Saturday, 23rd November 2024

Pension & Gratuity Guidelines: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಪಿಂಚಣಿ, ಗ್ರಾಚ್ಯುಟಿ ಪಾವತಿಗೆ ಹೊಸ ಮಾರ್ಗಸೂಚಿ

Pension & Gratuity Guidelines

ಹೊಸದಿಲ್ಲಿ: ನಿವೃತ್ತಿ ಸಮೀಪಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ. ತಮ್ಮ ಪಿಂಚಣಿ ಮತ್ತು ಗ್ರಾಚ್ಯುಟಿಗಳನ್ನು ವಿಳಂಬವಿಲ್ಲದೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DOPPW) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅ. 25ರ ಹೊಸ ಸೂಚನೆಗಳ ಪ್ರಕಾರ, ಇನ್ನು ಮುಂದೆ ನಿವೃತ್ತಿಗೆ 2 ತಿಂಗಳು ಮೊದಲೇ ಪಿಂಚಣಿ ಮತ್ತು ಗ್ರಾಚ್ಯುಟಿ ಆದೇಶ ಕೈ ಸೇರಲಿದೆ (Pension & Gratuity Guidelines).

ನಿವೃತ್ತರ ಪಟ್ಟಿಗಳನ್ನು ತಯಾರಿಸುವುದರಿಂದ ಹಿಡಿದು ಪಿಂಚಣಿ ಪಾವತಿ ಆದೇಶ (Pension Payment Order) ವಿತರಣೆಯವರೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ಮೂಲಕ ನಿವೃತ್ತ ನೌಕರರಿಗೆ ನೆರವಾಗಬೇಕು ಎಂದು ಹೊಸ ಮಾರ್ಗಸೂಚಿ ತಿಳಿಸಿದೆ.

ಜ್ಞಾಪಕ ಪತ್ರವನ್ನು ನೀಡುವ ಮೂಲಕ ಡಿಒಪಿಪಿಡಬ್ಲ್ಯು ನಿವೃತ್ತಿಯನ್ನು ಸಮೀಪಿಸುತ್ತಿರುವ ಸರ್ಕಾರಿ ನೌಕರರು ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಗದಿತ ಸಮಯದಲ್ಲಿ ಪಡೆಯಲು ಸಹಾಯ ಮಾಡಲಿದೆ. ಉದ್ಯೋಗಿಗಳು ತಮ್ಮ ಪ್ರಯೋಜನಗಳನ್ನು ತ್ವರಿತವಾಗಿ ಮತ್ತು ತೊಡಕುಗಳಿಲ್ಲದೆ ಪಡೆಯುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳು ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಭಾಗಗಳ ಮುಖ್ಯಸ್ಥರ (Heads of Departments) ಕಚೇರಿಗೆ ಈ ನಿಟ್ಟಿನಲ್ಲಿ ಪ್ರಮುಖ ಜವಾಬ್ದಾರಿ ಇದ್ದು, ಮುಂದಿನ 15 ತಿಂಗಳಲ್ಲಿ ನಿವೃತ್ತರಾಗಲಿರುವ ಎಲ್ಲ ಉದ್ಯೋಗಿಗಳ ಪಟ್ಟಿಯನ್ನು ಪ್ರತಿ ತಿಂಗಳ 15ರೊಳಗೆ ಸಿದ್ಧಪಡಿಸಬೇಕು. ಈ ಕ್ರಮವು ಪಿಂಚಣಿದಾರರನ್ನು ಮುಂಚಿತವಾಗಿ ಗುರುತಿಸಲು ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅನುವು ಮಾಡಿಕೊಡಲಿದೆ. ಆ ಮೂಲಕ ನಿವೃತ್ತಿಯ ಪ್ರಕ್ರಿಯೆ ಸುಗಮವಾಗಲಿದೆ.

ಮಾರ್ಗಸೂಚಿಯಲ್ಲಿ ಏನಿದೆ?

