ಸಿಂಹಾವಲೋಕನ
ಎಸ್.ಶ್ರೀನಿವಾಸ್
ಬ್ರಿಟಿಷರು ಭಾರತವನ್ನು ತೊರೆಯುವುದಕ್ಕೂ ಮುನ್ನ ತಮ್ಮ ಅಧೀನದಲ್ಲಿದ್ದ 500ಕ್ಕೂ ಹೆಚ್ಚು ರಾಜ
ಮನೆತನ ಹಾಗೂ ಸಂಸ್ಥಾನಗಳಿಗೆ ಒಂದೋ ಭಾರತ ಅಥವಾ ಪಾಕಿಸ್ತಾನದೊಂದಿಗೆ ವಿಲೀನಗೊಳ್ಳಲು
ಮತ್ತು ಕನಿಷ್ಠಪಕ್ಷ ವಿದೇಶಾಂಗ ನೀತಿ, ರಕ್ಷಣೆ, ಸಾರಿಗೆ- ಸಂಪರ್ಕ ಮುಂತಾದ ಆಡಳಿತ ವಿಷಯಗಳನ್ನು ಕೇಂದ್ರ
ಸರಕಾರಕ್ಕೆ ಒಪ್ಪಿಸಿ, ಉಳಿದೆಲ್ಲ ಬಾಬತ್ತುಗಳನ್ನು ತಮ್ಮ ವಶದಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದರು. ಅಂತೆಯೇ ಮೈಸೂರು ರಾಜಮನೆತನವು ಭಾರತದೊಂದಿಗಿನ ‘ವಿಲೀನ ಪತ್ರ’ಕ್ಕೆ ಸಹಿ ಹಾಕಿ, ಮೇಲೆ ಉಲ್ಲೇಖಿಸಿದ ಆಡಳಿತ ವಿಷಯಗಳನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸಿತ್ತು.
ಭಾರತದೊಂದಿಗೆ ವಿಲೀನಗೊಂಡ ನಂತರ ಭಾರತ ಒಕ್ಕೂಟದ ಸಂವಿಧಾನ ರಚನಾ ಸಭೆಗೆ ಮೈಸೂರು ಪ್ರಾಂತ್ಯ
ದಿಂದ ಸದಸ್ಯರನ್ನು ಆಯ್ಕೆಮಾಡಲು 1947ರ ಜುಲೈ 7ರಂದು ಮೈಸೂರು ಪ್ರತಿನಿಧಿ ಸಭೆ ಮತ್ತು ವಿಧಾನ ಪರಿಷತ್ತಿನಿಂದ ಚುನಾವಣೆ ನಡೆಯಿತು. ಎ.ರಾಮಸ್ವಾಮಿ ಮುದಲಿಯಾರ್, ಎಸ್.ವಿ.ಕೃಷ್ಣಮೂರ್ತಿ, ಡಿ.ಎಚ್. ಚಂದ್ರಶೇಖರಯ್ಯ ಪ್ರತಿನಿಧಿ ಸಭೆಯಿಂದ ಮತ್ತು ಎಚ್.ಆರ್.ಗುರುವರೆಡ್ಡಿ, ಕೆ.ಸಿ.ರೆಡ್ಡಿ ವಿಧಾನ ಪರಿಷತ್ತಿನಿಂದ ಆಯ್ಕೆಯಾದರು.
ಇವರ ಜತೆಗೆ ಮೊಹಮ್ಮದ್ ಷರೀ- ಮತ್ತು ಟಿ.ಚನ್ನಯ್ಯರವರನ್ನು ನಾಮನಿರ್ದೇಶನ ಮಾಡಲಾಯಿತು. ಅಕ್ಟೋಬರ್ 12ರಂದು ಮೈಸೂರು ರಾಜ್ಯ ಕಾಂಗ್ರೆಸ್ ಮತ್ತು ದಿವಾನರ ನಡುವೆ ಆದ ಒಪ್ಪಂದದಂತೆ, ಮೈಸೂರು ರಾಜ್ಯದಲ್ಲಿ ಅಕ್ಟೋಬರ್ 24ರಂದು ಉತ್ತರದಾಯಿ ಸರಕಾರ ಸ್ಥಾಪನೆಯಾಗಿ ಹೊಸ ಮಂತ್ರಿಮಂಡಲ ರಚನೆಯಾಯಿತು. ಕೆ.ಸಿ.ರೆಡ್ಡಿ ರಾಜ್ಯದ ಮುಖ್ಯಮಂತ್ರಿಯಾದರು.
