Friday, 15th November 2024

Air Pollution: ದೀಪಾವಳಿ ಆಚರಣೆ ಬಳಿಕ ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ನಗರ

Air Pollution

ನವದೆಹಲಿ: ದೀಪಾವಳಿಯ(Deepavali) ಮೊದಲೇ ದೆಹಲಿಯ ಗಾಳಿಯ (Delhi Air pollution) ಗುಣಮಟ್ಟ ಅತ್ಯಂತ ಕೆಟ್ಟದಾಗಿದೆ (Air Pollution) ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board) ಎಚ್ಚರಿಕೆ ನೀಡಿತ್ತು. ಇದೀಗ ದೀಪಾವಳಿ ಆಚರಣೆಯ ಒಂದು ದಿನದ ಬಳಿಕ ಗಾಳಿಯ ಗುಣಮಟ್ಟ (Air Quality Index) ಅತ್ಯಂತ ಅಪಾಯಕಾರಿಯಾಗಿದೆ ಎಂದು ವಾಯು ಗುಣಮಟ್ಟ ಸೂಚ್ಯಂಕ ಹೇಳಿದೆ.

ದೀಪಾವಳಿ ಆಚರಣೆಯ ಒಂದು ದಿನದ ಬಳಿಕ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರವಾಗಿದೆ. ಹಬ್ಬದ ಆಚರಣೆಗಳು ಇಲ್ಲಿನ ಗಾಳಿಯ ಗುಣಮಟ್ಟವನ್ನು ಅಪಾಯಕಾರಿ ಮಟ್ಟಕ್ಕೆ ತಳ್ಳಿದೆ. ನವೆಂಬರ್ 1ರಂದು ಶುಕ್ರವಾರ ಬೆಳಗ್ಗೆ ದೆಹಲಿಯ ಗಾಳಿಯು ಅತ್ಯಂತ ಕಲುಷಿತವಾಗಿತ್ತು ಎಂದು ಸ್ವಿಸ್ ಸಂಸ್ಥೆ ವಾಯು ಗುಣಮಟ್ಟ ಸೂಚ್ಯಂಕ ವರದಿ ತಿಳಿಸಿದೆ.

ದೆಹಲಿಯಲ್ಲಿ ಪಟಾಕಿಗಳ ಬಳಕೆಗೆ ಸಂಪೂರ್ಣ ನಿಷೇಧವಿದ್ದರೂ ಅನೇಕರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಇದು ನಗರದಲ್ಲಿ ಆವರಿಸಿದ್ದ ದಟ್ಟವಾದ ಹೊಗೆಯನ್ನು ಹೆಚ್ಚಿಸಿದೆ. ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ ಅಥವಾ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಕ್ಯೂಐ ಪ್ರಕಾರ ಆನಂದ್ ವಿಹಾರ್ ನಿಲ್ದಾಣದಲ್ಲಿ ಬೆಳಗ್ಗೆ 10 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ 388 ತಲುಪಿದ್ದು, ಇದನ್ನು “ಅತ್ಯಂತ ಕಳಪೆ” ಎಂದು ಹೇಳಲಾಗಿದೆ. ದೆಹಲಿಯ ವಾಯುಗುಣ ಮಟ್ಟ ಸ್ಥಳೀಯ ನಿವಾಸಿಗಳ ಆರೋಗ್ಯದ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.

ವಾಯು ಗುಣಮಟ್ಟ ಸೂಚ್ಯಂಕ ಪ್ರಕಾರ ವಿಶ್ವದಲ್ಲೇ ಮಾಲಿನ್ಯ ಶ್ರೇಯಾಂಕದಲ್ಲಿ ನವೆಂಬರ್ 1ರಂದು ಶುಕ್ರವಾರ ದೆಹಲಿ ಮೊದಲ ಸ್ಥಾನದಲ್ಲಿತ್ತು.