ಮೊದಲೇ ಹೇಳಿದಂತೆ ನಿಯಮ 54ರ ಪ್ರಕಾರ, ಪ್ರತಿ ವಿಭಾಗದ ಮುಖ್ಯಸ್ಥರು (HOD) ಆಯಾ ತಿಂಗಳ 15ನೇ ತಾರಿಕಿನೊಳಗೆ ಮುಂದಿನ 15 ತಿಂಗಳೊಳಗೆ ನಿವೃತ್ತರಾಗಲಿರುವ ಎಲ್ಲ ಸರ್ಕಾರಿ ನೌಕರರ ಪಟ್ಟಿಯನ್ನು ಸಿದ್ಧಪಡಿಸಬೇಕು. ಈ ವಿವರ ಅಕೌಂಟ್ಸ್ ಅಧಿಕಾರಿಯನ್ನು ತಲುಪಿದ ನಂತರ ಅವರು ಅಗತ್ಯ ತಪಾಸಣೆಗಳನ್ನು ನಡೆಸಬೇಕಾಗುತ್ತದೆ ಮತ್ತು ಉದ್ಯೋಗಿಯ ನಿವೃತ್ತಿ ದಿನಾಂಕಕ್ಕೆ ಕನಿಷ್ಠ 2 ತಿಂಗಳ ಮೊದಲು ಪಿಂಚಣಿ ಪಾವತಿ ಆದೇಶವನ್ನು (PPO) ನೀಡಬೇಕಾಗುತ್ತದೆ. ಪಿಂಚಣಿ ಮತ್ತು ಗ್ರಾಚ್ಯುಟಿ ವಿತರಣೆಯಲ್ಲಿ ಯಾವುದೇ ವಿಳಂಬವನ್ನು ತಡೆಗಟ್ಟಲು ಈ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನಿವೃತ್ತಿಗೆ ಒಂದು ವರ್ಷದ ಮೊದಲು ಪಿಂಚಣಿಯನ್ನು ಸುಗಮವಾಗಿ ಪಾವತಿಸಲು ಅಗತ್ಯವಾದ ಪೂರ್ವಸಿದ್ಧತಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ನಿಯಮ 56 ಮತ್ತು 57ರಲ್ಲಿ ವಿಸ್ತಾರವಾದ ಕಾರ್ಯವಿಧಾನವನ್ನು ಉಲ್ಲೇಖಿಸಲಾಗಿದೆ. ಇದು ನೌಕರರ ಸೇವೆಯ ಪರಿಶೀಲನೆ, ದಾಖಲಾತಿಗಳಲ್ಲಿನ ಲೋಪ, ನ್ಯೂನತೆಗಳನ್ನು ಸರಿಪಡಿಸುವುದನ್ನೂ ಒಳಗೊಂಡಿದೆ. ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಮುಂಚಿತವಾಗಿ ಪರಿಹರಿಸಲು ಈ ಸಿದ್ಧತೆಗಳು ನಿವೃತ್ತಿ ದಿನಾಂಕಕ್ಕಿಂತ ಒಂದು ವರ್ಷ ಮುಂಚಿತವಾಗಿ ಪ್ರಾರಂಭವಾಗಬೇಕು ಎಂದು ಸೂಚಿಸಲಾಗಿದೆ.

ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳು ಈ ಮಾರ್ಗಸೂಚಿಗಳನ್ನು ಅನುಸರಿಸಲು ಮತ್ತು ಈ ನಿರ್ಣಾಯಕ ಸಮಯದ ಬಗ್ಗೆ ಸಿಬ್ಬಂದಿಗೆ ಮನವರಿಕೆ ಮಾಡಲು ಆದೇಶಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಸುದ್ದಿಯನ್ನೂ ಓದಿ: Diwali Muhurt Trading: ಮುಹೂರ್ತ ಟ್ರೇಡಿಂಗ್‌ ಶುಭಾರಂಭ, ಸೆನ್ಸೆಕ್ಸ್‌ 335 ಅಂಕ ಜಿಗಿತ, ನಿಫ್ಟಿ 24,300ಕ್ಕೆ ಏರಿಕೆ