ಪ್ರಾರಂಭದಲ್ಲಿ ಉಲ್ಲೇಖಿಸಿದ 3 ಆಡಳಿತಾತ್ಮಕ ವಿಷಯಗಳನ್ನು ಬಿಟ್ಟು ಉಳಿದೆಲ್ಲದರ ವಿಷಯದಲ್ಲಿ ಶಾಸನ ಮಾಡಲು ಮೈಸೂರು ರಾಜ್ಯ ಸ್ವತಂತ್ರವಾಗಿತ್ತು ಹಾಗೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೈಸೂರು ರಾಜ್ಯದಲ್ಲೂ ಹೊಸ ಸಂವಿಧಾನದ ರಚನಾ ಪ್ರಕ್ರಿಯೆ ಶುರುವಾಯಿತು. ಅದರ ಸಲುವಾಗಿ, ಅಕ್ಟೋಬರ್ ೨೯ರಂದು ಮಹಾರಾಜರು, 76 ಸದಸ್ಯರುಳ್ಳ ಮೈಸೂರು ಸಂವಿಧಾನ ರಚನಾ ಸಭೆಯ ಸ್ಥಾಪನೆಗೆ ಅನುಮೋದಿಸಿದರು (ಇಂಥದೊಂದು ಸಭೆಯ ರಚನೆಗೆ ಮುಂದಾಗಿದ್ದನ್ನು ಭಾರತದ ಅಂದಿನ ಪ್ರಧಾನಿ ನೆಹರು, ಗೃಹ ಸಚಿವ ವಲ್ಲಭಭಾಯಿ ಪಟೇಲ್ ಶ್ಲಾಘಿಸಿದ್ದೂ ಉಂಟು!). ಸಭೆಯ ಸದಸ್ಯರ ಆಯ್ಕೆಗೆಂದು 1948ರ ಮಾರ್ಚ್ 5ರಂದು
ಚುನಾವಣೆ ನಡೆದು, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ನಿಜಲಿಂಗಪ್ಪ ಸೇರಿದಂತೆ ಹಲವು ಕಾಂಗ್ರೆಸ್ಸಿಗರು ಆಯ್ಕೆಯಾದರು.
ಸಭೆಯಲ್ಲಿ ಮುಸಲ್ಮಾನರಿಗೆ 5 ಹಾಗೂ ಹಿಂದುಗಳಿದ ವರ್ಗದವರಿಗೆ 9 ಸ್ಥಾನಗಳನ್ನು ಮೀಸಲಿಡಲಾಯಿತು. ಏಪ್ರಿಲ್ 7ರಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು. ಹಂಗಾಮಿ ಅಧ್ಯಕ್ಷರಾಗಿದ್ದ ಕೆ.ಸಿ. ರೆಡ್ಡಿ ಮಾತನಾಡಿ, ಮೈಸೂರು ಸಂವಿಧಾನವು ಭಾರತೀಯ
ಸಂವಿಧಾನದ ಅನುಸಾರವಾಗಿರಬೇಕೆಂದು ಮತ್ತು ರಾಜ್ಯದಲ್ಲಿ ಮಹಾರಾಜರ ಸಾಂವಿಧಾನಿಕ ರಾಜಪ್ರಭುತ್ವವನ್ನು ರಚಿಸುವುದಾಗಿ ಘೋಷಿಸಿದರು.
ಮೈಸೂರು ಸಂವಿಧಾನ ಸಭೆ ಒಟ್ಟು 4 ಅಧಿವೇಶನಗಳನ್ನು ನಡೆಸಿತು. ಬಳಿಕ ಭಾರತ ಸರಕಾರದ ರಾಜ್ಯಗಳ ಸಚಿವಾಲಯದಿಂದ, “ರಾಜ್ಯಗಳಿಗೆ ಮಾದರಿ ಸಂವಿಧಾನ ರೂಪಿಸಲು ಸಮಿತಿಯೊಂದನ್ನು ನೇಮಿಸಲು
ನಿರ್ಧರಿಸಲಾಗಿದ್ದು, ಮೈಸೂರು ರಾಜ್ಯ ಸಂವಿಧಾನ ಸಭೆಯ ಮುಂದಿನ ಸಭೆಯನ್ನು ಮುಂದೂಡಬೇಕು” ಎಂಬುದಾಗಿ ಮೈಸೂರು ಸರಕಾರಕ್ಕೆ ಸೂಚನೆ ಬಂದಿತು. ಒಕ್ಕೂಟಗಳು ಮತ್ತು ರಾಜ್ಯಗಳಿಗೆ ಮಾದರಿ ಸಂವಿಧಾನವನ್ನು ರೂಪಿಸಲು ರಾಜ್ಯಗಳ ಸಚಿವಾಲಯವು ನವೆಂಬರ್‌ನಲ್ಲಿ ಬಿ.ಎನ್.ರಾವ್ ಅಧ್ಯಕ್ಷತೆ ಯಲ್ಲಿ ಸಮಿತಿಯನ್ನು ಸ್ಥಾಪಿಸಿತು.
