ಕೋಲ್ಕತ್ತ: ಸಾಧಿಸುವ ಹಠ, ಛಲವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಕೋಲ್ಕತದ ಮೂರರ ಪೋರ ಅನೀಶ್ ಸರ್ಕಾರ್ ಹೊರಹೊಮ್ಮಿದ್ದಾರೆ. ಹೌದು ಚಿಕ್ಕ ವಯಸ್ಸಿಗೆ ಫಿಡೆ ರೇಟೆಡ್ ಚೆಸ್ ಆಟಗಾರನಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. 3 ವರ್ಷ, 8 ತಿಂಗಳು, 19 ದಿನ ವಯಸ್ಸಿನ ಅನೀಶ್ ವಿಶ್ವದ ಅತ್ಯಂತ ಕಿರಿಯ ಫಿಡೆ ರೇಟೆಡ್ ಚೆಸ್ ಆಟಗಾರ ಎನಿಸಿದ್ದಾನೆ.
2021ರ ಜನವರಿ 26ರಂದು ಜನಿಸಿದ ಅನೀಶ್, ಕಳೆದ ತಿಂಗಳು ಪಶ್ಚಿಮ ಬಂಗಾಳದ 9 ವಯೋಮಿತಿ ಮುಕ್ತ ಚೆಸ್ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಚೆಸ್ ಆಟಕ್ಕೆ ಪ್ರವೇಶ ಪಡೆದಿದ್ದ. ಟೂರ್ನಿಯಲ್ಲಿ 8ರಲ್ಲಿ 5.5 ಅಂಕ ಕಲೆಹಾಕಿದ್ದ ಅನೀಶ್ 24ನೇ ಸ್ಥಾನ ಗಳಿಸಿದ್ದ. ಜತೆಗೆ ಇಬ್ಬರು ಫಿಡೆ ರೇಟೆಡ್ ಆಟಗಾರರನ್ನು ಸೋಲಿಸಿದ್ದ. ಬೆಂಗಾಲ್ ರ್ಯಾಪಿಡ್ ರೇಟಿಂಗ್ ಓಪನ್ ಟೂರ್ನಿಯ ಪ್ರದರ್ಶನ ಪಂದ್ಯದಲ್ಲಿ ವಿಶ್ವ ನಂ. 4 ಹಾಗೂ ಹಾಲಿ ಭಾರತದ ನಂ. 1 ಚೆಸ್ ಆಟಗಾರ ಅರ್ಜುನ್ ಇರಿಗೈಸಿ ವಿರುದ್ಧ ಆಡುವ ಅವಕಾಶವನ್ನೂ ಪಡೆದಿದ್ದ. ವಾರದ ನಂತರ ಪಶ್ಚಿಮ ಬಂಗಾಳದ 13 ವಯೋಮಿತಿ ಟೂರ್ನಿಯಲ್ಲೂ ಆಡಿದ್ದ.
ಇದನ್ನೂ ಓದಿ IND vs NZ: ಕಿವೀಸ್ ವಿರುದ್ಧ ದಾಖಲೆ ಬರೆದ ರಿಷಭ್ ಪಂತ್
ಅನೀಶ್ ಒಂದು ವರ್ಷದ ಹಿಂದೆ ಯುಟ್ಯೂಬ್ ನೋಡುವಾಗ ಚೆಸ್ ಆಟದ ವಿಡಿಯೋಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದನ್ನು ನೋಡಿದ ಅನೀಶ್ ತಂದೆ-ತಾಯಿ ಮಗನನ್ನು ಗ್ರಾಂಡ್ಮಾಸ್ಟರ್ ಹಾಗೂ ಚೆಸ್ ಕೋಚ್ ದಿವ್ಯೇಂದು ಬರುವಾ ಬಳಿ ತರಬೇತಿಗೆ ಸೇರಿಸಿದ್ದರು. ಅಚ್ಚರಿ ಎಂದರೆ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅನೀಶ್ ತಂದೆ-ತಾಯಿ ಇಬ್ಬರಿಗೂ ಚೆಸ್ ಆಟದ ಬಗ್ಗೆ ಯಾವುದೇ ಜ್ಞಾನವಿಲ್ಲ. ಅನೀಶ್ ಸರ್ಕಾರ್ ಸಾಧನೆಗೆ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.