Sunday, 24th November 2024

Viral Video: ಸುತ್ತಿಗೆ ಹಿಡಿದು ಪಿಚ್‌ ಸಿದ್ಧಪಡಿಸಿದ ಟೀಮ್‌ ಇಂಡಿಯಾ ಆಟಗಾರರು

ಮಕಾಯ್‌ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ‘ಎ’ ಎದುರಿನ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ(INDA vs AUSA) ಸೋಲಿನ ಭೀತಿಯಲ್ಲಿದೆ. ಆಸೀಸ್‌ ಗೆಲುವಿಗೆ ಇನ್ನು ಕೇವಲ 86 ರನ್‌ ಅಗತ್ಯವಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆಸೀಸ್‌ 3 ವಿಕೆಟ್‌ಗೆ 139 ರನ್‌ ಗಳಿಸಿದೆ. ದಿನದಾಟದ ವೇಳೆ ಟೀಮ್‌ ಇಂಡಿಯಾ ಆಟಗಾರರು ಸುತ್ತಿಗೆ ಬಡಿದು ಪಿಚ್‌ ಸಿದ್ಧಪಡಿಸಿದ ವಿಡಿಯೊವೊಂದು ವೈರಲ್‌ ಆಗಿದೆ. ವೇಗಿ ಮುಕೇಶ್‌ ಕುಮಾರ್‌(Mukesh Kumar) ಅವರು ಸುತ್ತಿಗೆ ಬಡಿದು ಪಿಚ್‌ ಸಿದ್ಧಪಡಿಸುತ್ತಿರುವುದು, ಅವರಿಗೆ ಇಶಾನ್‌ ಕಿಶನ್‌ ಸೇರಿ ಕೆಲ ಭಾರತೀಯ ಆಟಗಾರರು ಮುಕೇಶ್‌ಗೆ ಸಲಹೆ ನೀಡುತ್ತಿರುವುದನ್ನು ವಿಡಿಯೊದಲ್ಲಿ(Viral Video) ಕಾಣಬಹುದಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ 107 ರನ್‌ಗೆ ಕುಸಿದಿದ್ದ ಭಾರತ ದ್ವಿತೀಯ ಇನಿಂಗ್ಸ್‌ನಲ್ಲಿ ಬಿ.ಸಾಯಿ ಸುದರ್ಶನ್‌ ಮತ್ತು ದೇವದತ್ತ ಪಡಿಕ್ಕಲ್‌ ಅವರ 178 ರನ್‌ ಜತೆಯಾಟದ ಸಾಹಸದಿಂದ 312 ರನ್‌ ಬಾರಿಸಿತು. ಸುದರ್ಶನ್‌(103) ಶತಕ ಬಾರಿಸಿದರೆ, ಪಡಿಕ್ಕಲ್‌(88) ಅರ್ಧಶತಕ ಬಾರಿಸಿ ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿ ಮುಕೇಶ್‌ ಕುಮಾರ್‌ 46ಕ್ಕೆ 6 ವಿಕೆಟ್‌ ಹಾಗೂ ಪ್ರಸಿದ್ಧ ಕೃಷ್ಣ 59ಕ್ಕೆ 3 ವಿಕೆಟ್‌ ಉರುಳಿಸಿ ಆತಿಥೇಯರ ಮೇಲೆ ಸವಾರಿ ಮಾಡಿದ್ದರು.

ಅಭ್ಯಾಸ ಪಂದ್ಯ ಕೈಬಿಟ್ಟ ಭಾರತ

ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳು 22ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಬಾರ್ಡರ್‌-ಗವಾಸ್ಕರ್‌(Border-Gavaskar Trophy) ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಪ್ರವಾಸಿ ಭಾರತ ತಂಡ ಭಾರತ “ಎ’ ವಿರುದ್ಧ ಆಡಬೇಕಿದ್ದ ತ್ರಿದಿನ ಅಭ್ಯಾಸ ಪಂದ್ಯವನ್ನು ರದ್ದು ಮಾಡಿದೆ. ಹೆಚ್ಚುವರಿ ನೆಟ್‌ ಅಭ್ಯಾಸ ನಡೆಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ IND vs NZ: ಕಿವೀಸ್‌ ವಿರುದ್ಧ ದಾಖಲೆ ಬರೆದ ರಿಷಭ್‌ ಪಂತ್‌

ಋತುರಾಜ್‌ ಗಾಯಕ್ವಾಡ್‌ ನೇತೃತ್ವದ ಭಾರತ ʼಎʼ ತಂಡದ ವಿರುದ್ಧ ರೋಹಿತ್‌ ಶರ್ಮ ಪಡೆ ಪರ್ಥ್‌ನಲ್ಲಿ ಅಭ್ಯಾಸ ಪಂದ್ಯವೊಂದನ್ನು (ನ.15-17) ಆಡಬೇಕಿತ್ತು. ಆದರೆ, ಕೋಚ್‌ ಗೌತಮ್‌ ಗಂಭೀರ್‌ ಮತ್ತು ತಂಡದ ಕೆಲವು ಹಿರಿಯ ಆಟಗಾರರು ಹೆಚ್ಚುವರಿ ಅಭ್ಯಾಸದ ಅವಧಿಯನ್ನು ಬಯಸಿದ್ದರಿಂದ ಈ ಪಂದ್ಯವನ್ನು ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ. ಭಾರತ ಹಿಂದಿನೆರಡೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಭ್ಯಾಸ ಪಂದ್ಯವನ್ನಾಡಿಯೇ ಟೆಸ್ಟ್‌ ಸರಣಿಯನ್ನು ಆಡಲಿಳಿದಿತ್ತು. ಈ ಬಾರಿ ತವರಿನಲ್ಲೇ ಬ್ಯಾಟಿಂಗ್‌ ವೈಫಲ್ಯ ಕಂಡ ಕಾರಣ ಅಭ್ಯಾಸ ಪಂದ್ಯಕ್ಕಿಂತ ಹೆಚ್ಚುವರಿ ನೆಟ್‌ ಅಭ್ಯಾಸ ನಡೆಸುವ ಯೋಜನೆ ಭಾರತದ್ದು.