1949ರ ಜೂನ್ 1ರಂದು ಪರಿಷ್ಕೃತ ವಿಲೀನಪತ್ರಕ್ಕೆ ರುಜು ಹಾಕಿದ ಮಹಾರಾಜರು, ತೆರಿಗೆ ಹಾಗೂ ಸುಂಕ ಸಂಬಂಧಿತ ವಿಷಯಗಳನ್ನು ಹೊರತುಪಡಿಸಿ ಸಂಯುಕ್ತ ಮತ್ತು ಸಮವರ್ತಿ ಪಟ್ಟಿಯಲ್ಲಿ ಬರುವ ಎಲ್ಲಾ ವಿಷಯಗಳ ಮೇಲೆ ಶಾಸನ ಮಾಡುವ ಅಧಿಕಾರವನ್ನು ಕೇಂದ್ರ ಶಾಸಕಾಂಗಕ್ಕೆ ಬಿಟ್ಟುಕೊಟ್ಟರು. 1950ರ ಏಪ್ರಿಲ್ 1ರಂದು ಕಾರ್ಯರೂಪಕ್ಕೆ ಬಂದ ಸಂಯುಕ್ತ ಹಣಕಾಸಿನ ಏಕೀಕರಣದ ಯೋಜನೆಗೂ ಮೈಸೂರು ರಾಜ್ಯವು ಒಪ್ಪಿಗೆ ಸೂಚಿಸಿತು. ಮೇ 19ರಂದು ನಡೆದ ಭಾರತದ ವಿವಿಧ ಪ್ರಾಂತ್ಯಗಳ ಮತ್ತು ಪೂರ್ವ ರಾಜ ಮನೆತನಗಳ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ, ಪ್ರತಿ ಪ್ರಾಂತ್ಯ ಮತ್ತು ರಾಜ್ಯಗಳಿಗೆ ಪ್ರತ್ಯೇಕ ಸಂವಿಧಾನ ರಚಿಸುವ ಬದಲು, ಭಾರತದ ಸಂವಿಧಾನ ಸಭೆ ರೂಪಿಸಿದ ಸಂವಿಧಾನವನ್ನೇ ಅಂಗೀಕರಿಸಲು ಎಲ್ಲರೂ ನಿರ್ಧರಿಸಿದರು.
ಈ ನಿಟ್ಟಿನಲ್ಲಿ, ಮೈಸೂರು ರಾಜ್ಯ ಸಂವಿಧಾನ ರಚನಾ ಸಭೆಯ ಸದಸ್ಯರು ಒಂದು ಠರಾವು ಜಾರಿಗೊಳಿಸಿದರು. ಅದರನ್ವಯ, ಭಾರತದ ಸಂವಿಧಾನವೇ ಮೈಸೂರು ರಾಜ್ಯಕ್ಕೆ ಸಂವಿಧಾನ ವಾಗಿರಬೇಕೆಂದು ಮಹಾರಾಜರು ನವೆಂಬರ್ 25ರಂದು ಆದೇಶಿಸಿ, ಶಾಸಕಾಂಗದ ಎರಡು ಸದನಗಳಾದ ಪ್ರತಿನಿಧಿ ಸಭೆ ಮತ್ತು ವಿಧಾನ ಪರಿಷತ್ತನ್ನು ಡಿಸೆಂಬರ್ 15ರಂದು ವಿಸರ್ಜಿಸಿದರು. ಮೈಸೂರಿನ ಸಂವಿಧಾನ ಸಭೆಯನ್ನು ಮಧ್ಯಂತರ ಅವಧಿಗೆ ಶಾಸಕಾಂಗವಾಗಿ ಪರಿವರ್ತಿಸಲಾಯಿತು. ಈ ಹಿಂದೆ ಆಗಸ್ಟ್ 7ರಂದು ‘ದಿವಾನ್’ ಹುದ್ದೆಯನ್ನು ರದ್ದುಗೊಳಿಸಲಾಗಿತ್ತು.
