Friday, 1st November 2024

Indian Railways: ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ; ರಿಸರ್ವೇಷನ್‌ ಅವಧಿ 60 ದಿನಕ್ಕೆ ಇಳಿಕೆ

Indian Railways

ಹೊಸದಿಲ್ಲಿ: ಭಾರತೀಯ ರೈಲ್ವೆ (Indian Railways) ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನೀಡಿದೆ. ರೈಲ್ವೆ ಮುಂಗಡ ಟಿಕೆಟ್‌ ಬುಕ್ಕಿಂಗ್‌ (Ticket reservation period) ನಿಯಮದಲ್ಲಿ ಮುಖ್ಯ ಬದಲಾವಣೆ ಮಾಡಿದ್ದು ಇಂದಿನಿಂದಲೇ (ನ. 1) ಜಾರಿಗೆ ಬಂದಿದೆ. ಅದರ ಪ್ರಕಾರ ಇನ್ನು ಮುಂದೆ ರೈಲ್ವೆ ಪ್ರಯಾಣಿಕರು 60 ದಿನಗಳ ಮುಂಚಿತವಾಗಿ ಟಿಕೆಟ್‌ ಬುಕ್ಕಿಂಗ್‌ ಮಾಡಿದರೆ ಸಾಕು. ಇಲ್ಲಿಯವರೆಗೆ ರೈಲ್ವೆ ಪ್ರಯಾಣಿಕರು 120 ದಿನಗಳ ಮುಂಚಿತವಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿಕೊಳ್ಳಬೇಕಿತ್ತು.

ಈ ಬಗ್ಗೆ ಭಾರತೀಯ ರೈಲ್ವೆ ಅಕ್ಟೋಬರ್ 16ರಂದು ಸುತ್ತೋಲೆ ಹೊರಡಿಸಿ ನಿಯಮಗಳ ಬದಲಾವಣೆಯ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿತ್ತು. ತಾಜ್‌ ಎಕ್ಸ್‌ಪ್ರೆಸ್‌, ಗೋಮ್ತಿ ಎಕ್ಸ್‌ಪ್ರೆಸ್‌ನಂತಹ ಹಗಲು ಹೊತ್ತಿನಲ್ಲಿ ಓಡಾಟ ನಡೆಸುವ ರೈಲುಗಳ ಬುಕ್ಕಿಂಗ್‌ನಲ್ಲಿ ಈಗಾಗಲೇ 60 ದಿನಗಳ ಬುಕ್ಕಿಂಗ್‌ ನಿಯಮ ಜಾರಿಯಲ್ಲಿದೆ. ಅಲ್ಲದೆ, ವಿದೇಶಿ ಪ್ರವಾಸಿಗರಿಗೆ ಇರುವ 365 ದಿನಗಳ ಮಿತಿಯಲ್ಲಿಯೂ ಯಾವುದೇ ಬದಲಾವಣೆ ಇರುವುದಿಲ್ಲ. ಜತೆಗೆ ಹೊಸ ನಿಯಮ ಸಾಮಾನ್ಯ ದರ್ಜೆಯ ಟಿಕೆಟ್ ಖರೀದಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರೈಲ್ವೆ ಹೇಳಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ಸ್ಪಷ್ಪಡಿಸಿದೆ.

“61ರಿಂದ 120 ದಿನಗಳ ಅವಧಿಗೆ ನಡೆಸಲಾದ ಸುಮಾರು ಶೇ. 21ರಷ್ಟು ಟಿಕೆಟ್‌ ಬುಕ್ಕಿಂಗ್‌ ರದ್ದುಗೊಳಿಸಲಾಗುತ್ತಿದೆ ಎನ್ನುವುದು ಗಮನಕ್ಕೆ ಬಂದಿದೆ. ಇದಲ್ಲದೆ ಶೇ. 5ರಷ್ಟು ಪ್ರಯಾಣಿಕರು ತಮ್ಮ ಟಿಕೆಟ್‌ ರದ್ದುಗೊಳಿಸುವುದಿಲ್ಲ ಅಥವಾ ಪ್ರಯಾಣವನ್ನು ಕೈಗೊಳ್ಳುವುದಿಲ್ಲʼʼ ಎಂದು ರೈಲ್ವೆ ತಿಳಿಸಿದೆ. ಮುಂಗಡ ಕಾಯ್ದಿರಿಸುವ ಅವಧಿಯನ್ನು ಕೊನೆಯದಾಗಿ 2015ರಲ್ಲಿ ಪರಿಷ್ಕರಿಸಲಾಗಿತ್ತು.

ಹೊಸ ನಿಯಮ ಪ್ರಯಾಣದ ರೂಟ್‌ನ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ರೈಲುಗಳನ್ನು ಉತ್ತಮ ರೀತಿಯಲ್ಲಿ ಸಂಯೋಜಿಸಲು ಸಹಾಯ ಮಾಡಲಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

ರೈಲು ಪ್ರಯಾಣದ ಟಿಕೆಟ್‌ ಅನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ndian Railway Catering and Tourism Corporation) ನಿರ್ವಹಿಸುತ್ತಿದೆ. ಈ ಸಾರ್ವಜನಿಕ ವಲಯದ ಉದ್ಯಮವನ್ನು 1999ರಲ್ಲಿ ಸ್ಥಾಪಿಸಲಾಯಿತು. ಇದು ರೈಲ್ವೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ದಿನಕ್ಕೆ ಸರಾಸರಿ 7.31 ಲಕ್ಷ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತದೆ.

ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ರೈಲುಗಳ ಓಡಾಟ

ಹಬ್ಬ- ಹರಿದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಹೆಚ್ಚುವರಿ ರೈಲುಗಳನ್ನು ಓಡಿಸುತ್ತದೆ. ʼʼದೀಪಾವಳಿ ಪ್ರಯುಕ್ತ ಜನದಟ್ಟಣೆಯನ್ನು ನಿವಾರಿಸಲು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ವಿವಿಧ ರೈಲುಗಳನ್ನು ಓಡಿಸುತ್ತಿದ್ದೇವೆ. ಅ. 31ರಂದು ನಾವು 160ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಿದ್ದೇವೆ ಮತ್ತು ನ. 1ರಂದು 170ಕ್ಕೂ ಹೆಚ್ಚು ರೈಲುಗಳ ವ್ಯವಸ್ಥೆ ಮಾಡಿದ್ದೇವೆ. ಜನಸಂದಣಿಯನ್ನು ನಿರ್ವಹಿಸಲು ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೆ ಸಂರಕ್ಷಣಾ ಪಡೆ (RPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಾತ್ರವಲ್ಲ ಗೊಂದಲ ನಿರಾವಣೆಗೆ ಸಹಾಯಕರ ವ್ಯವಸ್ಥೆಯನ್ನೂ ಮಾಡಲಾಗಿದೆʼʼ ಎಂದು ಅದಿಕಾರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Konkan Railway: ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ: ಸಚಿವ ಸೋಮಣ್ಣ