ಹೊಸದಿಲ್ಲಿ: ಜನಪ್ರಿಯ ಫ್ಯಾಷನ್ ಡಿಸೈನರ್ (Fashion Designer) ರೋಹಿತ್ ಬಾಲ್ (Rohit Bal) ಶುಕ್ರವಾರ (ನ. 1) ನಿಧನ ಹೊಂದಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ (Fashion Design Council of India) ರೋಹಿತ್ ಬಾಲ್ ಅವರ ನಿಧನವನ್ನು ಖಚಿತಪಡಿಸಿದೆ.
ಎಫ್‌ಡಿಸಿಐ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, “ಲೆಜೆಂಡರಿ ಡಿಸೈನರ್ ರೋಹಿತ್ ಬಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದೇವೆ. ಅವರು ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾದ (FDCI) ಸ್ಥಾಪಕ ಸದಸ್ಯರಾಗಿದ್ದರು. ಆಧುನಿಕ ಸಂವೇದನೆಗಳೊಂದಿಗೆ ಸಾಂಪ್ರದಾಯಿಕ ಮಾದರಿಗಳನ್ನು ತಯಾರಿಸುವ ವಿಶಿಷ್ಟ ಮಾದರಿಗೆ ಅವರು ಹೆಸರವಾಸಿ. ಬಾಲ್ ಅವರ ಈ ವಿಶಿಷ್ಟ ವಿನ್ಯಾಸ ಭಾರತೀಯ ಫ್ಯಾಷನ್ ಅನ್ನು ಮರು ವ್ಯಾಖ್ಯಾನಿಸಿದೆ ಮತ್ತು ಈ ತಲೆಮಾರುಗಳಿಗೆ ಸ್ಫೂರ್ತಿ ನೀಡಿದೆ. ಅವರ ಕಲಾತ್ಮಕತೆ, ನಾವೀನ್ಯತೆಯ ಪರಂಪರೆ ಮತ್ತು ಮುಂದಾಲೋಚನೆಯು ಫ್ಯಾಷನ್ ಜಗತ್ತಿನಲ್ಲಿ ಸದಾ ಜೀವಂತವಾಗಿರುತ್ತದೆ” ಎಂದು ತಿಳಿಸಿದೆ.
2 ವಾರಗಳ ಹಿಂದೆಯಷ್ಟೇ ಮುಂಬೈಯಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರೋಹಿತ್ ಬಾಲ್ ತಮ್ಮ ಅಂತಿಮ ಕಲೆಕ್ಷನ್ ಪ್ರಸ್ತುತಪಡಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಹೃದಯದ ಸಮಸ್ಯೆ ಕಾಣಿಸಿಕೊಂಡ ಬಾಲ್ ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು.
ಹಿನ್ನಲೆ
1961ರ ಮೇ 8ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದ ರೋಹಿತ್ ಬಾಲ್ 1986ರಲ್ಲಿ ಸಹೋದರನೊಂದಿಗೆ ಆರ್ಕಿಡ್ ಓವರ್ಸೀ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1990ರಲ್ಲಿ ತಮ್ಮ ಸ್ವತಂತ್ರ ಬಟ್ಟೆಗಳ ಸಂಗ್ರಹವನ್ನು ಆರಂಭಿಸಿದರು. ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಅವರು ದಿಲ್ಲಿಯ ನ್ಯಾಷನಲ್ ಇನ್‌ಸ್ಟಿಟ್ರೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿದ್ದರು. ರೋಹಿತ್ ಬಾಲ್ ರಾಷ್ಟ್ರೀಯ ಮಾತ್ರವಲ್ಲ ಅಂತಾರಾಷ್ಟ್ರೀಯ ಗ್ರಾಹಕರನ್ನೂ ಹೊಂದಿದ್ದರು. ರೋಹಿತ್ ಬಾಲ್ ಒಮೆಗಾ ಗಡಿಯಾರಗಳ ರಾಯಭಾರಿಯೂ ಆಗಿದ್ದರು. ಅಲ್ಲದೆ ಭಾರತದ ಜನಪ್ರಿಯ ಗೇಮ್ ಶೋ ಕೌನ್ ಬನೇಗಾ ಕರೋಡ್‌ಪತಿಗಾಗಿ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದರು.
ಫ್ಯಾಷನ್ ಪ್ರಪಂಚದಲ್ಲಿ ಜನಪ್ರಿಯ ಮುಖ
ಇತಿಹಾಸ, ಫ್ಯಾಂಟಸಿ ಮತ್ತು ಜಾನಪದವನ್ನು ಬಳಸಿಕೊಂಡು ರೋಹಿತ್ ಬಾಲ್ ವಿವಿಧ ಬಟ್ಟೆಗಳನ್ನು ವಿನ್ಯಾಸಗೊಳಿಸಿ ಜನಪ್ರಿಯರಾಗಿದ್ದಾರೆ. ಅವರು ಫ್ಯಾಷನ್ ಪ್ರಪಂಚದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದರು. ನಿರಂತರ ಅಧ್ಯಯನ ನಡೆಸಿ ಅವರು ಬಟ್ಟೆ ವಿನ್ಯಾಸಗೊಳಿಸುತ್ತಿದ್ದರು.
ಆಭರಣ ವಿನ್ಯಾಸ
ರೋಹಿತ್ ಬಾಲ್ ಬಟ್ಟೆ ಮಾತ್ರವಲ್ಲ ಆಭರಣ ವಿನ್ಯಾಸ ಪ್ರಪಂಚಕ್ಕೂ ಕಾಲಿಟ್ಟಿದ್ದರು. ಅವರು ಆಭರಣದಲ್ಲಿ ಕಮಲ ಮತ್ತು ನವಿಲಿನ ಆಕಾರಗಳ ಬಳಕೆಯನ್ನು ಜನಪ್ರಿಯಗೊಳಿಸಿದ್ದಾರೆ. ಅವರು ಲಂಡನ್, ಪ್ಯಾರಿಸ್, ನ್ಯೂಯಾರ್ಕ್, ಸಿಂಗಾಪುರ್, ಮಾಸ್ಕೋ, ಜಕಾರ್ತಾ, ಕೊಲಂಬೊ, ಸಾವೊ ಪಾಲೊ, ಮ್ಯೂನಿಚ್, ಜಿನೀವಾ ಮತ್ತು ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಫ್ಯಾಷನ್ ಶೋಗಳನ್ನು ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: KGL Ravi: ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್. ರವಿ ಹೃದಯಾಘಾತದಿಂದ ನಿಧನ