1950ರ ಜನವರಿ 26ರಂದು ಭಾರತವು ಗಣರಾಜ್ಯವಾದಾಗ, ಮೈಸೂರು ಅರಮನೆಯಲ್ಲಿ ದರ್ಬಾರ್ ನಡೆದು, ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ರಾಜ್ಯದ ರಾಜಪ್ರಮುಖರಾಗಿ ಪ್ರಮಾಣವಚನ ಸ್ವೀಕರಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿಯಿಂದ ‘ರಾಮರಾಜ್ಯ’ವೆಂದು, ಬ್ರಿಟಿಷರಿಂದ ‘ಮಾದರಿರಾಜ್ಯ’ವೆಂದು ಕರೆಸಿಕೊಂಡಿದ್ದ ಮೈಸೂರು ಸಂಸ್ಥಾನವು ದಕ್ಷ ಮತ್ತು ಪ್ರಗತಿಪರ ಆಡಳಿತಕ್ಕೆ ಖ್ಯಾತವಾಗಿತ್ತು.
ತನ್ನದೇ ಆದ ರಾಷ್ಟ್ರಧ್ವಜ, ರಾಷ್ಟ್ರ ಗೀತೆ, ಸ್ವತಂತ್ರ ನ್ಯಾಯಾಂಗ ಮತ್ತು ಶಾಸಕಾಂಗ, ಆರ್ಥಿಕ ನೀತಿಗಳನ್ನು ರೂಪಿಸುವ ಸ್ವಾತಂತ್ರ್ಯ, ಸ್ವಂತ ಮಿಲಿಟರಿ ಪಡೆ, ನಾಗರಿಕ ಸೇವಾ ಆಯೋಗವನ್ನು ಹೊಂದಿತ್ತು. ಆದರೆ ಸ್ವತಂತ್ರ
ಭಾರತದಲ್ಲಿ, ಈ ಎಲ್ಲ ವಿಷಯಗಳಲ್ಲಿನ ತನ್ನ ಅಧಿಕಾರವನ್ನು ಮೈಸೂರು ಬಿಟ್ಟುಕೊಡಬೇಕಾಯಿತು. ಪ್ರಸ್ತುತ ಕರ್ನಾಟಕ ಸರಕಾರವು ಕೇಂದ್ರಕ್ಕೆ ವಿವಿಧ ತೆರಿಗೆ, ಶುಲ್ಕಗಳನ್ನು ಪಾವತಿಸುತ್ತಿದೆ; ಹೆಚ್ಚು ಜಿಎಸ್‌ಟಿ ಸಂಗ್ರಹಿಸಿ ಪಾವತಿಸುತ್ತಿದ್ದರೂ ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಾಗ ರಾಜಕೀಯ ದೃಷ್ಟಿಯಿಂದ ತಾರತಮ್ಯ ಮಾಡುತ್ತಿದೆ ಎಂಬ ಕೂಗು ಹೊಮ್ಮುತ್ತಿದೆ.
