Saturday, 23rd November 2024

Benefits of Classical Languages: ಶಾಸ್ತ್ರೀಯ ಸ್ಥಾನಮಾನದಿಂದ ಭಾಷೆಗಳಿಗೇನು ಉಪಯೋಗ?

Benefits of Classical Languages

ಭಾರತದ ಇನ್ನೂ ಐದು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನಗಳನ್ನು ನೀಡಿರುವುದಾಗಿ ಕೇಂದ್ರ ಸರ್ಕಾರವು ಈ ತಿಂಗಳ ಆರಂಭದಲ್ಲಿ ಪ್ರಕಟಿಸಿದೆ. ಭಾಷೆಯೊಂದನ್ನು ಶಾಸ್ತ್ರೀಯವೆಂದು ಪರಿಗಣಿಸುವುದಕ್ಕೆ ಇರಬೇಕಾದ ಮಾನದಂಡದಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಂಡು, ಮರಾಠಿ, ಬಂಗಾಳಿ, ಅಸ್ಸಾಮಿ, ಪಾಳಿ ಮತ್ತು ಪ್ರಾಕೃತ ಭಾಷೆಗಳಿಗೆ ಈ ಹೊಸ ಮಾನ್ಯತೆಯನ್ನು ಪ್ರಕಟಿಸಲಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹೊಸಿಲಲ್ಲಿ ಈ ಘೋಷಣೆಯಾಗಿರುವುದು ರಾಜಕೀಯವಾಗಿ ಒಂದಿಷ್ಟು ಮಾತಿನ ಚಕಮಕಿಗೆ ಎಡೆ ಮಾಡಿರುವುದು ಹೌದು. ಆದರೆ ರಾಜಕೀಯದ ಹೊರತಾಗಿ ಯೋಚಿಸಿದರೆ, ಈ ಹೊಸ ಸ್ಥಾನಮಾನದಿಂದ ಆಯಾ ಭಾಷೆಗಳಲ್ಲಿ (Benefits of Classical Languages) ಹೆಚ್ಚಿನ ಸಂಶೋಧನೆ, ಅನುವಾದಗಳು ನಡೆದು, ಭಾಷೆಯ ಭವಿಷ್ಯದ ಬಗೆಗೆ ಹೆಚ್ಚಿನ ಭರವಸೆ ಮೂಡುವುದೆನ್ನುವುದು ವಿದ್ವಾಂಸರು ಮತ್ತು ಶಿಕ್ಷಣ ತಜ್ಞರ ನಿರೀಕ್ಷೆ.

ಭಾಷೆಯು ಶಾಸ್ತ್ರೀಯ ಎನಿಸಿಕೊಳ್ಳುವುದು ಹೇಗೆ?

ಜಾಗತಿಕವಾಗಿ, ಪ್ರಾಚೀನವಾದ ಮತ್ತು ಸ್ವತಂತ್ರವಾದ ಸಾಹಿತ್ಯಿಕ ಪರಂಪರೆಯಿದ್ದು, ಲಿಖಿತ ಕೃತಿಗಳನ್ನು ಹೊಂದಿದ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಪರಿಗಣಿಸಲಾಗುತ್ತದೆ. ಇವುಗಳು ಸಾಮಾನ್ಯವಾಗಿ, ಲ್ಯಾಟಿನ್‌ ಅಥವಾ ಸಂಸ್ಕೃತದಂತೆ, ಆಡುಭಾಷೆಯಾಗಿ ಬಳಕೆಯಲ್ಲಿ ಉಳಿದಿರುವುದಿಲ್ಲ ಅಥವಾ ಈಗ ಚಾಲ್ತಿಯಲ್ಲಿರುವ ಭಾಷೆ ಪ್ರಾಚೀನ ಆವೃತ್ತಿಗಿಂತ ಭಿನ್ನವಾಗಿರುತ್ತದೆ. 2004ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು, ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಮಾನ್ಯತೆಯನ್ನು ನೀಡುವ ಕ್ರಮವನ್ನು ಆರಂಭಿಸಿತು. ಇದಕ್ಕಾಗಿ ಮೂರು ಮುಖ್ಯ ಮಾನದಂಡಗಳನ್ನು ಇರಿಸಿಕೊಳ್ಳಲಾಗಿತ್ತು:- ಆ ಭಾಷೆಯ ಪ್ರಾಚೀನ ಶಾಸನ, ಗ್ರಂಥಗಳು ಅಥವಾ ದಾಖಲಿಸಲಾದ ಚರಿತ್ರೆಯು ಸಾವಿರಾರು ವರ್ಷಗಳ ಹಿಂದಿನದ್ದಾಗಿರಬೇಕು; ಬಹಳಷ್ಟು ತಲೆಮಾರುಗಳಿಂದ ಆ ಭಾಷೆಯನ್ನು ಬಳಸುತ್ತಿರುವವರು ಮೌಲಿಕ ಪರಂಪರೆಯೆಂದು ಪರಿಗಣಿಸುವಂಥ ಪ್ರಾಚೀನ ಸಾಹಿತ್ಯ ಅದಕ್ಕಿರಬೇಕು; ಆ ಭಾಷೆಯ ಸಾಹಿತ್ಯಿಕ ಪರಂಪರೆಯು ಸ್ವಂತದ್ದಾಗಿದ್ದು, ಇತರ ಭಾಷೆಗಳಿಂದ ಎರವಲು ಪಡೆದಿದ್ದಾಗಿರಬಾರದು.

