ಚಿಕ್ಕನಾಯಕನಹಳ್ಳಿ: ನಮ್ಮ ಭಾಷೆಯನ್ನು ಉಳಿಸುವಲ್ಲಿ ನಾವೆಲ್ಲರೂ ಒಂದಾಗಬೇಕು, ಹಲವು ಸಂಘಟನೆಗಳು ಸಹ ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಬೆಳೆಸುತ್ತಿವೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಭಿಪ್ರಾಯ ಪಟ್ಟರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಸಾಹಿತಿಗಳಾದ ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಜ್ಞಾನಪೀಠ ಪ್ರಶಸ್ತಿ ಪಡೆದ ಹಲವರೆಲ್ಲರೂ ಕನ್ನಡ ವನ್ನು ಸಾಹಿತ್ಯಕವಾಗಿ, ಶ್ರೀಮಂತಿಕವಾಗಿ ಬೆಳೆಸಿದ್ದಾರೆ ಅವರು ಕನ್ನಡವನ್ನು ಬೆಳೆಸಿದ ರೀತಿಯಲ್ಲಿಯೇ ಕನ್ನಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದರು.
ತಹಶೀಲ್ದಾರ್ ಪುರಂದರ್ ಕೆ ಮಾತನಾಡಿ,ಈ ವರ್ಷ ಸುವರ್ಣ ಕರ್ನಾಟಕ ವರ್ಷವನ್ನಾಗಿ ಸರ್ಕಾರದ ಆಶಯದಂತೆ ಇಡೀ ಕರುನಾಡು ಸಂಭ್ರಮಿಸುತ್ತಿದೆ. ಆಲೂರು ವೆಂಕಟರಾಯರು, ಗಂಗಾದರರವ್ ದೇಶಪಾಂಡೆ, ಆರ್.ಆರ್. ದಿವಾಕರ್ ನಾ.ಸು.ಹರಡಿಕರ್ ಮುಂತಾದ ಏಕೀಕರಣಕ್ಕೆ ದುಡಿದ ಮಹನೀಯರ ಆಶಯ ಈಡೇರಿದೆ. ಕರ್ನಾಟಕ ಸಾವಿರಾರು ಇತಿಹಾಸ ವರ್ಷಗಳ ಇತಿಹಾಸ ಹೊಂದಿರುವ ತನ್ನದೇ ಆದ ಸಂಸ್ಕೃತಿ ಭಾಷೆ ವೈವಿದ್ಯತೆಯನ್ನು ಒಳಗೊಂಡಿರುವ ಜನಾಂಗ ವಾಸಿಸುತ್ತಿದ್ದ ಭೂ ಪ್ರದೇಶ, ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರದ ಅರಸರುಗಳು ಮೈಸೂರು, ಕೆಳದಿ, ದುರ್ಗದಂತಹ ಪ್ರದೇಶಗಳನಾಳಿದ ರಾಜರುಗಳು ಮನುಜಂ ಕುಲಂ ತಾನೊಂದೇ ವಲಂ ಎಂದು ಸಾರಿದ ಪಂಪನಿಂದ ಇಂದಿನವರೆಗೆ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ವಿಶ್ವದಾದ್ಯಂತ ಪಸರಿಸುತ್ತಿರುವ ಕನ್ನಡಿಗ ವಿದ್ವಾಂಸರ ನೆಲೆವೀಡಾಗಿದೆ ಎಂದರು.
12ನೇ ಶತಮಾನದಲ್ಲಿ ಸಾಮಾನ್ಯರ ಮಧ್ಯೆ ತಮ್ಮ ವಚನಗಳಿಂದ ಶರನ ಪರಂಪರೆಯನ್ನು ಅದರೊಟ್ಟಿಗೆ ಕಾಯಕ ತತ್ವವನ್ನು ಪ್ರಚಾರ ಪಡಿಸಿದ ವಚನಕಾರರು ನಂತರ ದಾಸ ಪರಂಪರೆ ಮೂಲಕ ಕೀರ್ತನೆ ಸಾಹಿತ್ಯ ಶಕೆಯನ್ನು ಆರಂಬಿಸಿದ ದಾಸ ಶ್ರೇಷ್ಠರು ತಮ್ಮ ತತ್ವಪದಗಳ ಮೂಲಕ ಸಾಮಾನ್ಯರಿಗೆ ಅನುಭಾವದ ರುಚಿಯನ್ನು ಉಣಬಡಿಸಿದ ಶ್ರೇಷ್ಠ ತತ್ವಪದಕಾರರು ಮನುಜ ಮತ ವಿಶ್ವ ಪಥವನ್ನು ಬೋಧಿಸಿದ ಕುವೆಂಪುರವರ ಆದಿಯಾಗಿ ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯದ ಎಲ್ಲಾ ಸಾಹಿತಿಗಳು ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಮಾರಂಭದಲ್ಲಿ ಪತ್ರಕರ್ತ ರಾಜೀವಲೋಚನ, ಲೇಖಕ ಕಂಟಲಗೆರೆ ಗುರುಪ್ರಸಾದ್ ಸೇರಿದಂತೆ ವಿವಿಧ ಸಂಘ ಸಂಸ್ಥೆ, ಸಾಮಾಜಿಕ ಸೇವೆಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಪುರಸಭಾಧ್ಯಕ್ಷ ದಯಾನಂದ್ ಕೆಂಗಲ್, ಉಪಾಧ್ಯಕ್ಷ ರಾಜಶೇಖರ್, ಸದಸ್ಯ ಸಿ.ಡಿ.ಸುರೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಅಕ್ಷರ ದಾಸೋಹ ಅಧಿಕಾರಿ ಸಿ.ಗವಿರಂಗಯ್ಯ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: Tumkur News: ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿಯ ಎಸ್.ರಘು ಅವರಿಗೆ ‘ಉಗದಾತ’ ಬಿರುದು ಪ್ರದಾನ