ಮುಂಬೈ: ದೀಪಾವಳಿಯ ಮುಹೂರ್ತ ಟ್ರೇಡಿಂಗ್ (Diwali Muhurt Trading) ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಸೆನ್ಸೆಕ್ಸ್ 335 ಅಂಕಗಳ (Sensex) ಏರಿಕೆ ದಾಖಲಿಸಿ 79,724ಕ್ಕೆ ವೃದ್ಧಿಸಿತು. ನಿಫ್ಟಿ (Nifty) 94 ಅಂಕ ಏರಿಕೆಯಾಗಿ 24,299ಕ್ಕೆ ವಹಿವಾಟನ್ನು ಮುಕ್ತಾಯಗೊಳಿಸಿತು. ಸಂಜೆ 6ರಿಂದ 7 ಗಂಟೆಯ ತನಕ ನಡೆದ ಮುಹೂರ್ತ ಟ್ರೇಡಿಂಗ್‌ನಲ್ಲಿ ಹೂಡಿಕೆದಾರರು ಉತ್ಸಾಹದಿಂದ ಭಾಗವಹಿಸಿದರು. ಟ್ರೇಡಿಂಗ್ ಮುಹೂರ್ತದಲ್ಲಿ ಆರಂಭ ಉತ್ತಮವಾಗಿತ್ತು. ಎಲ್ಲ ಸೆಕ್ಟರ್‌ಗಳೂ ಹಸಿರಾಗಿದ್ದವು. ಆಟೊಮೊಬೈಲ್ ವಲಯದ ಷೇರುಗಳು ಏರಿಕೆ ಕಂಡಿತು.
ಯಾವ ಷೇರುಗಳಿಗೆ ಲಾಭ?
ಜೊಮ್ಯಾಟೊ, ಪಿಎನ್‌ಬಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಒಎನ್‌ಜಿಸಿ, ಅದಾನಿ ಪೋರ್ಟ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ ಮೋಟಾರ್ಸ್ ಷೇರು ದರ ಏರಿತು. ಡಾ ರೆಡ್ಡೀಸ್ ಲ್ಯಾಬ್ಸ್, ಎಚ್‌ಸಿಎಲ್ ಟೆಕ್, ಬ್ರಿಟಾನಿಯಾ, ಟೆಕ್ ಮಹೀಂದ್ರಾ, ಅದಾನಿ ಎಂಟರ್‌ಪ್ರೈಸಸ್ ಷೇರು ದರ ಇಳಿಯಿತು.
ಹಿಂದೂ ಪಂಚಾಂಗದ ಪ್ರಕಾರ ಹೊಸ ಸಂವತ್ಸರ ( ಸಂವತ್ 2081) ಆರಂಭವಾಗುತ್ತಿದೆ. ಈ ಶುಭ ಸಂದರ್ಭ ಷೇರುಗಳನ್ನು ಖರೀದಿಸಿದರೆ ಲಾಭವಾಗುತ್ತದೆ ಎಂಬುದು ನಂಬಿಕೆ.
ಕಳೆದ 10 ವರ್ಷಗಳ ಇತಿಹಾಸವನ್ನುಗಮನಿಸಿದರೆ, 8 ಬಾರಿ ಮುಹೂರ್ತ ಟ್ರೇಡಿಂಗ್‌ನಲ್ಲಿ ಸೂಚ್ಯಂಕಗಳು ಏರಿಕೆ ದಾಖಲಿಸಿದೆ. ಎರಡು ಸಲ ಮಾತ್ರ ಸೂಚ್ಯಂಕಗಳು ಕೆಳಕ್ಕಿಳಿದಿತ್ತು. ಕಳೆದ ಹಲವು ದಿನಗಳಿಂದ ಷೇರು ಸೂಚ್ಯಂಕಗಳು ಕುಸಿತಕ್ಕೀಡಾಗಿದ್ದರಿಂದ ಮುಹೂರ್ತ ಟ್ರೇಡಿಂಗ್ ಬಗ್ಗೆ ಕುತೂಹಲ ಸೃಷ್ಟಿಯಾಗಿತ್ತು.
ಸಂವತ್ 2080ರಲ್ಲಿ ಸೆನ್ಸೆಕ್ಸ್ ಹೂಡಿಕೆದಾರರಿಗೆ 22.31% ರಿಟರ್ನ್ ನೀಡಿದೆ. 2023ರ ನವೆಂಬರ್‌ನಿಂದ 2024ರ ಅಕ್ಟೋಬರ್ ತನಕ ನಿಫ್ಟಿ ಸೂಚ್ಯಂಕವು 26 % ರಿಟರ್ನ್ ಕೊಟ್ಟಿದೆ. ಇತ್ತೀಚೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದರಿಂದ ಸೂಚ್ಯಂಕ ಕುಸಿದಿದ್ದರೂ, ಈಗಲೂ ಮುನ್ನೋಟ ಆಶಾದಾಯಕವಾಗಿದೆ.
ಈ ಸುದ್ದಿಯನ್ನೂ ಓದಿ: GST Collections: ಜಿಎಸ್‌ಟಿ ಸಂಗ್ರಹ 9%ರಷ್ಟು ಏರಿಕೆ, ₹1.87 ಲಕ್ಷ ಕೋಟಿಗೆ ಜಂಪ್