ಈ ಸುದ್ದಿಯನ್ನೂ ಓದಿ | Kantara Chapter 1: ಕಾಂತಾರ-1 ಚಿತ್ರತಂಡ ಸೇರಿದ RRR ಆ್ಯಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್; ರಿಷಬ್‌ ಶೆಟ್ಟಿ ಜತೆ ಮಾತುಕತೆ

ಈ ಆಧಾರದ ಮೇಲೆ, ಮೊಟ್ಟಮೊದಲಿಗೆ ತಮಿಳು ಭಾಷೆಗೆ ಶಾಸ್ತ್ರೀಯ ಮಾನ್ಯತೆಯನ್ನು ನೀಡಲಾಯಿತು. 2005ರಲ್ಲಿ, ಈ ಮಾನದಂಡಗಳಲ್ಲಿ ಕೆಲವು ಪರಿಷ್ಕರಣೆಗಳನ್ನು ತರಲಾಯಿತು. ಶಾಸ್ತ್ರೀಯ ಮಾನ್ಯತೆ ಪಡೆಯಬಯಸುವ ಭಾಷೆಗಳಿಗೆ 1500ರಿಂದ 2000 ವರ್ಷಗಳಷ್ಟು ಸುದೀರ್ಘವಾದ ಇತಿಹಾಸ ದಾಖಲಾಗಿರಬೇಕು; ಪ್ರಚಲಿತದಲ್ಲಿರುವ ಭಾಷೆಗಿಂತ ಅದರ ಪ್ರಾಚೀನ ಆವೃತ್ತಿಗಳು ಭಿನ್ನವಾಗಿರುವುದರಿಂದ, ಆ ಭಾಷೆಯು ಕಾಲಾಂತರದಲ್ಲಿ ಅವಿಚ್ಛಿನ್ನವಾಗಿಲ್ಲದೆ ಇರಬಹುದು ಎನ್ನುವುದರ ಜತೆಗೆ, ಹಿಂದಿನ ನಿಯಮಗಳನ್ನು ಅಂತೆಯೆ ಉಳಿಸಿಕೊಳ್ಳಲಾಗಿತ್ತು. ಈ ನಿಯಮಗಳ ಅಡಿಯಲ್ಲಿ ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ ಶಾಸ್ತ್ರೀಯ ಮಾನ್ಯತೆ ನೀಡಲಾಗಿತ್ತು.

ಈಗ ಭಾಷೆಗಳಿಗೆ ಮಾನ್ಯತೆ ದೊರೆತಿದ್ದು ಹೇಗೆ?

