Tuesday, 5th November 2024

IPL 2025: ಆರ್‌ಸಿಬಿಯಿಂದ ಸಿರಾಜ್‌ ಕೈಬಿಟ್ಟ ಕಾರಣ ತಿಳಿಸಿದ ನಿರ್ದೇಶಕ ಬೋಬಟ್

ಬೆಂಗಳೂರು: ಐಪಿಎಲ್(IPL 2025) ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ(RCB) ಕೇವಲ ಮೂವರು ಆಟಗಾರರನ್ನು ಮಾತ್ರ ರಿಟೇನ್‌ ಮಾಡಿಕೊಂಡಿದೆ. ವಿರಾಟ್‌ ಕೊಹ್ಲಿ ಜತೆಗೆ ರಜತ್​ ಪಾಟೀದಾರ್​ ಮತ್ತು ಯಶ್​ ದಯಾಳ್​ ಮಾತ್ರ ರಿಟೇನ್​ ಆಗಿದ್ದಾರೆ. ಅನುಭವಿ ವೇಗಿ ಮೊಹಮ್ಮದ್‌ ಸಿರಾಜ್‌(Mohammed Siraj) ಅವರನ್ನು ಕೈ ಬಿಟ್ಟಿರುವ ಬಗ್ಗೆ ​ಆರ್‌ಸಿಬಿ ತಂಡದ ಕ್ರಿಕೆಟ್​ ನಿರ್ದೇಶಕ ಮೋ ಬೋಬಟ್(Mo Babat)​ ಸ್ಪಷ್ಟನೆ ನೀಡಿದ್ದಾರೆ.

ತಂಡಕ್ಕೆ ಸಿರಾಜ್​ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಲವು ಆಯ್ಕೆಗಳನ್ನು ತಲೆಯಲ್ಲಿಟ್ಟುಕೊಂಡು ಹರಾಜಿಗೆ ತೆರಳಲು ನಾವು ಬಯಸಿದ್ದೇವೆ. ಅತ್ಯಂತ ಸಮತೋಲನದ ಬೌಲಿಂಗ್​ ವಿಭಾಗವನ್ನು ಕಟ್ಟುವುದು ನಮ್ಮ ಧ್ಯೇಯವಾಗಿದೆ ಎಂದು ಬೋಬಟ್​ ವಿವರಿಸಿದ್ದಾರೆ.

2018ರಿಂದ ಆರ್​ಸಿಬಿ ತಂಡದ ಬೌಲಿಂಗ್​ ವಿಭಾಗದಲ್ಲಿರುವ ವೇಗಿ ಮೊಹಮದ್​ ಸಿರಾಜ್​ 87 ಪಂದ್ಯಗಳಲ್ಲಿ 83 ವಿಕೆಟ್​ ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 15 ವಿಕೆಟ್​ ಉರುಳಿಸಿದ್ದರು. ಇದರ ನಡುವೆಯೂ ಅವರನ್ನು ಈ ಬಾರಿ ರಿಟೇನ್​ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟುಕೊಡಲಾಗಿದೆ. ಇದೊಂದು ಕಠಿಣ ನಿರ್ಧಾರವಾಗಿತ್ತು ಎಂದು ತಿಳಿಸಿದ್ದಾರೆ. ಸಿರಾಜ್‌ ಪ್ರಸ್ತುತ ಭಾರತ ತಂಡದಲ್ಲಿ ನಿರೀಕ್ಷಿತ ಬೌಲಿಂಗ್‌ ತೋರುವಲ್ಲಿ ವಿಫಲವಾಗುತ್ತಿದ್ದಾರೆ. ಇದೇ ಕಾರಣಕ್ಕೆ ಅವರನ್ನು ತಂಡದಿಂದ ಕೈ ಬಿಟ್ಟಂತಿದೆ.

ಇದನ್ನೂ ಓದಿ IND vs NZ: ಕಿವೀಸ್‌ ವಿರುದ್ಧ ದಾಖಲೆ ಬರೆದ ರಿಷಭ್‌ ಪಂತ್‌

ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ತಂಡದಿಂದ ಕೈ ಬಿಟ್ಟಿರುವ ಬಗ್ಗೆ ತಂಡದ ಸಿಇಒ ವೆಂಕಿ ಮೈಸೂರು ಮಾಹಿತಿ ನೀಡಿದ್ದು, ತಂಡದಲ್ಲಿ ಮುಂದುವರಿಯದೆ ಇರುವುದು ಶ್ರೇಯಸ್ ಅಯ್ಯರ್ ನಿರ್ಧಾರವೇ ಹೊರತು ಕೆಕೆಆರ್ ಫ್ರಾಂಚೈಸಿಯದ್ದಲ್ಲ ಎಂದು ತಿಳಿಸಿದ್ದಾರೆ.

ಅಯ್ಯರ್‌, ನಮ್ಮ ರಿಟೆನ್ಶನ್ ಪಟ್ಟಿಯಲ್ಲಿ ನಂಬರ್ 1 ಆಗಿದ್ದರು. ಆದರೆ ಅವರು ತಂಡದಲ್ಲಿ ಮುಂದುವರಿಯುವ ಆಸಕ್ತಿ ಹೊಂದಿರಲಿಲ್ಲ. ರಿಟೆನ್ಶನ್‌ನ ಮೂಲಭೂತ ವಿಷಯವೆಂದರೆ ಅದು ಪರಸ್ಪರ ಒಪ್ಪಿಕೊಳ್ಳುವ ವಿಷಯವಾಗಿದೆ. ಇದು ಫ್ರಾಂಚೈಸಿ ಹೊಂದಿರುವ ಏಕಪಕ್ಷೀಯ ಹಕ್ಕಲ್ಲ. ಆಟಗಾರರ ನಿರ್ಧಾರವನ್ನು ಗೌರವಿಸಲೇ ಬೇಕು ಎಂದು ವೆಂಕಿ ಹೇಳಿದರು.