ಬೆಂಗಳೂರು: ಆರ್‌ಸಿಬಿ(RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಬರೋಬ್ಬರಿ 21 ಕೋಟಿ ರೂ. ಮೊತ್ತಕ್ಕೆ ತಂಡದಲ್ಲಿ ರಿಟೇನ್(ipl 2025 retention) ಆಗಿದ್ದಾರೆ. ಇದರೊಂದಿಗೆ ಅವರು ಮುಂದಿನ ಮೂರು ವರ್ಷವೂ ಆರ್‌ಸಿಬಿ ತಂಡದ ಪರ ಆಡುವುದು ಮತ್ತು ಆರ್‌ಸಿಬಿ ತಂಡದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸುವುದು ಖಚಿತಗೊಂಡಿದೆ. ಮುಂದಿನ 3 ವರ್ಷಗಳಲ್ಲಿ ಒಮ್ಮೆಯಾದರೂ ಕಪ್ ಗೆಲ್ಲುವ ಸಂಕಲ್ಪ ಮಾಡಿದ್ದಾರೆ.
ಮುಂಬರುವ ಹರಾಜಿನಲ್ಲಿ ಆರ್‌ಸಿಬಿ ತಂಡವನ್ನು ಹೊಸದಾಗಿ ಮತ್ತು ಬಲಿಷ್ಠವಾಗಿ ಕಟ್ಟುವ ಅವಕಾಶವಿದೆ. ನಾನು ಮುಂಬರುವ ಹರಾಜು ಪ್ರಕ್ರಿಯೆಯನ್ನು ಕಾತರದಿಂದ ಕಾಯುತ್ತಿದ್ದೇನೆ. ಮುಂದಿನ ಮೂರು ವರ್ಷಗಳ ಅವದಿಯಲ್ಲಿ ಒಮ್ಮೆಯಾದರೂ ಐಪಿಎಲ್ ಪ್ರಶಸ್ತಿ ಗೆಲ್ಲಬೇಕೆಂಬುದು ನನ್ನ ಗುರಿಯಾಗಿದೆ ಎಂದು ಕೊಹ್ಲಿ ರಿಟೇನ್ ಬಳಿಕ ಹೇಳಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ 20 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿರುವ ಮೊದಲ ಭಾರತೀಯರೆನಿಸಿದ್ದಾರೆ.
ʼಮುಂದಿನ 3 ವರ್ಷಗಳಲ್ಲಿ ನಾನು ಆರ್‌ಸಿಬಿ ತಂಡದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸಲಿದ್ದೇನೆ. ಇದು ನನ್ನ ಪಾಲಿಗೆ ಅದ್ಭುತ ಅನುಭವವಾಗಿದೆ. ನಾನು ಇಷ್ಟು ವರ್ಷಗಳ ಕಾಲ ಒಂದೇ ತಂಡದ ಪರ ಆಡುವೆ ಎಂದು ಕನಸು ಕಂಡಿರಲಿಲ್ಲ. ನಾನು ಐಪಿಎಲ್ನಲ್ಲಿ ಆರ್‌ಸಿಬಿ ಹೊರತಾಗಿ ಬೇರೆ ಯಾವ ತಂಡದ ಪರವಾಗಿಯೂ ಆಡುವ ಯೋಚನೆ ಮಾಡಿಲ್ಲʼಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ IND vs NZ: ಮೂರನೇ ಟೆಸ್ಟ್‌ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ
ಆಸ್ಟ್ರೆಲಿಯಾದ ಕ್ಯಾಮರಾನ್ ಗ್ರೀನ್ ಕಳೆದ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ 17 ಕೋಟಿ ರೂ. ಮೊತ್ತಕ್ಕೆ ಆರ್‌ಸಿಬಿ ತಂಡಕ್ಕೆ ವರ್ಗಾವಣೆಗೊಂಡಿದ್ದರು. ಈ ಬಾರಿ ಅವರನ್ನು ರಿಟೇನ್ ಮಾಡದಿರುವುದಕ್ಕೆ ಗಾಯದ ಸಮಸ್ಯೆಯೇ ಪ್ರಮುಖ ಕಾರಣ ಎಂದು ಆರ್‌ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೋ ಬೋಬಟ್ ಸ್ಪಷ್ಟಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025ರ ಸೀಸನ್ಗೆ ಮೂವರು ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು ಮೆಗಾ ಹರಾಜಿನಲ್ಲಿ ಕನ್ನಡಿಗ ಆಟಗಾರರನ್ನುಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಕೈಯಲ್ಲಿ ಉಳಿದಿರುವ ದುಡ್ಡು 83 ಕೋಟಿ ರೂ. ಕನ್ನಡಿನ ರಾಹುಲ್ ಕೂಡ ಮರಳಿ ಆರ್‌ಸಿಬಿಗೆ ಬರಲಿದ್ದಾರೆ ಎನ್ನಲಾಗಿದ್ದು. ಈಗಾಗಲೇ ಅವರು ಈ ಹಿಂದೆ ಆರ್‌ಸಿಬಿ ಪರ ಆಡಿದ ವಿಡಿಯೊವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾರಂಭಿಸಿದ್ದಾರೆ.
ರಿಟೈನ್ ಆದ ಆಟಗಾರರು
ವಿರಾಟ್ ಕೊಹ್ಲಿ(21 ಕೋಟಿ ರೂ.), ರಜತ್ ಪಟೇದರ್(11 ಕೋಟಿ ರೂ.), ಯಶ್ ದಯಾಳ್ (5ಕೋಟಿ ರೂ) ಅವರನ್ನು ತಂಡ ರಿಟೈನ್ ಮಾಡಿಕೊಂಡಿದೆ.
ಕೈಬಿಟ್ಟ ಪ್ರಮುಖ ಆಟಗಾರರು
ಫಾಫ್ ಡು ಪ್ಲೆಸ್ಸಿಸ್, ಸಿರಾಜ್, ಗ್ರೀನ್, ಮ್ಯಾಕ್ಸ್ ವೆಲ್, ವಿಲ್ ಜ್ಯಾಕ್ಸ್, ಅಲ್ಜಾರಿ ಜೋಸೆಫ್, ಟಾಮ್ ಕರ್ರಾನ್, ಲಾಕ್ ಫರ್ಗುಸನ್, ರೀಸ್ ಟೋಪ್ಲಿ ಸೇರಿದಂತೆ ಅನುಜ್ ರಾವತ್, ಸೌರವ್ ಚೌಹಾಣ್, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮಯಾಂಕ್ ದಾಗರ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ವಿಜಯ್ ಕುಮಾರ್ ವೈಶಾಕ್ ಅವರನ್ನು ಪ್ರಮುಖವಾಗಿ ಕೈಬಿಡಲಾಗಿದೆ.