Air Pollution

ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯವನ್ನು ತಡೆಗಟ್ಟಲು ದೆಹಲಿ ಸರ್ಕಾರವು ದೀಪಾವಳಿಯ ಸಮಯದಲ್ಲಿ ಪಟಾಕಿ ನಿಷೇಧವನ್ನು ಜಾರಿಗೊಳಿಸಿದ್ದರೂ, ಇದರ ಪಾಲನೆಯನ್ನು ನಿರ್ಲಕ್ಷಿಸಲಾಗಿದೆ. ದೆಹಲಿಯ ಹೆಚ್ಚಿನ ಪ್ರದೇಶಗಳಲ್ಲಿ ವಾಯುಗುಣ ಮಟ್ಟ 350ಕ್ಕಿಂತ ಹೆಚ್ಚಾಗಿತ್ತು. ಅಯಾನಗರದಲ್ಲಿ 352, ಜಹಾಂಗೀರ್ಪುರಿಯಲ್ಲಿ 390 ಮತ್ತು ದ್ವಾರಕಾದಲ್ಲಿ 376 ತಲುಪಿತ್ತು.

ಬಹುತೇಕ ಎಲ್ಲ ಪ್ರದೇಶಗಳಲ್ಲೂ ವಾಯು ಗುಣಮಟ್ಟ ‘ಅತ್ಯಂತ ಕಳಪೆ’ ಎಂದು ವರ್ಗೀಕರಿಸಲಾಗಿದ್ದು, ಇದು ಗಂಭೀರವಾದ ಆರೋಗ್ಯ ಅಪಾಯಗಳ ಸೂಚನೆಯನ್ನು ನೀಡಿದೆ. ವಾಯು ಮಾಲಿನ್ಯ ಸಮಸ್ಯೆ ದೆಹಲಿಯಲ್ಲಿ ಮಾತ್ರವಲ್ಲ ಚೆನ್ನೈ, ಮುಂಬೈನಂತಹ ನಗರಗಳಲ್ಲೂ ವಾಯು ಗಣಮಟ್ಟ ಅತ್ಯಂತ ಕಳಪೆಯಾಗಿದೆ. ಒಂದೆಡೆ ಪಟಾಕಿಗಳಿಂದ ಮಾಲಿನ್ಯ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಸಮೀಪದ ರಾಜ್ಯಗಳಿಂದ ಬೆಳೆ ಸುಡುವುದು, ಚಳಿಗಾಲದ ಆರಂಭದಲ್ಲೇ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.

NASA: ಅದ್ಬುತ ಫೊಟೋ ಹಂಚಿಕೊಂಡು ದೀಪಾವಳಿ ಶುಭಾಶಯ ಕೋರಿದ ನಾಸಾ; ಈ ಚಿತ್ರದ ವಿಶೇಷತೆ ಏನ್‌ ಗೊತ್ತಾ?

ವಾಯು ಮಾಲಿನ್ಯ ಸೂಚ್ಯಂಕದ ಪ್ರಕಾರ ವಿಶ್ವದ ಪ್ರಮುಖ ಈ ಹತ್ತು ನಗರಗಳು ಅತ್ಯಂತ ಕಲುಷಿತ ಗಾಳಿಯನ್ನು ಹೊಂದಿವೆ. ಅದರಲ್ಲಿ ಭಾರತದ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಲಾಹೋರ್, ಚೀನಾದ ಬೀಜಿಂಗ್, ಬಾಂಗ್ಲಾದೇಶದ ಢಾಕಾ, ಚೀನಾದ ವುಹಾನ್, ಭಾರತದ ಮುಂಬೈ, ನೇಪಾಳದ ಕಠ್ಮಂಡು, ಇರಾಕ್ ನ ಬಾಗ್ದಾದ್, ಯುನೈಟೆಡ್ ಅರಬ್ ಎಮಿರೇಟ್ಸ್‌, ದುಬೈ, ಪಾಕಿಸ್ತಾನದ ಕರಾಚಿ ಕ್ರಮವಾಗಿ ಸ್ಥಾನ ಗಳಿಸಿದೆ.