ತುಮಕೂರು: ರಾಷ್ಟ್ರೀಯ ಹಾಗೂ ರಾಜ್ಯ ಹಬ್ಬಗಳ ಆಚರಣೆಯ ದಿನಗಳನ್ನು ರಜಾ ದಿನವೆಂದು ಪರಿಗಣಿಸದೆ, ದೇಶ, ನಾಡು-ನುಡಿಗಾಗಿ ಶ್ರಮಿಸುವ ಕರ್ತವ್ಯ ದಿನವೆಂದು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯವು ಶುಕ್ರವಾರ ಆಯೋಜಿಸಿದ್ದ 69ನೆಯ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮಾತನಾಡಿದರು.
ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕು. ‘ಕನ್ನಡ ಮಾತನಾಡಿ, ಕನ್ನಡದಲ್ಲೇ ವ್ಯವಹರಿಸಿ’ ಎಂದು ಕಡ್ಡಾಯ ಮಾಡುವ ಕಾಲದಲ್ಲಿ ನಾವಿರುವುದು ಬೇಸರದ ಸಂಗತಿ. ಕರ್ನಾಟಕ ದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂದರು.
ಒತ್ತಾಯಪೂರ್ವಕವಾಗಿ ಯಾವುದೇ ಭಾಷೆಯನ್ನು ಯಾರ ಮೇಲೂ ಹೇರುವ ಬದಲು, ಕನ್ನಡದ ನೆಲ, ಜಲ, ಗಾಳಿಯ ಮಹತ್ವ ತಿಳಿದು, ಭಾಷೆಯನ್ನು ಬಳಸಿ, ಉಳಿಸಿದರೆ ಅವರೂ ಕನ್ನಡ ತಾಯಿಯ ಮಕ್ಕಳು. ಕರ್ನಾಟಕದ ಗಡಿ ಭಾಗಗಳಲ್ಲಿ ಕನ್ನಡ ಭಾಷೆ ಮಾಯವಾಗುತ್ತಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ರಾಷ್ಟ್ರೀಯ ಹಬ್ಬಗಳ ಆಚರಣೆ ಸಂಯೋಜಕ ಡಾ. ಎ. ಎಂ. ಮಂಜುನಾಥ, ಹಣಕಾಸು ಅಧಿಕಾರಿ ನರಸಿಂಹಮೂರ್ತಿ ಹಾಗೂ ವಿವಿಯ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.