Friday, 22nd November 2024

Modi v/s Kharge: ಬಿಜೆಪಿಯ ʻಬಿʼ ಅಂದ್ರೆ ದ್ರೋಹ ಎಂದರ್ಥ; ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು

modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನಡುವಿನ ವಾಕ್ಸಮರ(Modi v/s Kharge) ತಾರಕಕ್ಕೇರಿದೆ. ಪಕ್ಷದ ವಿರುದ್ಧ ಮೋದಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಬಿ ಅದರೆ ಬಿಟ್ರೇಯಲ್‌(ದ್ರೋಹ), ಜೆ ಅಂದರೆ ಜುಮ್ಲಾ(ಖಾಲಿ ಭರವಸೆಗಳು) ಎಂದಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತೀವ್ರವಾಗಿ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ‘ಸುಳ್ಳು, ಮೋಸ, ವಂಚನೆ, ಲೂಟಿ ಮತ್ತು ಪ್ರಚಾರ’ ಎಂಬ ಐದು ವಿಶೇಷಣಗಳು ಬಿಜೆಪಿ ಸರ್ಕಾರವನ್ನು ಅತ್ಯುತ್ತಮವಾಗಿ ವ್ಯಾಖ್ಯಾನಿಸುತ್ತವೆ ಎಂದು ಟಾಂಗ್‌ ಕೊಟ್ಟಿದ್ದಾರೆ.

ಕಾಂಗ್ರೆಸ್​ ಆಡಳಿತದಲ್ಲಿರುವ ಸರ್ಕಾರಗಳ ವಿರುದ್ಧ ಮೋದಿ ವಾಗ್ದಾಳಿ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದು, ವರ್ಷಕ್ಕೆ‌ 2 ಕೋಟಿ‌ ಉದ್ಯೋಗ ಸೃಷ್ಟಿಯ ನಿಮ್ಮ ಭರವಸೆ ಏನಾಯ್ತು? ಭಾರತದ ನಿರುದ್ಯೋಗ ದರವು 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಯಾಕೆ? ಜನರ‌ ಉಳಿತಾಯದ ಮಟ್ಟ ಕನಿಷ್ಟ ಮಟ್ಟಕ್ಕೆ ಏಕೆ ಕುಸಿದಿದೆ. ನಿಮ್ಮ ಅಚ್ಛೇ ದಿನದ ಭರವಸೆ ಏನಾಯ್ತು ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ನೀವು ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ದೆಹಲಿ ಏರ್​ಪೋರ್ಟ್​ನ ಮೇಲ್ಚಾವಣಿ ಹಾರಿಹೋಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಸೋರುತ್ತಿದೆ. ಅಟಲ್ ಸೇತು ಬಿರುಕು ಬಿಟ್ಟಿದೆ, ಗುಜರಾತ್​ನ ಮೊರ್ಬಿ ಸೇತುವೆ ಕುಸಿದಿದೆ. ಬಿಹಾರದಲ್ಲಿ ಹೊಸ ಸೇತುವೆಗಳು ಕುಸಿದು ಬೀಳುವುದು ಸಾಮಾನ್ಯವಾಗಿದೆ. ದೇಶದ ಹಲವೆಡೆ ಲೆಕ್ಕವಿಲ್ಲದಷ್ಟು ರೈಲು ಅಪಘಾತಗಳು ಸಂಭವಿಸಿವೆ, ಆದರೆ ಸಚಿವರು ರೀಲ್ಸ್ ಪ್ರಚಾರದಲ್ಲಿ‌ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೋಸದಿಂದ ಮೋದಿ ಚುನಾವಣೆ ಗೆದ್ದಿದ್ದಾರೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಳೆದ ಹತ್ತು ವರ್ಷದಿಂದ ಗೆದ್ದಿರುವ ಚುನಾವಣೆಗಳೆಲ್ಲವೂ ಮೋಸದಿಂದಲೇ ಗೆದ್ದಿದ್ದಾರೆ. ಹರಿಯಾಣದಲ್ಲಿ ರಾತ್ರೋ ರಾತ್ರಿ ಬದಲಾವಣೆ ಮಾಡಿಕೊಂಡರು. ಮತ ಎಣಿಕೆ ವೇಳೆ ಕಾಂಗ್ರೆಸ್‌ 66 ಸ್ಥಾನದಿಂದ ಏಕಾಏಕಿ 33 ಸ್ಥಾನಕ್ಕೆ ಬರಲು ಸಾಧ್ಯವೇ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಇಡೀ ವಿಶ್ವದಲ್ಲಿ ಬೆರಳೆಣಿಕೆ ದೇಶಗಳಲ್ಲಿ ಬಿಟ್ಟು ಎಲ್ಲಾ ದೇಶಗಳಲ್ಲೂ ಬ್ಯಾಲೆಟ್‌ ಪೇಪರ್‌ ಮೂಲಕವೇ ಚುನಾವಣೆ ನಡೆಸುತ್ತಾರೆ. ಇವಿಎಂ ಹ್ಯಾಕ್‌ ಮಾಡಬಹುದು ಎಂದು ಎಲಾನ್‌ ಮಸ್ಕ್‌ ಅವರೇ ಹೇಳಿದ್ದಾರೆ. ಇದನ್ನು ನಾವು ಹೇಳಿದರೆ ಸಾಬೀತುಪಡಿಸಿ ಎನ್ನುತ್ತಾರೆ ಅಥವಾ ಸಿದ್ದರಾಮಯ್ಯ ಗೆದ್ದಾಗ ಏನೂ ಇರಲಿಲ್ಲವೇ ಎನ್ನುತ್ತಾರೆ. ಯಾರಿಗೆ ಎಲ್ಲಿ ಹೇಗೆ ಮಾಡಬೇಕು ಎಂಬುದೂ ಸಹ ಪ್ರೋಗ್ರಾಂ ಮಾಡಿರುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು.