ಅತಿವೃಷ್ಟಿ-ಅನಾವೃಷ್ಟಿಯಾದಾಗಲೂ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರವನ್ನು
ಅಂಗಲಾಚುವ ಸ್ಥಿತಿ ಕರ್ನಾಟಕಕ್ಕೆ ಬಂದಿರುವುದನ್ನು ಕಾಣಬಹುದು. ದೇಶಕ್ಕೇ ಮಾದರಿಯಾದ, ವೈದ್ಯಕೀಯ ಮತ್ತು
ಎಂಜಿನಿಯರಿಂಗ್ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ನಡೆಸುತ್ತಿತ್ತು; ಆದರೆ ಕೇಂದ್ರವು ‘ನೀಟ್’ ಪರೀಕ್ಷೆ ನಡೆಸುವ ಮೂಲಕ ಆ ಹಕ್ಕನ್ನೂ ಕಸಿದುಕೊಂಡಿದೆ. ಮೈಸೂರು ರಾಜ್ಯದಲ್ಲಿ ಪ್ರತಿನಿಧಿ ಸಭೆಯ ಮತ್ತು ವಿಧಾನ ಪರಿಷತ್‌ನ ಸದಸ್ಯರು ತಮ್ಮ ಅಭಿಪ್ರಾಯವನ್ನು ಕನ್ನಡದಲ್ಲಿ ವ್ಯಕ್ತಪಡಿಸುತ್ತಿದ್ದರು. ಆದರೆ ಪ್ರಸ್ತುತ ನಮ್ಮ ಸಂಸದರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸ ಲಾಗದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನೈಜಸ್ಥಿತಿಗಳ ಬಗ್ಗೆ ಚರ್ಚಿಸಿದರೆ ಹೈಕಮಾಂಡ್‌ನ ಕೆಂಗಣ್ಣಿಗೆ
ಗುರಿಯಾಗಬೇಕಾಗುತ್ತದೆಯೆಂದು ಸಂಸದರು ಸಂಸತ್ತಿನಲ್ಲಿ ಬಾಯಿಬಿಡಲು ಹೆದರುವಂತಾಗಿದೆ. ಈಗ, ಗ್ರಾಮ ಪಂಚಾ
ಯಿತಿ ಚುನಾವಣೆಯಿಂದ ಮೊದಲ್ಗೊಂಡು ಲೋಕಸಭಾ ಚುನಾವಣೆಯವರೆಗೆ ಅಭ್ಯರ್ಥಿ ಯಾರಾಗಬೇಕು, ಚುನಾ ವಣೆಯಲ್ಲಿ ಗೆದ್ದರೆ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ಯಾರಾಗಬೇಕು, ಸರಕಾರ ರಚಿಸಲು ಸಂಖ್ಯಾಬಲ ವಿಲ್ಲದಿದ್ದರೆ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಇತ್ಯಾದಿಗಳನ್ನು ನಿರ್ಧರಿಸುವುದು ದೆಹಲಿಯ ಹೈಕಮಾಂಡ್!
ಮಾತ್ರವಲ್ಲ, ಚುನಾವಣೆಯಲ್ಲಿ ಕರ್ನಾಟಕದ ಪ್ರಜೆಗಳು ಯಾರಿಗೆ ಮತಹಾಕಬೇಕೆಂಬುದನ್ನು ತನ್ನ ಸ್ಟಾರ್ ಪ್ರಚಾರಕರ ಮೂಲಕ ಹೇಳಿಸುವುದೂ ಇದೇ ಹೈಕಮಾಂಡ್; ತಾವು ಯಾರಿಗೆ ಮತಹಾಕಬೇಕೆಂಬುದನ್ನು ಈ ಪ್ರಚಾರಕರಿಂದ ಅವರ ಭಾಷೆಯಲ್ಲೇ ಕೇಳಬೇಕಾದ ದಯನೀಯ ಸ್ಥಿತಿ ಸ್ವಾಭಿಮಾನಿ ಕನ್ನಡಿಗರದ್ದು. ಒಟ್ಟಿನಲ್ಲಿ ಗುಲಾಮಗಿರಿ ಕೊನೆ ಯಾಗಿಲ್ಲ. ಚುನಾವಣೆಗೆ ಮುನ್ನ ಮತಬೇಟೆಗೆ ಮನೆಮನೆಗೆ ಬರುವ ಅಭ್ಯರ್ಥಿ, ಗೆದ್ದ ನಂತರ ಮತದಾರರನ್ನು ತನ್ನ ಮನೆ ಬಾಗಿಲಲ್ಲಿ ನಾಯಿಯಂತೆ ಕಾಯಿಸುತ್ತಾನೆ. ಮತ ಚಲಾವಣೆ ಅವಧಿ ಮುಗಿದಾಕ್ಷಣ ಕರ್ನಾಟಕದ ಮತದಾರರ ಸ್ಥಿತಿಯು, ಉಪಯೋಗಿಸಿ ಬಿಸಾಕುವ ‘ಟಿಶ್ಯೂ ಪೇಪರ್’ನಂತೆ ಆಗಿರುವುದು ವಿಷಾದನೀಯ!
(ಲೇಖಕರು ಇತಿಹಾಸಕಾರರು
ಹಾಗೂ ಸಂಶೋಧಕರು)
ಇದನ್ನೂ ಓದಿ: Ravi Hunz Column: ಇದು ಕಲ್ಯಾಣ ಕ್ರಾಂತಿಯ ಸತ್ಯದರ್ಶನ !