು ನಮ್ಮ ಹೊಟ್ಟೆ ಸೇರಿರುತ್ತವೆ. ಘಮ್ಮೆನ್ನುವ ಕರಿದ ಕುರುಕಲುಗಳು, ತುಪ್ಪ, ಸಕ್ಕರೆಭರಿತ ಸಿಹಿಗಳು ತಿನ್ನುವಾಗ ನಾಲಿಗೆಗೆ ಸಂತೋಷವೇ ಹೌದಾದರೂ ಜಠರ ಮತ್ತು ಕರುಳಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಶಿಸುತ್ತವೆ. ಹೊಟ್ಟೆಗೆ ನಾವೇನು ಕೊಡುತ್ತೇವೆಯೊ ಅಂಥದ್ದೇ ಬ್ಯಾಕ್ಟೀರಿಯಾಗಳು ಅಲ್ಲಿ ಬೆಳೆಯುತ್ತವೆ. ಒಳ್ಳೆಯದನ್ನು ನೀಡಿದರೆ ಒಳ್ಳೆಯ ಬ್ಯಾಕ್ಟೀರಿಯಗಳು, ಕೆಟ್ಟದ್ದನ್ನು ನೀಡಿದರೆ…! ಹಾಗಾಗಿ ಸಂಸ್ಕರಿತ ಆಹಾರಗಳಿಂದ ದೂರವಾಗುವುದು ಅಗತ್ಯ. ತಿಂದಿದ್ದು ಮುಗಿದರೆ, ಇನ್ನೀಗ ಎಲ್ಲವನ್ನೂ ಕರಗಿಸಿ, ಹೊಟ್ಟೆಯನ್ನು ಸರಿಮಾಡಿಕೊಳ್ಳೋಣ.