Friday, 1st November 2024

Share Market: ನವೆಂಬರ್‌ನಲ್ಲಿ ಸೆನ್ಸೆಕ್ಸ್‌, ನಿಫ್ಟಿ ಮತ್ತಷ್ಟು ಪತನ? ಟಾಪ್‌ 5 ರಿಸ್ಕ್ ಯಾವುದು?

Share Market

-ಕೇಶವ ಪ್ರಸಾದ್‌ ಬಿ.

ಮುಂಬೈ: ಷೇರು ಮಾರುಕಟ್ಟೆ (Share Market)ಯಲ್ಲಿ ಕಳೆದ ಅಕ್ಟೋಬರ್‌ ತಿಂಗಳು ಹೂಡಿಕೆದಾರರಿಗೆ ಕಹಿ ಅನುಭವವನ್ನು ನೀಡಿದೆ. 2020ರಿಂದೀಚೆಗಿನ ಭಾರಿ ಕುಸಿತವನ್ನು ಅಕ್ಟೋಬರ್‌ ದಾಖಲಿಸಿದೆ. ಈ ಒಂದೇ ತಿಂಗಳಿನಲ್ಲಿ ನಿಫ್ಟಿ  (Nifty) ಸೂಚ್ಯಂಕ 6% ಇಳಿಕೆ ಕಂಡಿದೆ. ಕೋವಿಡ್-‌19ರ ಮೊದಲ ಅಲೆ ಬಂದ ಬಳಿಕ ಸ್ಟಾಕ್‌ ಮಾರ್ಕೆಟ್‌ ನೋಡಿದ ಅತ್ಯಂತ ವರ್ಸ್ಟ್‌ ತಿಂಗಳು ಕಳೆದ ಅಕ್ಟೋಬರ್‌ ಆಗಿತ್ತು. ಸೆನ್ಸೆಕ್ಸ್‌ 5.83% ಇಳಿಕೆಯಾಗಿತ್ತು. ಸೆನ್ಸೆಕ್ಸ್‌ (Sensex) 79,389 ಮತ್ತು ನಿಫ್ಟಿ 24,205 ಅಂಕಗಳ ಮಟ್ಟದಲ್ಲಿ ಈಗ ಇದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಎಫ್‌ಐಐಗಳು ದಾಖಲೆಯ ಮಟ್ಟದಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಂಡಿರುವುದು, ಕಾರ್ಪೊರೇಟ್‌ ಕಂಪನಿಗಳ ಆದಾಯ ಇಳಿಮುಖವಾಗಿರುವುದು, ಜನರ ಖರೀದಿ ಸಾಮರ್ಥ್ಯ ಇಳಿದಿರುವುದು, ಜಾಗತಿಕ ಷೇರು ಮಾರುಕಟ್ಟೆಗಳ ಪತನ, ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು, ಷೇರುಗಳ ಓವರ್‌ ವಾಲ್ಯುಯೇಶನ್‌ ಪರಿಣಾಮ ಷೇರು ಪೇಟೆ ಸೂಚ್ಯಂಕಗಳು ಕುಸಿದಿವೆ. ಹಾಗಾದರೆ ಡಿಸೆಂಬರ್‌ನಲ್ಲಿ ನಿಫ್ಟಿ, ಸೆನ್ಸೆಕ್ಸ್‌ ಮತ್ತಷ್ಟು ಬೀಳಲಿದೆಯೇ? ಈಗ ಹೂಡಿಕೆದಾರರು ಏನು ಮಾಡಬಹುದು?

ಮೊದಲಿಗೆ ಭಾರತೀಯ ಷೇರು ಮಾರುಕಟ್ಟೆ ಈಗ ಎದುರಿಸುತ್ತಿರುವ 5 ರಿಸ್ಕ್‌ಗಳ ಬಗ್ಗೆ ನೋಡೋಣ.

  1. ಮೊದಲನೆಯದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್‌ ಷೇರುಪೇಟೆಯಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. 2023ರ ಅಕ್ಟೋಬರ್‌ನಿಂದ 2024ರ ಅಕ್ಟೋಬರ್‌ ತನಕ ವಿದೇಶಿ ಹೂಡಿಕೆದಾರರು ನಿವ್ವಳ 86,928 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ಅಕ್ಟೋಬರ್‌ ತಿಂಗಳೊಂದರಲ್ಲಿಯೇ 88,818 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ವಿದೇಶಿ ಹೂಡಿಕೆದಾರರು ಭಾರತದಿಂದ ಚೀನಾ ಮತ್ತು ಜಪಾನ್‌ನ ಅಗ್ಗದ ಮಾರುಕಟ್ಟೆಗೆ ಸ್ಥಳಾಂತರವಾಗುತ್ತಿದ್ದಾರೆ. ಈ ಟ್ರೆಂಡ್‌ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು.
  2. ಎರಡನೆಯದಾಗಿ ವಾಲ್ಯುಯೇಶನ್‌ ಬಗ್ಗೆ ಇರುವ ಚಿಂತೆ. ಸೆನ್ಸೆಕ್ಸ್‌ 24.1 ನಿಫ್ಟಿ 23.7 ಪಿಇ (ಪ್ರೈಸ್-ಟು-ಅರ್ನಿಂಗ್ಸ್)‌ ರೇಶಿಯೊ ಅಥವಾ ಅನುಪಾತವನ್ನು ಹೊಂದಿದೆ. ಚೀನಾದ ಶಾಂಘೈ 15.1 ಮತ್ತು ಹಾಂಕಾಂಗ್‌ ಷೇರು ಮಾರುಕಟ್ಟೆ ಸೂಚ್ಯಂಕ 11 ಪಿಇ ರೇಶಿಯೊವನ್ನು ಹೊಂದಿದೆ. ಅಂದರೆ ಭಾರತ ಇವೆಲ್ಲದಕ್ಕಿಂತ ದುಬಾರಿ ವಾಲ್ಯುಯೇಶನ್‌ ಅನ್ನು ಹೊಂದಿದೆ. ಪಿಇ ರೇಶಿಯೊ ಎಂದರೆ ಕಂಪನಿಯ ಪ್ರತಿ ಒಂದು ರೂಪಾಯಿ ಲಾಭಕ್ಕೆ ಹೂಡಿಕೆದಾರರು ಎಷ್ಟು ಹಣ ಕೊಡಲು ಯಾರಿದ್ದಾರೆ ಎನ್ನುವುದು. ಉದಾಹರಣೆಗೆ ಒಂದು ಕಂಪನಿಯ ಪಿಇ ರೇಶಿಯೊ 10 ರೂ. ಇದ್ದರೆ, ಕಂಪನಿಯ ಪ್ರತಿ 1 ರೂ. ಲಾಭಕ್ಕೆ 10 ರೂ. ಕೊಡಲು ತಯಾರಿದ್ದಾರೆ ಎಂದರ್ಥ. ಈ ಪಿಇ ರೇಶಿಯೊ 20-25 ರೊಳಗೆ ಇದ್ದರೆ ಉತ್ತಮ ಎನ್ನುತ್ತಾರೆ. ಆದ್ದರಿಂದ ಸದ್ಯಕ್ಕೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕಾಸ್ಟ್ಲಿ ಅಂತ ವಿದೇಶಿ ಹೂಡಿಕೆದಾರರಿಗೆ ಅನ್ನಿಸುತ್ತಿದೆ. ಹೀಗಾಗಿ ಅಗ್ಗದ ಚೀನಾ, ಜಪಾನ್‌ ಕಡೆಗೆ ಹೋಗುತ್ತಿದ್ದಾರೆ.
  3. ವಿಶ್ಲೇಷಕರ ಪ್ರಕಾರ ಚೀನಾ ಇತ್ತೀಚೆಗೆ ತನ್ನ ಆರ್ಥಿಕತೆಯ ಪ್ರಗತಿಗೆ ಘೋಷಿಸಿರುವ ನೆರವಿನ ಪ್ಯಾಕೇಜ್‌ ಫಲ ನೀಡಿದರೆ, ಭಾರತದಿಂದ ವಿದೇಶಿ ಬಂಡವಾಳದ ಹೊರ ಹರಿವು ಮತ್ತಷ್ಟು ಹೆಚ್ಚಬಹುದು.
    2024-25ರ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 167 ಪ್ರಮುಖ ಕಾರ್ಪೊರೇಟ್‌ ಕಂಪನಿಗಳ ಆದಾಯದ ಬೆಳವಣಿಗೆ ಕೇವಲ 5%ಗೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16% ಇತ್ತು. ಕಾರ್ಪೊರೇಟ್‌ ಕಂಪನಿಗಳ ಆದಾಯ ಮತ್ತಷ್ಟು ಇಳಿದರೆ ಹೂಡಿಕೆದಾರರ ವಿಶ್ವಾಸ ನಷ್ಟವಾಗಬಹುದು. ಆಗ ಷೇರು ಮಾರಾಟವೂ ಹೆಚ್ಚಬಹುದು.
  4. ಇಸ್ರೇಲ್- ಇರಾನ್‌ ಮತ್ತು ರಷ್ಯಾ-ಉಕ್ರೇನ್‌ ಸಂಘರ್ಷ ನಡೆಯುತ್ತಿರುವುದರಿಂದ ತೈಲ ದರಗಳು ಹೆಚ್ಚುವ ಆತಂಕ ಉಂಟಾಗಿದೆ. ಇದು ಕೂಡ ನಕಾರಾತ್ಮಕ ಪ್ರಭಾವ ಬೀರಲಿದೆ.
  5. ತೈಲ ಮತ್ತು ತರಕಾರಿಗಳ ದರ ಏರುಗತಿಯಲ್ಲಿದ್ದರೆ, ಹಣದುಬ್ಬರ ಹೆಚ್ಚಲಿದೆ. ಅದು ಕೂಡ ನಕಾರಾತ್ಮಕ ಪ್ರಭಾವ ಬೀರಲಿದೆ.

