Friday, 13th December 2024

ಬ್ಯಾಂಕುಗಳ ಸೇವಾ ಶುಲ್ಕ: ಯಾವುದು ಸರಿ, ಯಾವುದು ತಪ್ಪು ?

ಅವಲೋಕನ

ರಮಾನಂದ ಶರ್ಮ

ನವೆಂಬರ್ 1, 2020ರಿಂದಲೇ ಜಾರಿಯಾಗುವಂತೆ ಕೆಲವು ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ನಿಗದಿತ ಸಂಖ್ಯೆೆ ಬಳಿಕದ ಪ್ರತಿ ಠೇವಣಿ ಮತ್ತು ನಗದು ಹಿಂಪಡೆತಕ್ಕೆ ಮತ್ತು ಬ್ಯಾಂಕ್ ರಜಾದಿನಗಳು ಮತ್ತು ಬ್ಯಾಂಕುಗಳ ಕರ್ತವ್ಯದ ಅವಧಿ ಮುಗಿದ ಬಳಿಕ ಎಟಿಎಂ ನಲ್ಲಿ ಹಣ ಜಮಾ ಮಾಡುವುದರ ಮೇಲೂ ಶುಲ್ಕ ವಿಧಿಸುವ ನಿರ್ಧಾರ ಮಾಡಿದ್ದು, ದೇಶಾದ್ಯಂತ ಬ್ಯಾಂಕ್ ಗ್ರಾಹಕರ ಒಕ್ಕೊರಲಿನ ಆಕ್ರೋಶದ ನಂತರ, ಹಣಕಾಸು ಖಾತೆಯ ನಿರ್ದೇಶನದಂತೆ ಈ ಹೆಚ್ಚಳವನ್ನು ಸದ್ಯ ಹಿಂಪಡೆಯಲಾಗಿದೆ.

ಈ ಹೆಚ್ಚಳ ಕೆಲವೇ ಬ್ಯಾಂಕುಗಳಿಗೆ ಸೀಮಿತವಾದರೂ, ಅದು ಸಮೂಹ ಸನ್ನಿಯಂತೆ ಎಲ್ಲಾ ಬ್ಯಾಂಕುಗಳಿಗೆ ವಿಸ್ತರಿಸುವುದು ತೀರಾ ಸಾಮಾನ್ಯ. ಗ್ರಾಹಕರು ಹಣಕಾಸು ಮಂತ್ರಾಲಯದ ಈ ಕ್ರಮದಿಂದ ನಿಟ್ಟುಸಿರು ಬಿಟ್ಟರೂ, ಮುಂದಿನ ದಿನಗಳಲ್ಲಿ ಈ ಹೆಚ್ಚಳ ಅದೇ ರೂಪದಲ್ಲಿ ಆಥವಾ ಬೇರೆ ಯಾವುದಾದರೂ ರೂಪದಲ್ಲಿ ಪುನಃ ಒಕ್ಕರಿಸುವುದನ್ನು ತಳ್ಳಿಹಾಕಲಾಗದು.

ಯಾವ ರೀತಿ ಹೆಚ್ಚಳ?: ಯಾವುದೇ ಶುಲ್ಕವಿಲ್ಲದೇ ನಗದು ಠೇವಣಿ ಮಾಡುವ ಪ್ರಮಾಣವನ್ನು ತಿಂಗಳಿಗೆ 3ಕ್ಕೆ ಇಳಿಸಲಾಗಿದೆ.
ನಂತರದ ಪ್ರತಿ ವ್ಯವಹಾರಕ್ಕೂ 50ರು. ನಂತೆ ಶುಲ್ಕ ವಿಧಿಸಲಾಗುವುದು. ಜನಧನ ಖಾತೆಯವರಿಗೆ ಮತ್ತು ಗ್ರಾಮಾಂತರ ಪ್ರದೇಶ ಗಳಿಗೆ ವಿನಾಯಿತಿ ನೀಡಿದರೂ, ಹಿರಿಯ ನಾಗರಿಕರು, ಪಿಂಚಣಿದಾರರು ಮತ್ತು ಉಳಿತಾಯ ಖಾತೆಯವರಿಗೆ 40 ರು. ಶುಲ್ಕ ವಿಧಿಸ ಲಾಗುವುದು.

