Saturday, 23rd November 2024

Anantnag Encounter: ಜಮ್ಮು & ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

Anantnag Encounter

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಶನಿವಾರ (ನ. 2) ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಹಲ್ಕಾನ್ ಗಲಿ ಪ್ರದೇಶದಲ್ಲಿ ಭದ್ರತಾ ಪಡೆ (Security forces)ಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಎನ್‌ಕೌಂಟರ್‌ ಆರಂಭವಾಯಿತು (Anantnag Encounter).

ನ. 1ರಂದು ಮಧ್ಯ ಕಾಶ್ಮೀರದ ಬುದ್ಗಾಮ್‌ ಜಿಲ್ಲೆಯ ಮಗಮ್‌ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಉತ್ತರ ಪ್ರದೇಶ ಮೂಲದ ಕಾರ್ಮಿಕರೊಬ್ಬರು ಗಾಯಗೊಂಡಿದ್ದರು. ಇದಾಗಿ 1 ದಿನದ ಬಳಿಕ ಸೇನೆ ಎನ್‌ಕೌಂಟರ್‌ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಇದಕ್ಕೂ ಮುನ್ನ ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿಯೂ ಎನ್‌ಕೌಂಟರ್‌ ನಡೆದಿತ್ತು. ಪೊಲೀಸರು ಮತ್ತು ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸುವ ವೇಳೆ ಉಗ್ರರು ದಾಳಿ ಆರಂಭಿಸಿದ್ದರು. ಈ ವೇಳೆ ದಿಟ್ಟ ಉತ್ತರ ನೀಡಿದ ಭಾರತೀಯ ಭದ್ರತಾ ಪಡೆ ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿದ ಕೆಲವೇ ಗಂಟೆಗಳ ಬಳಿಕ ಹಲ್ಕಾನ್ ಗಲಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆದಿದೆ.

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಸತ್ತ ಭಯೋತ್ಪಾದಕರಲ್ಲಿ ಓರ್ವ ವಿದೇಶಿ ಪ್ರಜೆಯಾಗಿದ್ದು, ಇನ್ನೋರ್ವ ಸ್ಥಳೀಯ ಮೂಲದವನು. ಆದಾಗ್ಯೂ ಇವರು ಯಾವ ನಿರ್ದಿಷ್ಟ ಭಯೋತ್ಪಾದಕ ಗುಂಪಿಗೆ ಸೇರಿದವರು ಎನ್ನುವುದು ತಿಳಿದು ಬಂದಿಲ್ಲ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ.

ವಲಸೆ ಕಾರ್ಮಿಕ ಮೇಲೆ ನಿರಂತರ ದಾಳಿ

ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಲಸೆ ಕಾರ್ಮಿಕರನನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್‌ನಲ್ಲಿ ಅ. 20ರಂದು ನಡೆದ ಭಯೋತ್ಪಾದಕರ ದಾಳಿಯಲ್ಲಿ ಓರ್ವ ವೈದ್ಯರು, ಐವರು ವಲಸಿಗ ಕಾರ್ಮಿಕರು ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದರು. ಗುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಕಾರ್ಮಿಕರು ನೆಲೆಸಿರುವ ಶಿಬಿರದ ಮೇಲೆ ಭಯೋತ್ಪಾದಕರು ನಿರಂತರ ಗುಂಡು ಹಾರಿಸಿದ್ದರು.

ದೀರ್ಘಕಾಲದಿಂದ ಶಾಂತಿಯುತ ಪ್ರದೇಶವೆಂದು ಪರಿಗಣಿಸಲ್ಪಟ್ಟ ಗಂಡರ್ಬಾಲ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು ಕಳವಳವನ್ನುಂಟು ಮಾಡಿತ್ತು. ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಈ ದಾಳಿಯನ್ನು ಖಂಡಿಸಿದ್ದರು. “ಸೋನಾಮಾರ್ಗ್ ಪ್ರದೇಶದ ಗಗಾಂಗೀರ್‌ನಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ನಡೆದ ಭೀಕರ ದಾಳಿ ಖಂಡನೀಯ. ಈ ಭಯೋತ್ಪಾದಕ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 2-3 ಜನರು ಗಾಯಗೊಂಡಿದ್ದಾರೆ. ನಿರಾಯುಧ ಮುಗ್ಧ ಜನರ ಮೇಲಿನ ಈ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಇನ್ನು ಅ. 24 ಮತ್ತು ನ. 1ರಂದು ನಡೆದ ಉಗ್ರರ ದಾಳಿಯಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.

ಈ ಸುದ್ದಿಯನ್ನೂ ಓದಿ: Terror Attack: 27 ಗಂಟೆಗಳ ಸೇನಾ ಕಾರ್ಯಾಚರಣೆ ಮುಕ್ತಾಯ- ಅಖ್ನೂರ್‌ ದಾಳಿಯ ಉಗ್ರರು ಎನ್‌ಕೌಂಟರ್‌ಗೆ ಬಲಿ