Friday, 22nd November 2024

Bomb threat: ಪ್ರಧಾನಿ ಕಚೇರಿಗೆ ಬಾಂಬ್‌ ಬೆದರಿಕೆ; ಕಿಡಿಗೇಡಿ ಅರೆಸ್ಟ್‌-ಭಯೋತ್ಪಾದನೆ ಕುರಿತ ತನ್ನ ಪುಸ್ತಕ ಪ್ರಕಟಿಸುವಂತೆ ಪದೇ ಪದೆ ಇ-ಮೇಲ್‌ ಮಾಡ್ತಿದ್ನಂತೆ ಈತ!

Fake bomb threats

ನಾಗ್ಪುರ: ಪ್ರಧಾನಿ ಮಂತ್ರಿ ಕಚೇರಿ (PMO), ಉನ್ನತ ಸರ್ಕಾರಿ ಅಧಿಕಾರಿಗಳು ಹಾಗೂ ದೇಶದ ವಿವಿಧ ವಿಮಾನ ಮತ್ತು ರೈಲುಗಳನ್ನು ಗುರಿಯಾಗಿಟ್ಟುಕೊಂಡು ನಕಲಿ ಬಾಂಬ್‌ ಬೆದರಿಕೆ (Bomb threat) ಹಾಕಿ ಸುಮಾರು 100 ಇಮೇಲ್‌ಗಳನ್ನು ಕಳುಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಅರೆಸ್ಟ್‌ ಮಾಡಲಾಗಿದೆ. ಮಹಾರಾಷ್ಟ್ರದ ಮಾವೋವಾದಿ ಪೀಡಿತ ಜಿಲ್ಲೆಯಾದ ಗೊಂಡಿಯಾದ 35 ವರ್ಷದ ಜಗದೀಶ್‌ ಯುಕೇಯ್‌ ಎಂಬಾತನನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.

ಈತ ನಕಲಿ ಮೇಲ್‌ ಐಡಿ ಸೃಷ್ಟಿಸಿ ಪ್ರಧಾನಿ ಕಚೇರಿ ಹಾಗೂ ಹಲವು ಕಡೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ. ಸುಮಾರು 100 ಕ್ಕೂ ಹೆಚ್ಚು ಬಾರಿ ಮೇಲ್‌ ಕಳುಹಿಸಿದ್ದ ಎಂಬುದು ತಿಳಿದು ಬಂದಿದೆ. ಆತ ಅತಂಕ್‌ವಾದ್‌-ಏಕ್ ತುಫಾನಿ ರಾಕ್ಷಸ್‌ ಎಂಬ ಪುಸ್ತಕವನ್ನು ಬರೆದಿದ್ದು ಅದನ್ನು ಪ್ರಕಟಿಸುವಂತೆ ಮೊದಲು ಪ್ರಧಾನಿ ಕಚೇರಿಗೆ ಮೇಲ್‌ ಕಳುಹಿಸುತ್ತಿದ್ದ. ಹಲವು ಬಾರಿ ಅದೇ ವಿಷಯಕ್ಕೆ ಸಂಬಂಧಿಸಿ ಮೇಲ್‌ ಮಾಡಿದ್ದ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದ್ದಾಗ ಹತಾಶನಾಗಿ ಹುಸಿ ಬೆದರಿಕೆ ಹಾಕಲು ಶುರು ಮಾಡಿದ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ನಾಗ್ಪುರದ ಹೆಚ್ಚುವರಿ ಸಿಪಿ, ಸಂಜಯ್ ಪಾಟೀಲ್ ಪ್ರಕಾರ ಮಾತನಾಡಿ ಯುಕೇಯ್‌ ಬರೆದ ಪುಸ್ತಕವು ಭಯೋತ್ಪಾದನೆಗೆ ಸಂಬಂಧಿಸಿದ್ದಾಗಿದ್ದು, ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುವ ಭಯೋತ್ಪಾದಕ ಸಿದ್ಧಾಂತಗಳ ಮೂಲ ಸಂಕಲನವಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಈತ ಹಲವು ಮೇಲ್‌ ಕಳುಹಿಸಿದ್ದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಯವುದೇ ಕೇಸ್‌ ದಾಖಲಾಗಿರಲಿಲ್ಲ. ಈಗ ಆತನ ಸಂಪೂರ್ಣ ವಿಚಾರಣೆ ನಡೆಸಲಾಗುತ್ತಿದೆ.

ಆತ ಇತ್ತೀಚೆಗೆ ಕಳುಹಿಸಿದ್ದ ಮೇಲ್‌ನಲ್ಲಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಎಚ್ಚರಿಸಿದ್ದ. ಅಮೆರಿಕದಿಂದ ಬಂದ ಸಂದೇಶದ ರೀತಿಯಲ್ಲಿ ಬಿಂಬಿಸಲು ಅಮೆರಿಕ ಇಂಗ್ಲೀಷ್‌ ಬಳಕೆ ಮಾಡಿದ್ದ. ಇದೀಗ ಪೊಲೀಸ್‌ ತನಿಖೆ ನಡೆಯುತ್ತಿದ್ದು, ಆತ ಬಳಸಿದ ವೆಬ್‌ ಸೈಟ್‌ ಹಾಗೂ ಡಿಜಿಟಲ್‌ ಉಪಕರಣಗಳು ಸೇರಿ ಆತನ ಸಂಪೂರ್ಣ ಮೊಬೈಲ್‌ ಹಿಸ್ಟರಿಯನ್ನು ತೆಗಿಸಲಾಗಿದೆ. “ನಾವು ಅವರ ಕರೆ ವಿವರಗಳ ದಾಖಲೆಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಅಲ್ಲದೇ ಆತನ ಬ್ಯಾಂಕ್ ಖಾತೆಗಳು ಮತ್ತು ಪರಿಶೀಲಿಸಲಾಗುತ್ತಿದೆ”ಪೊಲೀಸ್ ಕಮಿಷನರ್ ರವೀಂದರ್ ಸಿಂಗಲ್ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಇಮೇಲ್‌ ಆರೋಪಿ ಇಮೇಲ್‌ ಕಳುಹಿಸಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ Bomb Threat : ಸ್ಕೂಲ್‌, ವಿಮಾನ, ಹೊಟೇಲ್‌ ಆಯ್ತು..ಈಗ ರೈಲಿಗೂ ಬಂತೂ ಬಾಂಬ್‌ ಬೆದರಿಕೆ! ಭಾರೀ ಆತಂಕ ಸೃಷ್ಟಿ

ಹೆಚ್ಚಿನ ತನಿಖೆಗೆ ದೆಹಲಿ ಸೈಬರ್‌ ಕ್ರೈಂ ತಂಡದ ಒಂದು ಭಾಗವೂ ಕೈಜೋಡಿಸುತ್ತದೆ ಎಂಬುದನ್ನು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.