ಮಾಸಿಕ 3 ಬಾರಿ ನಗದು ಹಿಂಪಡೆತ ಉಚಿತ. ನಂತರದ ಪ್ರತಿ ಹಿಂಪಡೆತಕ್ಕೆ ಮೆಟ್ರೋ ಸಿಟಿಗಳಲ್ಲಿ 125 ಮತ್ತು ಇತರ ಪ್ರದೇಶಗಳಲ್ಲಿ 100ರು. ಶುಲ್ಕ ವಿಧಿಲಾಗುವುದು. ಖಾಸಗಿ ಬ್ಯಾಂಕ್ ಒಂದು, ರಜೆ ದಿನ ಮತ್ತು ಬ್ಯಾಂಕ್ ವ್ಯವಹಾರದ ಸಮಯ ಮುಗಿದ ನಂತರ ಎಟಿಎಂಗಳಲ್ಲಿ 10000ಕ್ಕಿಂತ ಹೆಚ್ಚು ಠೇವಣಿಗೆ 50 ರು. ಶುಲ್ಕ. ಅಂದರೆ ಸಾಯಂಕಾಲ 6ರಿಂದ ಮುಂಜಾನೆ 8ರವರೆಗೆ ಇದು ಅನ್ವಯವಾಗುತ್ತದೆ.

ಯಾಕೆ ಈ ಏರಿಕೆ?: ಯಾವುದೇ ಶುಲ್ಕವಾದರೂ ಸ್ಥಿರವಾಗಿರುವುದಿಲ್ಲ. ಅದು ಕಾಲಕ್ಕೆ ತಕ್ಕಂತೆ, ಹಣದುಬ್ಬರಕ್ಕೆ ಸಮೀಕರಿಸಿ ಏರುತ್ತಲೇ ಹೋಗುವುದು ಜಾಗತಿಕ ನಿಯಮ. ಇದು ಬ್ಯಾಂಕುಗಳಿಗೂ ಅನ್ವಯವಾಗುತ್ತದೆ. ಬ್ಯಾಂಕುಗಳಲ್ಲಿ ಅನೇಕ ಸೇವೆಗಳು ಉಚಿತ ದೊರಕುತ್ತಿದ್ದವು. ಮನಮೋಹನ ಸಿಂಗ್ – ನರಸಿಂಹರಾವ್‌ರ ಆರ್ಥಿಕ ಸುಧಾರಣೆ, ಜಾಗತೀಕರಣ ಮತ್ತು ಉದಾರೀ ಕರಣದ ನಂತರ ಈವರೆಗೆ ಇದ್ದ ಶುಲ್ಕದ ಪ್ರಮಾಣ ಕೂಡಾ ಏರತೊಡಗಿತು ಮತ್ತು ಹೊಸ ಹೊಸ ಶುಲ್ಕಗಳ ಅನಾವರಣ ವಾಯಿತು. ಶುಲ್ಕಗಳ ವಿಶೇಷವೆಂದರೆ, ಆರಂಭದಲ್ಲಿ ವೆಚ್ಚದ ಸ್ವಲ್ಪ ಭಾಗ ರಿಕವರಿಯಾಗಲಿ ಎಂದು ಇರುತ್ತದೆ. ನಂತರದ ದಿನ ಗಳಲ್ಲಿ ಇದು ಸಂಪೂರ್ಣ ವೆಚ್ಚವನ್ನು ರಿಕವರಿ ಮಾಡುವ ಮೋಡ್‌ಗೆ ತಿರುಗುತ್ತದೆ. ಕೊನೆಗೆ ವಲಯದ ಇನ್ನಿತರ ಸೇವೆಗಳಿಗೆ ಸಾಟಿ ಯಾಗಲಿ ಎಂದು ಏರುತ್ತದೆ.

