ಬೆಳಕು, ದೀಪಗಳ ಬಗ್ಗೆ ನಮ್ಮ ಕುತೂಹಲ ಎಂದೂ ಮುಗಿಯದ್ದು. ಅದರಲ್ಲೂ ಸ್ವಭಾವತಃ ಕುತೂಹಲಿಗಳಾದ ಮಕ್ಕಳಿಗೆ ದೀಪ, ಪಟಾಕಿ, ನೆಲಚಕ್ರ, ನಕ್ಷತ್ರ ಕಡ್ಡಿಗಳ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲವಿರುತ್ತದೆ. ಅದಕ್ಕಾಗಿಯೇ ದೀಪಾವಳಿಯಲ್ಲಿ (Deepavali Safety) ಮಕ್ಕಳು ಸುಟ್ಟುಕೊಂಡು ಅನಾಹುತ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು.
ಹಬ್ಬದ ಸಿಹಿ ಹೋಗಿ ಕಹಿ ನೆನಪುಗಳು ಉಳಿಯದಂತೆ ಆಗಬೇಕೆಂದರೆ ಕೆಲವು ಮುನ್ನೆಚ್ಚರಿಕೆಯನ್ನು ಪಾಲಕರು ತೆಗೆದುಕೊಳ್ಳಬೇಕಾದ್ದು ಅನಿವಾರ್ಯ. ಇದಲ್ಲದೆ ಪಟಾಕಿಯ ಹೊಗೆಯಿಂದ ಪುಟಾಣಿಗಳು ಅಲರ್ಜಿಗೆ ತುತ್ತಾಗಬಹುದು. ದೀಪಾವಳಿಯ ದಿನಗಳಲ್ಲಿ ಮಕ್ಕಳಿಗೆ ಆಗಬಹುದಾದ ಅಪಾಯಗಳೇನು? ಇಂಥದ್ದನ್ನು ತಪ್ಪಿಸುವುದು ಹೇಗೆ? ಹೆತ್ತವರು ಮಾಡಬೇಕಾದ ಮುಂಜಾಗ್ರತೆಗಳೇನು?
ಸುಟ್ಟ ಗಾಯಗಳು
ಹಣತೆ, ಮೋಂಬತ್ತಿ, ಅಲಂಕಾರಿಕ ದೀಪಗಳು, ಪಟಾಕಿ ಹಚ್ಚುವುದಕ್ಕೆಂದು ಇರಿಸಿಕೊಳ್ಳುವ ನಕ್ಷತ್ರ ಕಡ್ಡಿ, ಗಂಧದ ಕಡ್ಡಿಗಳಂಥ ಯಾವುದರಿಂದಲೂ ಮಕ್ಕಳಿಗೆ ಸುಟ್ಟ ಗಾಯಗಳು ಸಂಭವಿಸಬಹುದು. ಅದರಲ್ಲೂ ಹೂಕುಂಡ, ನೆಲಚಕ್ರದಂಥವು ಇಲ್ಲವೇ ಯಾವುದೇ ಪಟಾಕಿಗಳ ಸಿಡಿತದಿಂದ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಬಹುದು. ಅಂಗವೈಕಲ್ಯದಿಂದ ಹಿಡಿದ ಯಾವುದೇ ರೀತಿಯ ಅಪಾಯವಾಗುವುದನ್ನು ತಳ್ಳಿಹಾಕುವಂತಿಲ್ಲ. ತೀರಾ ಹತ್ತಿರದಿಂದ ಪಟಾಕಿ ಸಿಡಿಯುವ ಶಬ್ದಗಳಿಂದ ಕಿವಿಗೆ ಅಪಾಯ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುವುದು ಅಗತ್ಯ.
