Saturday, 2nd November 2024

Farooq Abdullah: ಭಯೋತ್ಪಾದಕರನ್ನು ಕೊಲ್ಲಬೇಡಿ; ವಿವಾದ ಹುಟ್ಟು ಹಾಕಿದ ಜಮ್ಮು & ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ

Farooq Abdullah

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಾದ್ಯಂತ ಇತ್ತೀಚೆಗೆ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್‌ಗಳನ್ನು ಬಹಿರಂಗಪಡಿಸುವ ಸಲುವಾಗಿ ಭಯೋತ್ಪಾದಕರನ್ನು ಕೊಲ್ಲುವ ಬದಲು ಸೆರೆ ಹಿಡಿಯಬೇಕು ಎಂದು ಹೇಳುವ ಮೂಲಕ ನ್ಯಾಷನಲ್‌ ಕಾನ್ಫರೆನ್ಸ್‌(National Conference) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ(Farooq Abdullah) ವಿವಾದ ಹುಟ್ಟು ಹಾಕಿದ್ದಾರೆ.

ʼʼಸೆರೆಹಿಡಿದ ಭಯೋತ್ಪಾದಕರನ್ನು ವಿಚಾರಣೆ ಮಾಡುವ ಮೂಲಕ ಈ ದಾಳಿಗಳನ್ನು ಸಂಘಟಿಸುವ ಜಾಲಗಳ ಬಗ್ಗೆ ಮಾಹಿತಿ ಪಡೆಯಬಹುದುʼʼ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಒತ್ತಿ ಹೇಳಿದ್ದಾರೆ. ಬುದ್ಗಾಮ್‌ ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ನೂತನ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವವರ ಕೈವಾಡ ಇದೆ ಎನ್ನುವ ಅನುಮಾನವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

“ಈ ಬಗ್ಗೆ ತನಿಖೆಯಾಗಬೇಕು. ಬುದ್ಗಾಮ್‌ ಭಯೋತ್ಪಾದಕ ದಾಳಿಯ ಹಿಂದೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಿದೆ ಎಂಬ ಅನುಮಾನವಿದೆ. ಭಯೋತ್ಪಾದಕರು ಸಿಕ್ಕಿಬಿದ್ದರೆ ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಬಹುದು. ಹೀಗಾಗಿ ಭಯೋತ್ಪಾದಕರನ್ನು ಕೊಲ್ಲಬಾರದು, ಅವರನ್ನು ಜೀವಂತವಾಗಿ ಸೆರೆ ಹಿಡಿಯಬೇಕು. ಇದರ ಹಿಂದೆ ಉಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಏಜೆನ್ಸಿ ಇದೆಯೇ ಎಂಬುದನ್ನು ನಾವು ಪರಿಶೀಲಿಸಬೇಕು” ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನವನ್ನು ಪ್ರತಿ ಬಾರಿಯೂ ದೂಷಿಸಬೇಕೇ ಎಂದು ಕೇಳಿದಾಗ, ಫಾರೂಕ್ ಅಬ್ದುಲ್ಲಾ, “ಈ ಪ್ರಶ್ನೆಯೇ ಇಲ್ಲ, ಸಮಗ್ರ ತನಿಖೆ ನಡೆಯಬೇಕುʼʼ ಎಂದು ಎಂದು ಹೇಳಿದ್ದಾರೆ.

ಎನ್‌ಸಿಪಿ-ಎಸ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅವರು ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. “ಫಾರೂಕ್ ಅಬ್ದುಲ್ಲಾ ಅವರು ದೀರ್ಘ ಕಾಲ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಾಮಾಣಿಕತೆ ಬಗ್ಗೆ ಯಾವುದೇ ಸಂದೇಹವಿಲ್ಲ. ಅಂತಹ ನಾಯಕ ಹೇಳಿಕೆ ನೀಡುತ್ತಿದ್ದಾರೆ ಎಂದರೆ, ಕೇಂದ್ರ ಸರ್ಕಾರ, ವಿಶೇಷವಾಗಿ ಗೃಹ ಸಚಿವಾಲಯ ಅದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಸಲಹೆ ನೀಡಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ ಏನು?

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರು ಫಾರೂಕ್‌ ಅಬ್ದುಲ್ಲಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. “ಈ ಭಯೋತ್ಪಾದನೆ ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆಯುತ್ತಿದೆ ಎನ್ನುವುದು ಫಾರೂಕ್ ಅಬ್ದುಲ್ಲಾ ಅವರಿಗೆ ತಿಳಿದಿದೆ. ಇದರಲ್ಲಿ ತನಿಖೆ ಮಾಡಲು ಏನಿದೆ? ನಾವೆಲ್ಲರೂ ನಮ್ಮ ಸೇನೆ, ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ಬೆಂಬಲಿಸಬೇಕು, ಶತ್ರುಗಳ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ. ಸದ್ಯ ಫಾರೂಕ್‌ ಅಬ್ದುಲ್ಲಾ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನ. 1ರಂದು ಬುದ್ಗಾಮ್‌ನಲ್ಲಿ ನಡೆದ ಬಯೋತ್ಪಾದಕ ದಾಳಿಯಲ್ಲಿ ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರಗರ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