ಬ್ಯಾಂಕುಗಳು ನಗದು ವ್ಯವಹಾರಕ್ಕೆ ಶುಲ್ಕ ಹೆಚ್ಚಿಸುವುದರ ಹಿಂದೆ, ಬ್ಯಾಂಕುಗಳಲ್ಲಿ ಮತ್ತು ಎಟಿಎಂಗಳಲ್ಲಿ ಗ್ರಾಹಕರ ದಟ್ಟನೆಯನ್ನು ನಿಯಂತ್ರಿಸುವುದು ಮತ್ತು ಡಿಜಿಟಲೀಕರಣಕ್ಕೆ ಇನ್ನೂ ಹೆಚ್ಚು ಒತ್ತು ನೀಡುವುದು ಎಂದು ಹೇಳಲಾಗುತ್ತದೆ. ಹಾಗೆಯೇ ಬ್ಯಾಂಕುಗಳಲ್ಲಿ ಸಿಬ್ಬಂದಿ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದ್ದು, ಬ್ಯಾಂಕುಗಳಲ್ಲಿ ದಟ್ಟನೆ ಕಡಿಮೆ ಮಾಡುವ ಅನಿವಾರ್ಯತೆ ಕೂಡ ಇದೆ.

ಬ್ಯಾಂಕುಗಳಲ್ಲಿ ಶುಲ್ಕ ಏಕೆ ಏರುತ್ತದೆ: ಬ್ಯಾಂಕುಗಳಲ್ಲಿ ಅನುತ್ಪಾದಕ – ಸುಸ್ತಿ ಸಾಲ ಏರುತ್ತಿದ್ದು, ಇದು ಬ್ಯಾಂಕುಗಳ ಬಡ್ಡಿ, ಆದಾಯದ ಮೇಲೆ ಪರಿಣಾಮ ಬೀರಿದೆ. ಹೊಸ ನಿಯಮಾವಳಿ ಪ್ರಕಾರ ಬ್ಯಾಂಕುಗಳು ವಸೂಲಿಯಾದ ಬಡ್ಡಿಯನ್ನು ಮಾತ್ರ ಆದಾಯವೆಂದು ಪರಿಗಣಿಸಬೇಕು. ವಸೂಲಿಯಾಗ ಬೇಕಾದ ಬಡ್ಡಿಯನ್ನು ಆದಾಯವೆಂದು ತೆಗೆದುಕೊಳ್ಳುವಂತಿಲ್ಲ. ಹಾಗೆಯೇ ಸಾಲ ವಿಲೇವಾರಿಯೂ ನಿರೀಕ್ಷೆಯಷ್ಟು ಇಲ್ಲ ಎಂದು ಬ್ಯಾಂಕಿಂಗ್ ವಲಯ ಹೇಳುತ್ತಿದೆ.

ಅರ್ಥಿಕತೆಯು low onterest regime ನಲ್ಲಿದ್ದು, ಬಡ್ಡಿ ಆದಾಯ ಕುಸಿಯುತ್ತಿದೆ. ನೀಡುವ ಮತ್ತು ಪಡೆಯುವ ಬಡ್ಡಿಯಲ್ಲಿ ವ್ಯತ್ಯಾಸನ್ಯಾರೋ ಆಗುತ್ತಿದೆ. ಅಂತೆಯೇ, ಬ್ಯಾಂಕುಗಳು ತಮ್ಮ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಡ್ಡಿಯೇತರ ಆದಾಯ ವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯಲ್ಲಿವೆ. ಅಂತೆಯೇ ಬ್ಯಾಂಕುಗಳು ಈ ಮಾರ್ಗವನ್ನು ಅನುಸರಿಸಿ ಆದಾಯವನ್ನು ಹೆಚ್ಚಿಸಿಕೊಳ್ಳುತ್ತವೆ. ಹಾಗೆಯೇ, ಕರೋನಾ – ಕೋವಿಡ್ ಕೂಡ ಬ್ಯಾಂಕುಗಳ ವ್ಯವಹಾರದ ಮೇಲೆ ಮತ್ತು ಅವುಗಳ ಆದಾಯದ ಮೇಲೆ ದುಷ್ಪರಿಣಾಮ ಬೀರಿದ್ದು, ಸಾಲ ವಸೂಲಾತಿಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಬ್ಯಾಂಕುಗಳು ದುಸ್ಥಿತಿಯಲ್ಲಿ ಇರುವು ದನ್ನು ಅಲ್ಲಗೆಳೆಯಲಾಗದು.

