ತುಮಕೂರು: ಅಪರಾಧ ಪ್ರಕರಣಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂಬ ಆರೋಪದಲ್ಲಿ ಪಾವಗಡ ಪೊಲೀಸ್ ಠಾಣೆಯ ಮೂರು ಪೊಲೀಸ್ ಪೇದೆಗಳು (Police Suspended) ಅಮಾನತುಗೊಂಡಿದ್ದಾರೆ. ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಮಟ್ಕಾ, ಜೂಜಾಟ ಇನ್ನಿತರ ಪ್ರಕರಣಗಳಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದ್ದರಿಂದ ಮೂವರು ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.
ಪಾವಗಡ ತಾಲೂಕಿನಲ್ಲಿ ಅಪರಾಧ ಕೃತ್ಯಗಳಿಗೆ ಪೊಲೀಸರಿಂದಲೇ ಪ್ರೋತ್ಸಾಹ ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅ. 29ರಂದು ಸಂತೋಷ್, ಶ್ರೀಕಾಂತ್ ನಾಯಕ್, ನಟೇಶ್ ಎಂಬ ಪೇದೆಗಳನ್ನು ಸಸ್ಪೆಂಡ್ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Rajnath Singh: ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ; ರಾಜನಾಥ್ ಸಿಂಗ್ ಗುಡುಗು
ಕೋಲಾರದಲ್ಲಿ ಭೀಕರ ಅಪಘಾತ; ಡಿವೈಡರ್ ಮೇಲೆ ನಿಂತಿದ್ದಾಗ ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ
ಕೋಲಾರ: ರಸ್ತೆ ಡಿವೈಡರ್ ಮೇಲೆ ನಿಂತಿದ್ದ ವೇಳೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಹೊರವಲಯದ ಪವನ್ ಕಾಲೇಜು ಬಳಿ ದುರಂತ ಸಂಭವಿಸಿದೆ. ಮೃತರನ್ನು ಉತ್ತರ ಭಾರತ ಮೂಲದ ಕಿರಣ್ ಹಾಗೂ ರಜನಿಸಿಂಗ್ ಎಂದು ಗುರುತಿಸಲಾಗಿದೆ.
ಡಿವೈಡರ್ ಮೇಲೆ ನಿಂತಿದ್ದವರಿಗೆ ಕಾರು ಡಿಕ್ಕಿಯಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಲಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟಿ ಮೇಲೆ ಬೃಹತ್ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು
ಮಂಗಳೂರು: ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಬೃಹತ್ ಮರ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡಬ -ಪಂಜ ರಸ್ತೆಯ ಕೋಡಿಂಬಾಳ ಸಮೀಪ ಪುಳಿಕುಕ್ಕು ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಎಡಮಂಗಲ ಗ್ರಾಮದ ಸೀತಾರಾಮ ಗೌಡ (58) ಎಂದು ಗುರುತಿಸಲಾಗಿದೆ. ದೀಪಾವಳಿ ಪ್ರಯುಕ್ತ ಹರಕೆ ಇದ್ದುದರಿಂದ ಕೋಳಿ ತರುವುದಕ್ಕಾಗಿ ಕಡಬಕ್ಕೆ ಹೋಗಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.