ಮರಾಠಿ ಭಾಷೆಗೆ ಶಾಸ್ತ್ರೀಯ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸಲು, 2012 ರಲ್ಲಿ ಪ್ರೊ. ರಂಗನಾಥ ಪಠಾರೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ಭಾಷಾ ತಜ್ಞರ ಸಮಿತಿಗೆ 2013 ರಲ್ಲಿ ಈ ಸಮಿತಿಯು ಪ್ರಸ್ತಾವನೆಯನ್ನು ಸಲ್ಲಿಸಿತ್ತು. 2024 ರ ಜುಲೈನಲ್ಲಿ, ಮಹಾರಾಷ್ಟ್ರದಲ್ಲಿದ್ದ ಪೃಥ್ವಿರಾಜ್‌ ಚವಾಣ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವು, ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿದ್ದ ಮೋದಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ನಂತರದ ಬಿಜೆಪಿ-ಶಿವಸೇನೆ ನೇತೃತ್ವದ ಸರಕಾರಗಳೂ ಈ ಬೇಡಿಕೆಯನ್ನು ಮುಂದಿಡುತ್ತಲೇ ಬಂದಿದ್ದವು. ಇದಕ್ಕಾಗಿ ಒಂದು ಮಟ್ಟದ ಜನಾಂದೋಲನವನ್ನೂ ನಡೆಸಲಾಗಿತ್ತು. ಸುಮಾರು 2000 ವರ್ಷಗಳ ಇತಿಹಾಸ ಮರಾಠಿ ಭಾಷೆಗಿದ್ದು, ಮಹಾರಾಷ್ಟ್ರಿ ಪ್ರಾಕೃತವೆಂಬುದು ಸ್ವತಂತ್ರ ಭಾಷೆಯಾಗಿತ್ತು. ಪ್ರಾಕೃತದ ಉಳಿದ ಉಪಭಾಷೆಗಳಂತೆ ಇದಾಗಿರಲಿಲ್ಲ ಎಂಬುದು ಇಲ್ಲಿನ ತಜ್ಞರ ಅಭಿಮತ. 2024ರ ಜುಲೈನಲ್ಲಿ ಶಾಸ್ತ್ರೀಯ ಭಾಷೆಯ ನಿಯಮಕ್ಕೆ ಇನ್ನಷ್ಟು ತಿದ್ದುಪಡಿಯನ್ನು ತರಲಾಯಿತು.

ಭಾಷೆಯ ಸಾಹಿತ್ಯಿಕ ಪರಂಪರೆಯು ಸ್ವಂತದ್ದಾಗಿದ್ದು, ಇತರ ಭಾಷೆಗಳಿಂದ ಎರವಲು ಪಡೆದಿದ್ದಾಗಿರಬಾರದು ಎಂಬ ನಿಯಮವನ್ನು ಕೇಂದ್ರ ಭಾಷಾ ತಜ್ಞರ ಸಮಿತಿಯು 2024 ರಲ್ಲಿ ಸಡಿಲಿಸಿತು. ಬದಲಿಗೆ ಇನ್ನೊಂದು ಹೊಸ ನಿಯಮವನ್ನು ಸೇರಿಸಿತು. ಇದರನ್ವಯ, ಶಾಸ್ತ್ರೀಯ ಭಾಷೆ ಎನಿಸಿಕೊಳ್ಳುವುದಕ್ಕೆ ಪ್ರಾಚೀನ ಶಿಲಾಶಾಸನಗಳು, ತಾಮ್ರಫಲಕಗಳು, ಪದ್ಯ-ಗದ್ಯದ ಸಾಹಿತ್ಯಗಳನ್ನು ಒಳಗೊಂಡ ಜ್ಞಾನಭಂಡಾರವಿರಬೇಕು. ಜತೆಗೆ, ತನ್ನ ಪ್ರಾಚೀನ ಆವೃತ್ತಿಗಿಂತ ಈಗಿನದು ಭಿನ್ನವಾಗಿ ʻಇರಬಹುದುʼ ಎಂದು ಹೇಳಿತು. ಈ ಹೊಸ ನಿಯಮವು ಮರಾಠಿಗೆ ಮಾತ್ರವಲ್ಲ, ಬಂಗಾಳಿ ಮತ್ತು ಅಸ್ಸಾಮಿ ಭಾಷೆಗಳಿಗೂ ಶಾಸ್ತ್ರೀಯ ಮಾನ್ಯತೆ ಒದಗಿಸಿತು. ಮೂರನೇ ಶತಮಾನದಲ್ಲೇ ಅಸ್ಸಾಮಿ ಭಾಷೆ ಅಸ್ತಿತ್ವದಲ್ಲಿ ಇದ್ದ ಬಗ್ಗೆ ಶಿಲಾಶಾಸನಗಳು, ತಾಮ್ರಫಲಕಗಳು, ಸಂಚೀಪತ್ರಗಳು ಮತ್ತು ಜನಪದ ಆಧಾರಗಳನ್ನು ಸಂಸ್ಕೃತಿ ಸಚಿವಾಲಯಕ್ಕೆ ಒದಗಿಸಿರುವುದಾಗಿ ಅಸ್ಸಾಂ ಭಾಷಾ ತಜ್ಞರು ಹೇಳುತ್ತಾರೆ. ಅಂತೆಯೇ ಕ್ರಿ.ಪೂ. 3-4ನೇ ಶತಮಾನಗಳಿಂದ ಬಂಗಾಳಿ ಭಾಷೆ ಅಸ್ತಿತ್ವದಲ್ಲಿದ್ದ ಬಗ್ಗೆ ವಿವರ ವರದಿಯನ್ನು ಸಲ್ಲಿಸಿ, ಶಾಸ್ತ್ರೀಯ ಮಾನ್ಯತೆಯನ್ನು ಪಶ್ಚಿಮಬಂಗಾಳ ಸರ್ಕಾರವೂ 2024ರ ಆದಿಯಲ್ಲಿ ಕೋರಿತ್ತು.