ಮಾರುಕಟ್ಟೆ ಮತ್ತೆ ಚೇತರಿಸಲಿದೆ: ವಿಜಯ್‌ ಕೇಡಿಯಾ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಈಗ ಉಂಟಾಗಿರುವ ಪತನದ ಬಗ್ಗೆ ಕಳವಳ ಬೇಡ. ಸೂಚ್ಯಂಕಗಳು ಉನ್ನತ ಮಟ್ಟದಲ್ಲಿದ್ದು, ಕರೆಕ್ಷನ್‌ ಅಗತ್ಯ ಇತ್ತು. ಅದು ಈಗ ನಡೆಯುತ್ತಿದೆ. ಸದ್ಯದ ಇಳಿಕೆ ತಾತ್ಕಾಲಿಕ. 5%-30% ತನಕ ಸೂಚ್ಯಂಕಗಳ ಕುಸಿತ ವಿಶೇಷವೇನೂ ಅಲ್ಲ. ದೀರ್ಘಕಾಲೀನವಾಗಿ ಹೂಡಿಕೆ ಮಾಡುವವರು ಚಿಂತೆ ಮಾಡಬೇಕಿಲ್ಲ ಎನ್ನುತ್ತಾರೆ ವಿಜಯ್‌ ಕೇಡಿಯಾ.

ತಜ್ಞರ ಪ್ರಕಾರ ಹೂಡಿಕೆದಾರರು ಈಗ ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿಸುವುದು ಸೂಕ್ತ. ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಕೂಡ ಸಿಪ್‌ ಅನ್ನು ನಿಲ್ಲಿಸದೆ, ಮುಂದುವರಿಸುವುದು ಸೂಕ್ತ. ರಿಸ್ಕ್‌ಗಳನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಒಳ್ಳೆಯ ರಿಟರ್ನ್‌ ಅನ್ನೂ ಗಳಿಸಬಹುದು ಎನ್ನುತ್ತಾರೆ ತಜ್ಞರು.

ಈ ಸುದ್ದಿಯನ್ನೂ ಓದಿ: Digital Payment: ಇತಿಹಾಸ ಸೃಷ್ಟಿಸಿದ ಆನ್‌ಲೈನ್‌ ಪೇಮೆಂಟ್‌; ಒಂದೇ ತಿಂಗಳಿನಲ್ಲಿ 23.5 ಲಕ್ಷ ಕೋಟಿ ರೂ. ವ್ಯವಹಾರ