ಅಲರ್ಜಿಗಳು
ಪಟಾಕಿಗಳಿಂದ ಹೊರಬರುವ ರಾಸಾಯನಿಕ ಹೊಗೆಯಿಂದ ಎಂಥವರಿಗೂ ಅಪಾಯ. ಕಣ್ಣುರಿ, ಕಣ್ಣು ಕೆಂಪಾಗುವುದು, ಚರ್ಮದ ಅಲರ್ಜಿ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳು ಕಾಣಬಹುದು. ಅದರಲ್ಲೂ ಕೆಮ್ಮು, ನೆಗಡಿ, ಅಸ್ತಮಾದಂಥ ಸಮಸ್ಯೆ ಈಗಾಗಲೇ ಇರುವವರಿಗೆ, ಮುಖ್ಯವಾಗಿ ಮಕ್ಕಳಿಗೆ, ಇದರಿಂದ ಅತಿ ಹೆಚ್ಚಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸಮಸ್ಯೆ ಇಲ್ಲದವರಿಗೂ ಇವೆಲ್ಲ ಕಂಡುಬಂದರೆ ಅಚ್ಚರಿಪಡಬೇಕಿಲ್ಲ. ಬಣ್ಣದ ರಂಗೋಲಿಗಳನ್ನು ಬಳಸುವುದರಿಂದ ಚರ್ಮಕ್ಕೆ ಅಲರ್ಜಿಯಾದ ಉದಾಹರಣೆಗಳಿವೆ.
ಜೀರ್ಣಾಂಗಗಳ ಸಮಸ್ಯೆ
ದೀಪಾವಳಿಯ ಹೆಸರಿನಲ್ಲಿ ಬಹಳಷ್ಟು ಬಗೆಯ ತಿನಿಸುಗಳು ಹೊಟ್ಟೆ ಸೇರುತ್ತವೆ. ಅದರಲ್ಲೂ ಅಂಗಡಿಗಳಿಂದ ಕೊಂಡು ತಂದ ಮಿಠಾಯಿಗಳಲ್ಲಿ ಏನೇನೆಲ್ಲ ಸೇರಿಸಲಾಗುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ. ಕೃತಕ ಬಣ್ಣಗಳು, ಹಾನಿಕಾರಕ ಜಿಡ್ಡು, ಅಲಂಕಾರಕ್ಕೆ ಉಪಯೋಗಿಸಿದ ವಸ್ತುಗಳು ಅಥವಾ ಇನ್ನಾವುದರಿಂದಲೋ ಕಲಬೆರಕೆ ಮಾಡುವ ಸಾಧ್ಯತೆಯಿದೆ. ಶುದ್ಧತೆಯನ್ನು ಕಡೆಗಣಿಸುವುದು ಹೊಸದೇನಲ್ಲ. ದೀಪಾವಳಿಯ ದಿನಗಳಲ್ಲಿ ಮಿಠಾಯಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆಂಬ ಕಾರಣದಿಂದ ತಮ್ಮ ಲಾಭವನ್ನೂ ಹೆಚ್ಚಿಸಿಕೊಳ್ಳಲು ಇಂಥವನ್ನೆಲ್ಲ ಮಾಡಲಾಗುತ್ತದೆ. ಹೆತ್ತವರು ಈ ಬಗ್ಗೆ ಜಾಗ್ರತೆ ಮಾಡದಿದ್ದರೆ, ಮಕ್ಕಳಲ್ಲಿ ಅಲರ್ಜಿಗಳು, ವಾಂತಿ, ಭೇದಿ, ವಿಷಾಹಾರದ ತೊಂದರೆಗಳು ವಕ್ಕರಿಸಬಹುದು.
ತಡೆ ಹೇಗೆ?
ಬೆಂಕಿ, ದೀಪ, ಪಟಾಕಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ. ದಾರಿಯುದ್ದಕ್ಕೂ ಹಣತೆಗಳನ್ನು ಇರಿಸುವ ಉದ್ದೇಶವಿದ್ದರೆ, ಅಲ್ಲಿ ಓಡುವುದು, ಆಡುವುದು ಕೂಡದು ಎಂದು ಮಕ್ಕಳಿಗೆ ಕಟ್ಟುನಿಟ್ಟು ಮಾಡಿ.
ದೀಪ, ಪಟಾಕಿಗಳ ಬಳಿ ಮಕ್ಕಳಿರುವಾಗ ಯಾರಾದರೂ ದೊಡ್ಡವರು ಅವರ ಬಳಿ ಇರಲೇಬೇಕೆಂಬ ನಿಯಮವನ್ನು ನಿಮಗೆ ನೀವೇ ಹಾಕಿಕೊಳ್ಳಿ. ದಾರಿ ಬದಿಯ ಅಥವಾ ಅಪರಿಚಿತ ಮಾರಾಟಗಾರರಿಂದ ಪಟಾಕಿಗಳನ್ನು ಖರೀದಿಸಬೇಡಿ. ಪರವಾನಗಿ ಇರುವಂಥ ಪಟಾಕಿ ಮಾರಾಟಗಾರರಿಂದ ಆದಷ್ಟೂ ಹಸಿರು ಪಟಾಕಿಗಳನ್ನು ಖರೀದಿಸಿ. ದೀಪಾವಳಿ ಹಬ್ಬವು ನಿಮಗೆ ಮತ್ತು ಮಕ್ಕಳಿಗೆ ಮಾತ್ರವಲ್ಲ, ನಾವು ಬದುಕುವ ಪರಿಸರಕ್ಕೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಹಾನಿ ಮಾಡದಂತೆ ಕಾಪಾಡುವುದು ನಮ್ಮೆಲ್ಲರ ಹೊಣೆ.