ಮೋದಿ ಹೇಳಿದ್ದೇನು?

ಕಾಂಗ್ರೆಸ್‌ನ ರಾಜ್ಯ ಘಟಕಗಳು ಸರಿಯಾಗಿ ಬಜೆಟ್‌ನಲ್ಲಿ ಭರವಸೆಗಳನ್ನು ನೀಡಬೇಕು ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮೋದಿ ಅವರು ವಿರೋಧ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಭಿವೃದ್ಧಿ ಪಥ ಮತ್ತು ಆರ್ಥಿಕ ಸ್ಥಿತಿ ಅತ್ಯಂತ ಹೀನಾಯವಾಗಿದೆ ಎಂದು ಪ್ರಧಾನಿ ಹೇಳಿದರು.

“ಕಾಂಗ್ರೆಸ್ ಪಕ್ಷಕ್ಕೆ ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಸರಿಯಾಗಿ ಜಾರಿಗೊಳಿಸುವುದು ಕಠಿಣ ಅಥವಾ ಅಸಾಧ್ಯ ಎಂದಿದ್ದರು. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಈ ರಾಜ್ಯಗಳಿಗೆ ಕಾಂಗ್ರೆಸ್‌ನ ಭರವಸೆಗಳು ಈಡೇರಿಲ್ಲ, ಇದು ಈ ರಾಜ್ಯಗಳ ಜನರಿಗೆ ಮಾಡಿದ ಭೀಕರ ಮೋಸ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Mallikarjun Kharge: 10 ವರ್ಷ ನರೇಂದ್ರ ಮೋದಿ ಗೆದ್ದಿದ್ದು ಮೋಸ, ಇವಿಎಂ ಹ್ಯಾಕ್‌ನಿಂದ: ಮಲ್ಲಿಕಾರ್ಜುನ ಖರ್ಗೆ