ಬೆಂಗಳೂರು: ಗೃಹಿಣಿಯ ಅರಿವಿಲ್ಲದಂತೆ ಅವರ ಮೊಬೈಲ್ನಲ್ಲೇ ಆ್ಯಪ್ (Mobile App) ಡೌನ್‌ಲೋಡ್ ಮಾಡಿ ಬೆತ್ತಲೆ ವಿಡಿಯೋ ಸೆರೆ ಹಿಡಿದು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ (Blackmail) ಹಾಗೂ ಅತ್ಯಾಚಾರ (Physical Abuse) ಎಸಗಿದ್ದ ಆರೋಪಿ ವಿರುದ್ಧ ಎಫ್‌ಐಆರ್ (Bengaluru Crime News) ದಾಖಲಾಗಿದೆ.
ಆರೋಪಿ ಸಂಜಯ್ (27) ಎಂಬಾತನ ವಿರುದ್ಧ ಆರ್.ಆರ್.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತೆ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವಿಷ್ಣು ಎಂಬಾತನ ಮೂಲಕ 2023ರಲ್ಲಿ ಆರೋಪಿ ಸಂಜಯ್‌ಕುಮಾರ್ ಪರಿಚಯ ಆಗಿತ್ತು. ಮೂವರೂ ಆತ್ಮೀಯರಾಗಿದ್ದರು. ಒಟ್ಟಿಗೆ ಸುತ್ತಾಡುತ್ತಿದ್ದರು. ಈ ನಡುವೆ ಸಂತ್ರಸ್ತೆಯ ಮೊಬೈಲ್ ಅನ್ನು ಕೆಲಕಾಲ ಸಂಜಯ್ ಉಪಯೋಗಿಸಿದ್ದ. 2024ನೇ ಫೆಬ್ರವರಿಯಲ್ಲಿ ಸಂಜಯ್, ಸಂತ್ರಸ್ತೆಯ ಮೊಬೈಲ್‌ನಲ್ಲಿ ‘ಥರ್ಡ್ ಪಾರ್ಟಿ ಅಪ್ಲಿಕೇಷನ್’ ಅನ್ನು ಆಕೆಗೆ ತಿಳಿಯದಂತೆ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ಸ್ಕ್ರೀನ್‌ನಲ್ಲಿ ಕಾಣದಂತೆ ಇಟ್ಟುಕೊಂಡಿದ್ದ.
ಸಂತ್ರಸ್ತೆ ಮನೆಯಲ್ಲಿ ಇದ್ದಾಗ ತುರ್ತು ಕರೆ ಬರಬಹುದೆಂದು ಭಾವಿಸಿ, ಮೊಬೈಲ್ ಅನ್ನು ಸ್ನಾನದ ಕೋಣೆಗೆ ಕೊಂಡೊಯ್ದಿದ್ದರು. ಅದೇ ವೇಳೆ ಸಂಜಯ್ ಸಂತ್ರಸ್ತೆಯ ಮೊಬೈಲ್‌ಗೆ ಹಾಕಿದ್ದ ಅಪ್ಲಿಕೇಷನ್ ಆನ್ ಮಾಡಿಕೊಂಡು ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ. ಅದನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದ. ನಂತರ ವಿಡಿಯೊ ಕಳುಹಿಸಿ, ಅದನ್ನು ಇನ್ನೊಬ್ಬ ಸ್ನೇಹಿತ ಮಾಡಿರುವುದಾಗಿ ಸುಳ್ಳು ಹೇಳಿದ್ದ. ವಿಡಿಯೊ ಗಮನಿಸಿ ಆಘಾತಕ್ಕೆ ಒಳಗಾಗಿದ್ದ ಸಂತ್ರಸ್ತೆ ಸಂಜಯ್ ಬಳಿ ಮೊದಲು ಆ ವಿಡಿಯೊ ಡಿಲಿಟ್ ಮಾಡುವಂತೆ ಕೇಳಿಕೊಂಡಿದ್ದರು. ವಿಡಿಯೊ ಡಿಲಿಟ್ ಮಾಡಿದ್ದೇನೆ ಎಂದು ಹೇಳಿ ಪ್ರೀತಿಸುವಂತೆ ಬಲವಂತ ಮಾಡಿದ್ದ. ನಿನ್ನ ಪತಿ ಮದ್ಯ ಸೇವಿಸುತ್ತಾರೆ. ಅವರನ್ನು ಬಿಟ್ಟು ಬರುವಂತೆಯೂ ಹೇಳಿದ್ದ ಎಂಬುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಆರೋಪಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿಯಬಿಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ₹15 ಸಾವಿರ ಪಡೆದಿದ್ದ. ಸೆ.7ರಂದು ಸಂತ್ರಸ್ತೆಯನ್ನು ಮಾತನಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಆಕೆಯ ಮೊಬೈಲ್ ಕಸಿದುಕೊಂಡು ಒಡೆದು ಹಾಕಿದ್ದ. ಬಳಿಕ ಅತ್ಯಾಚಾರ ಎಸಗಿದ್ದ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Road Accident: ಆಟೋ- ಕಾರು ಅಪಘಾತ, ಇಬ್ಬರು ಸಾವು