Friday, 1st November 2024

Indian Railways: ಕೊಳಕು ಶೌಚಾಲಯ, ಕೆಟ್ಟ ಎಸಿ; ರೈಲ್ವೆ ಪ್ರಯಾಣಿಕನಿಗೆ 30,000 ರೂ. ಪಾವತಿಸಲು ಆದೇಶ

Indian Railways

ರೈಲಿನ (Indian Railways) ಕೊಳಕು ಶೌಚಾಲಯದಿಂದಾಗಿ (Dirty Toilet)ತೊಂದರೆ ಅನುಭವಿಸಿದ ತಿರುಪತಿಯಿಂದ (tirupati) ವೈಜಾಗ್‌ನ ದುವ್ವಾಡಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ 30,000 ರೂ. ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ಆಯೋಗ (Visakhapatnam district consumer commission) ಭಾರತೀಯ ರೈಲ್ವೆಗೆ ಆದೇಶಿಸಿದೆ.

ರೈಲಿನಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ 55 ವರ್ಷದ ವ್ಯಕ್ತಿಯೊಬ್ಬರು ತೀವ್ರ ತೊಂದರೆ ಅನುಭವಿಸಿದ್ದು, ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಆಯೋಗ ಅವರಿಗೆ ಪರಿಹಾರ ನೀಡಲು ದಕ್ಷಿಣ ಮಧ್ಯ ರೈಲ್ವೆಗೆ (SCR) ನಿರ್ದೇಶನ ನೀಡಿದೆ.

ರೈಲಿನಲ್ಲಿ ಏನಾಗಿತ್ತು?

ತಿರುಪತಿಯಿಂದ ದುವ್ವಾಡಕ್ಕೆ ತಿರುಮಲ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿ. ಮೂರ್ತಿ ಅವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ 3ಎಸಿ ನಾಲ್ಕು ಟಿಕೆಟ್‌ಗಳನ್ನು ಬುಕ್ ಮಾಡಿದ್ದರು. ಆರಂಭದಲ್ಲಿ ಬಿ-7 ಕೋಚ್‌ನಲ್ಲಿ ಬರ್ತ್‌ಗಳನ್ನು ನಿಯೋಜಿಸಲಾಗಿತ್ತು. ಆದರೆ ಬಳಿಕ ಮೂರ್ತಿಯವಯವರ ಸೀಟ್ ಅನ್ನು 3ಎ ನಿಂದ 3ಇ ಗೆ ಬದಲಾಯಿಸಲಾಗಿದೆ ಎಂಬ ಸಂದೇಶವನ್ನು ಸ್ವೀಕರಿಸಿದರು.

2023ರ ಜೂನ್ 5ರಂದು ಮೂರ್ತಿ ಮತ್ತು ಅವರ ಕುಟುಂಬ ತಿರುಪತಿ ರೈಲು ನಿಲ್ದಾಣದಲ್ಲಿ ರೈಲು ಹತ್ತಿದರು. ಅವರ ಪ್ರಯಾಣದ ಸಮಯದಲ್ಲಿ ಶೌಚಾಲಯ ಬಳಸಲು ಹೋದಾಗ ಅಲ್ಲಿ ನೀರು ಇರಲಿಲ್ಲ. ಹೆಚ್ಚುವರಿಯಾಗಿ, ಕೋಚ್‌ನ ಎಸಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸಂಪೂರ್ಣ ಕೋಚ್ ಕೊಳಕಾಗಿತ್ತು. ಈ ಕುರಿತು ಮೂರ್ತಿ ಅವರು ದುವ್ವಾಡದ ಸಂಬಂಧಪಟ್ಟ ಕಚೇರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿದ ರೈಲ್ವೇ ಇಲಾಖೆ, ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಹಣ ಗಳಿಸುವ ಉದ್ದೇಶದಿಂದ ಮೂರ್ತಿಯವರ ಸುಳ್ಳು ಆರೋಪ ಮಾಡಿದ್ದಾರೆ. ರೈಲ್ವೆ ಒದಗಿಸಿದ ಸೇವೆಗಳನ್ನು ಬಳಸಿಕೊಂಡು ಅವರು ಮತ್ತು ಅವರ ಕುಟುಂಬ ಸುರಕ್ಷಿತವಾಗಿ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿದೆ.

ಆಯೋಗ ಹೇಳಿದ್ದೇನು?

ಈ ಕುರಿತು ವಿಚಾರಣೆ ನಡೆಸಿದ ವಿಶಾಖಪಟ್ಟಣದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ- I ಪೀಠವು ರೈಲ್ವೇಯು ಮೂಲ ಸೌಕರ್ಯಗಳಾದ ಶೌಚಾಲಯ, ಎಸಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಯಾಕೆಂದರೆ ಅವರು ಪ್ರಯಾಣಿಕರಿಂದ ಟಿಕೆಟ್ ಮೊತ್ತವನ್ನು ಪಡೆದಿದ್ದಾರೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡುವ ಭರವಸೆ ನೀಡಿದ್ದಾರೆ.

Rahul Gandhi: ಕಾರ್ಮಿಕರೊಂದಿಗೆ ಬಂಗಲೆಗೆ ಬಣ್ಣ ಬಳಿದು, ಮಡಿಕೆ ತಯಾರಿಸಿದ ರಾಹುಲ್‌ ಗಾಂಧಿ; ಕಾಂಗ್ರೆಸ್‌ ನಾಯಕನ ಸರಳತೆಗೆ ಜೈ ಎಂದ ನೆಟ್ಟಿಗರು

ತಾಂತ್ರಿಕ ದೋಷದಿಂದ ಶೌಚಾಲಯದ ಸಮಸ್ಯೆ ಮತ್ತು ಎಸಿಯ ಸಮಸ್ಯೆಯನ್ನು ಸರಿಪಡಿಸಲು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ರೈಲ್ವೆಯು ಮೂರ್ತಿ ಅವರ ದೂರನ್ನು ಸ್ವೀಕರಿಸಿದೆ ಎಂದು ಗಮನಿಸಿರುವ ಆಯೋಗವು ಮೂಲ ಸೌಕರ್ಯಗಳನ್ನು ಪರಿಶೀಲಿಸದೆ ರೈಲು ಕಾರ್ಯನಿರ್ವಹಿಸಿದೆ. ಹೀಗಾಗಿ ತೊಂದರೆ ಅನುಭವಿಸಿದ ವ್ಯಕ್ತಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.