ರಂಗೋಲಿ
ದೀಪಾವಳಿಯಲ್ಲಿ ಸುಂದರ ರಂಗೋಲಿಗಳನ್ನು ಬಿಡಿಸುವ ಪರಿಪಾಠ ಹಲವೆಡೆಗಳಲ್ಲಿದೆ. ಇದು ಸೃಜನಶೀಲ ಮಾಧ್ಯಮವಾಗಿ ಚಾಲ್ತಿಯಲ್ಲಿದ್ದು, ಮಕ್ಕಳನ್ನೂ ರಂಗೋಲಿ ಕಲಿಯಲು ಪ್ರೋತ್ಸಾಹಿಸಬಹುದು. ಆದರೆ ಇದಕ್ಕಾಗಿ ರಂಗೋಲಿಗಳನ್ನು ತರುವಾಗ ಬಣ್ಣದ ಬಗ್ಗೆ ಎಚ್ಚರ ವಹಿಸಿ. ಆದಷ್ಟೂ ನೈಸರ್ಗಿಕ ಬಣ್ಣಗಳಿಗೆ ಆದ್ಯತೆ ನೀಡಿ. ಇದರಿಂದ ಮಕ್ಕಳ ಎಳೆಯ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ರಂಗೋಲಿ ಬಿಡಿಸುವಾಗ ಮುಖ ಮುಟ್ಟಿಕೊಳ್ಳುವುದು, ಕಣ್ಣುಜ್ಜುವುದನ್ನು ಮಾಡಬಾರದೆಂದು ತಿಳಿ ಹೇಳಿ.
Deepavali 2024: ದೀಪಾವಳಿ ಪಟಾಕಿಯಿಂದ ಉಂಟಾಗುವ ಉಸಿರಾಟ ಸಮಸ್ಯೆ ಪರಿಹಾರಕ್ಕೆ ಅಸ್ತಮಾ ರೋಗಿಗಳು ಈ ಸಲಹೆ ಅನುಸರಿಸಿ
ನೀವು ಸಿದ್ಧರಾಗಿರಿ
ಪಟಾಕಿ ಹೊಡೆಯುವಾಗ ಒಂದು ದೊಡ್ಡ ಬಕೆಟ್ ನೀರು ಮತ್ತು ಕೊಂಚ ಮರಳನ್ನು ಪಕ್ಕದಲ್ಲಿ ಇರಿಸಿಕೊಂಡಿರಿ. ಜೊತೆಗೆ ಮನೆಯಲ್ಲಿ ತುರ್ತುಚಿಕಿತ್ಸೆಗೆ ಬೇಕಾದಂಥ ಬ್ಯಾಂಡೇಡ್, ಸುಟ್ಟಗಾಯದ ಕ್ರೀಮು, ಆಂಟಿಸೆಪ್ಟಿಕ್ ಔಷಧಿಗಳನ್ನು ಇರಿಸಿಕೊಳ್ಳಿ. ಇವುಗಳನ್ನು ಹೇಗೆ ಬಳಸಬೇಕು, ಸುಟ್ಟಾಗ ಏನು ಮಾಡಬೇಕು- ಏನು ಮಾಡಬಾರದು ಎಂಬ ಮಾಹಿತಿಯನ್ನು ಮೊದಲಿಗೆ ನೀವು ತಿಳಿದುಕೊಳ್ಳಿ. ಅಪಾಯದ ಸಂದರ್ಭಗಳಲ್ಲಿ ತಕ್ಷಣವೇ ತುರ್ತು ಚಿಕಿತ್ಸೆ ನೀಡುವುದರಿಂದ ಹೆಚ್ಚಿನ ಅನಾಹುತವನ್ನು ತಪ್ಪಿಸಲು ಸಾಧ್ಯವಿದೆ.