ಈ ಸುದ್ದಿಯನ್ನೂ ಓದಿ | Bagheera Movie: ʼಬಘೀರʼನಿಗೆ ಪ್ರಭಾಸ್‌ ಮೆಚ್ಚುಗೆ!

ಹೊಸ ಭಾಷೆಗಳ ಮುಂದೇನಿದೆ?

ಹೊಸದಾಗಿ ಶಾಸ್ತ್ರೀಯ ಮಾನ್ಯತೆ ಪಡೆದ ಭಾಷೆಗಳ ಭವಿತವ್ಯ ಹೇಗಿದೆ? ನೊಬೆಲ್‌ ಗೌರವ ಪಡೆದ ರವೀಂದ್ರನಾಥ ಠಾಗೋರರು ಬರೆದ ಭಾಷೆಯನ್ನು ಮಾತಾಡಲೇ ಜನ ಹಿಂಜರಿಯುತ್ತಿರುವ ಕಾಲಘಟ್ಟದಲ್ಲಿ, ಈ ಭಾಷೆಗೆ ಶಾಸ್ತ್ರೀಯ ಮಾನ್ಯತೆ ದೊರೆತಿರುವುದಕ್ಕೆ ಭಾಷಾ ತಜ್ಞರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಅತ್ತ್ಯುತ್ತಮ ಬಂಗಾಳಿ ಕೃತಿಗಳು ಭಾಷಾಂತರಕ್ಕಾಗಿ ಕಾಯುತ್ತಿವೆ. ಇಲ್ಲಿನ ಉಪಭಾಷೆಗಳಿಗೂ ನೆರವು ದೊರೆಯಬಹುದು. ಜತೆಗೆ, ಬಂಗಾಳಿ ಭಾಷೆಯಲ್ಲಿನ ಸಂಶೋಧನಾ ಪ್ರಸ್ತಾಪಗಳಿಗೆ ಕೇಂದ್ರದಿಂದ ಅನುದಾನ ದೊರೆಯಬಹುದು ಎನ್ನುವುದು ಇವರ ಆಶಯ. ಇಂಥದ್ದೇ ಆಶಯ ಅಸ್ಸಾಮಿ ಭಾಷಾ ತಜ್ಞರಿಂದಲೂ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದಿಂದ ಸಂಸ್ಕೃತ, ತಮಿಳು ಸೇರಿದಂತೆ ಈಗಾಗಲೇ ಕೆಲವು ಶಾಸ್ತ್ರೀಯ ಭಾಷಾ ವಿಶ್ವವಿದ್ಯಾಲಯಗಳಿಗೆ ಧನ ಸಹಾಯ ದೊರೆತಿದೆ. ಕೇಂದ್ರ ಬಜೆಟ್‌ನಲ್ಲಿ ಶಾಸ್ತ್ರೀಯ ಭಾಷೆಗಳ ಅನುದಾನಕ್ಕಾಗಿ ಪ್ರತ್ಯೇಕ ಅವಕಾಶವೂ ಇದ್ದು, ಕೆಲವು ಭಾಷೆಗಳಿಗೆ ಕೋಟಿಗಟ್ಟಲೆ ನೆರವು ದೊರೆತಿದೆ.