ಬ್ಯಾಂಕುಗಳು ಗ್ರಾಹಕರಿಗೆ ಉತ್ತಮವಾದ ಮತ್ತು ಶೀಘ್ರ ಸೇವೆಯನ್ನು ಒದಗಿಸಲು ಬ್ಯಾಂಕುಗಳ ಸಂಪೂರ್ಣ ಗಣಕೀಕರಣ
ಮಾಡುವುದರೊಂದಿಗೆ, ಹಲವಾರು ವಿದ್ಯುನ್ಮಾನ ಆವಿಷ್ಕಾರಗಳನ್ನು ಅಳವಡಿಸಿವೆ. ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡಲು
ಡಿಜಿಟಲೀಕರಣ ಕೈಕೊಂಡಿದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳು ಭಾರೀ ಬಂಡವಾಳ ಹೂಡಿವೆ, ಮತ್ತು ಲಕ್ಷಾಂತರ ಕೋಟಿ ವೆಚ್ಚ
ಮಾಡಿವೆ. ಇವುಗಳ ನಿರ್ವಹಣೆ ಇನ್ನೊಂದು ವೆಚ್ಚದಾಯಕ ಅಂಶ.

ಗಣಕ ಯಂತ್ರಗಳು ಮತ್ತು ಇನ್ನಿತರ ವಿದ್ಯುನ್ಮಾನ ಆವಿಷ್ಕಾರಗಳನ್ನು ಮೂರು ವರ್ಷದಲ್ಲಿ ಬದಲಾಯಿಸಬೇಕಾಗುತ್ತದೆ. ಬ್ಯಾಂಕ್‌ನಲ್ಲಿ ಕೋರ್ ಬ್ಯಾಂಕ್ ವ್ಯವಸ್ಥೆಯನ್ನು ಅಳವಡಿಸಿದ ಮೇಲೆ ಬ್ಯಾಂಕಿನ ಬಹುತೇಕ ವ್ಯವಹಾರಗಳು ಟೆಲಿಫೋನ್ ಲೈನ್ ಮೇಲೆ ಮತ್ತು ಸ್ಯಾಟಲೈಟ್ ಸಂಪರ್ಕದ ಮೇಲೆ ನಡೆಯುವುದರಿಂದ ಅದರ ವೆಚ್ಚವೂ ಗಮನಾರ್ಹವಾಗಿರುತ್ತದೆ. ಒಂದು  ಎಟಿಎಂನ ಬೆಲೆ ಸುಮಾರು 10 ಲಕ್ಷ ಇದ್ದು, ಅದರ ನಿರ್ವಹಣಾ ವೆಚ್ಚ (ಬಾಡಿಗೆ – ಸೆಕ್ಯುರಿಟಿ, ವಿದ್ಯುತ್, ಹವಾನಿಯಂತ್ರಣ) ಮಾಸಿಕ ಸುಮಾರು 70000 ಸಾವಿರ ಆಗುತ್ತದೆ.

ಎಟಿಎಂಗಳು ಬ್ಯಾಂಕ್ ಕಟ್ಟಡದ ವ್ಯಾಪ್ತಿಯಿಂದ ದೂರ ಇದ್ದರೆ ಬಾಡಿಗೆ ಬೇರೆ. ಅಂತೆಯೇ, ಬ್ಯಾಂಕುಗಳು ತಮ್ಮ ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ಆದಾಯದ ಬೇರೆ ಬೇರೆ ಮೂಲಗಳನ್ನು ಹುಡುಕುತ್ತವೆ ಮತ್ತು ಈಗಾಗಲೇ ಇರುವ ಶುಲ್ಕವನ್ನು ಹೆಚ್ಚು ಮಾಡುತ್ತಿರುತ್ತವೆ. ಎಟಿಎಂ ಸೌಲಭ್ಯ ಮತ್ತು ಬ್ಯಾಂಕುಗಳು ನೀಡುವ ಇನ್ನಿತರ ಹಲವಾರು ಸೌಲಭ್ಯಗಳನ್ನು ಪಡೆಯು ವವರು, ಈ ಸೌಲಭ್ಯ ನೀಡಲು ಬ್ಯಾಂಕುಗಳು ವೆಚ್ಚ ಮಾಡುವ ಮೊತ್ತದ ಬಗೆಗೆ ಎಂದೂ ಯೋಚಿಸುವುದಿಲ್ಲ ಎಂದು ಬ್ಯಾಂಕರು ಗಳು ಅಭಿಪ್ರಾಯಪಡುತ್ತಾರೆ.

ಬ್ಯಾಂಕುಗಳು ಒದಗಿಸುವ ಸೇವೆಯ ಬಗೆಗೆ ಮತ್ತು ಅದರಿಂದಾಗುವ ಅನುಕೂಲದ ಬಗೆಗೆ ಯಾರೂ ಮಾತನಾಡುವುದಿಲ್ಲ. ಪ್ರತಿಯೊಬ್ಬ ಗ್ರಾಹಕನೂ ಉಚಿತ ಸೇವೆ ಅಥವಾ ಪಡೆಯುವ ಸೇವೆಗೆ ಅತಿ ಕಡಿಮೆ ಶುಲ್ಕವನ್ನು ನಿರೀಕ್ಷಿಸುತ್ತಾರೆ ಎಂದು ಅವರು ಹೇಳುತ್ತಾರೆ. ನಿರಂತರವಾಗಿ ಬಳಸುವ ಸಾರಿಗೆ, ನೀರು, ವಿದ್ಯುತ್, ಮೊಬೈಲ್, ಅಡುಗೆ ಗ್ಯಾಸ್, ವಾಹನ ಇಂಧನ ದರ ಏರಿದಾಗ ಯಾರೂ ತುಟಿಪಿಟಕ್ಕೆನ್ನುವುದಿಲ್ಲ ಎನ್ನುವ ಬ್ಯಾಂಕರುಗಳ ಪ್ರತಿಕ್ರಿಯೆಯಲ್ಲಿ ತೂಕವಿದೆ.

ಏರುತ್ತಿರುವ ಹಣ ದುಬ್ಬರಕ್ಕೆ ಪದಾರ್ಥಗಳ ಮತ್ತು ಸೇವೆಯು ದುಬಾರಿಯಾಗುವಾಗ, ಈ ಮಾನದಂಡ ಬ್ಯಾಂಕ್ ಸೇವೆಗಳಿಗೆ ಇಲ್ಲವೇ? ಬ್ಯಾಂಕ್ ಸೇವೆಗಳ ಶುಲ್ಕ ಹೆಚ್ಚು ಎಂದು ಜನಸಾಮಾನ್ಯರ ಅನಿಸಿಕೆ ಇದ್ದರೂ, ಇನ್ನಿತರ ವಲಯಗಳಲ್ಲಿ ನೀಡುವ ಸೇವೆಗಳಿಗೆ ವಿಧಿಸುವ ಶುಲ್ಕಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ ಎನ್ನುವ ಹಣಕಾಸು ಮಂತ್ರಿಗಳ ಹೇಳಿಕೆಯಲ್ಲಿ ಅರ್ಥವಿದೆ. ನಗರಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಶುಲ್ಕ ತಾಸಿಗೆ 10-40ರವರೆಗೆ ಇದ್ದರೆ, ಕಾರುಗಳ ಪಾರ್ಕಿಂಗ್ ಶುಲ್ಕ 20-100ರವರೆಗೆ
ಇರುತ್ತದೆ.

ಮಲ್ಟಿಪ್ಲೆಕ್ಸ್‌ ಮತ್ತು ಮಾಲ್‌ಗಳಲ್ಲಿ ಅವರು ಹೇಳಿದ್ದೇ ಶುಲ್ಕ. ಗ್ರಾಹಕರು ಬ್ಯಾಂಕ್ ಸೇವೆಗಳ ಶುಲ್ಕವನ್ನು ಬೇರೆ ಸೇವೆಗಳ ಸಂಗಡ ಹೋಲಿಸದೇ ಆಕ್ರೋಶ ವ್ಯಕ್ತಪಡಿಸುತ್ತಾರೆ ಎನ್ನುವ ಬ್ಯಾಂಕುಗಳ ಬೇಸರದಲ್ಲಿ ಅರ್ಥವಿದೆ. ಒಂದು ಕಾಲಕ್ಕೆ ಬ್ಯಾಂಕುಗಳಲ್ಲಿ ಚೆಕ್ ಬುಕ್‌ಗಳು ಉಚಿತವಾಗಿದ್ದವು. ನಂತರ ಕ್ರಮೇಣ 50 ಚೆಕ್‌ವರೆಗೆ ಉಚಿತವಾಗಿ, ಈಗ ಬಹುತೇಕ ಬ್ಯಾಂಕುಗಳು ಚೆಕ್‌ಗಳನ್ನು ಉಚಿತ ವಾಗಿ ಪೂರೈಸುವುದಿಲ್ಲ. ಚೆಕ್ ಗಳನ್ನು ಮುದ್ರಿಸುವ ವೆಚ್ಚ ದುಬಾರಿಯಾಗಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತದೆ.

ಬ್ಯಾಂಕುಗಳು ತಮ್ಮ ಸೇವಾ ಶುಲ್ಕವನ್ನು ನಿಗದಿ ಪಡಿಸಬಹುದಾದರೂ, ಅದು ಪಾರದರ್ಶಕ ವಾಗಿರಬೇಕು, ತಾರತಮ್ಯ ಇರಬಾ ರದು ಮತ್ತು ಯೋಗ್ಯವಾಗಿರಬೇಕು ಎನ್ನುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ನಿಗಾವಹಿಸುತ್ತದೆ. ಸರಕಾರಿ ಬ್ಯಾಂಕುಗಳಿಗೆ ಹೋಲಿಸಿ ದರೆ, ಖಾಸಗಿ ಬ್ಯಾಂಕುಗಳಲ್ಲಿ ಸೇವಾ ಶುಲ್ಕ ಹೆಚ್ಚು ಎನ್ನಲಾಗುತ್ತಿದೆ. ಈಗ ಬ್ಯಾಂಕಿಂಗ್ ವಲಯದಲ್ಲಿ ಖಾಸಗೀಕರಣದ ಮಾತು ಕೇಳಿ ಬರುತ್ತಿದ್ದು, ಖಾಸಗೀಕರಣವಾದರೆ, ಬ್ಯಾಂಕಿಂಗ್ ಸೇವೆ ಇನ್ನೂ ದುಬಾರಿಯಾಗುವುದನ್ನು ಅಲ್ಲಗಳೆಯಲಾಗದು. ಅವುಗಳ ಏರಿಕೆಮೇಲೆ ನಿಯಂತ್ರಣ ಹೇರುವುದು ಅಸಾಧ್ಯ. ಪ್ರತಿಯೊಂದು ಸೇವೆಯನ್ನು ನೀಡುವಾಗ ಅದಕ್ಕೆ ತಗಲುವ ವೆಚ್ಚವನ್ನು ನಿಖರವಾಗಿ ಲೆಕ್ಕಹಾಕಿ, ಸ್ವಲ್ಪ ಮಾರ್ಜಿನ್ ಇರಿಸಿಕೊಂಡು ನಿಗದಿ ಪಡಿಸಲಾಗುತ್ತದೆ.