ಬೆಂಗಳೂರು: ನ. 3ರಂದು ಸ್ಯಾಂಡಲ್ವುಡ್ಗೆ ಬೆಳ್ಳಂಬೆಳಗ್ಗೆಯೇ ಬರಸಿಡಿಲೊಂದು ಬಡಿದಿದೆ. ಖ್ಯಾತ ನಿರ್ದೇಶಕ ಗುರುಪ್ರಸಾದ್ (Director Guruprasad) ಅವರ ಮೃತದೇಹ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನ ಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಯಾಂಡಲ್ವುಡ್ನಲ್ಲಿ ಹೊಸದೊಂದು ಟ್ರೆಂಡ್ ಸೆಟ್ ಮಾಡಿದ್ದ ನಿರ್ದೇಶಕರ ಈ ದುರಂತ ಅಂತ್ಯದ ಸುದ್ದಿಯನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಗುರುಪ್ರಸಾದ್-ಜಗ್ಗೇಶ್ ಹಿಟ್ ಜೋಡಿ
ಗುರುಪ್ರಸಾದ್ ಎಂದಾಗ ಥಟ್ಟನೆ ನೆನಪಿಗೆ ಬರುವುದು ಜಗ್ಗೇಶ್ ಅಭಿನಯದ ʼಮಠʼ ಮತ್ತು ʼಎದ್ದೇಳು ಮಂಜುನಾಥʼ ಸಿನಿಮಾಗಳು. ಈ ಎರಡು ಚಿತ್ರಗಳ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆದ ಗುರುಪ್ರಸಾದ್ ಮತ್ತು ಜಗ್ಗೇಶ್ ಸ್ಯಾಂಡಲ್ವುಡ್ನ ಹಿಟ್ ಜೋಡಿ ಎನಿಸಿಕೊಂಡಿತ್ತು. ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಎನಿಸಿಕೊಂಡಿದ್ದ ಈ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಸೃಷ್ಟಿಸಿದ್ದು ಮಾತ್ರವಲ್ಲ ವಿಮರ್ಶಕರ, ಪ್ರೇಕ್ಷಕರ ಗಮನ ಸೆಳೆದಿವೆ.
ʼಮಠʼ
2006ರಲ್ಲಿ ತೆರೆಕಂಡ ʼಮಠʼ ಚಿತ್ರದ ಮೂಲಕ ಗುರುಪ್ರಸಾದ್ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪರಿಚಯಗೊಂಡರು. ಮೊದಲ ಚಿತ್ರದಲ್ಲೇ ಅವರಿಗೆ ಜಗ್ಗೇಶ್ನಂತಹ ಸ್ಟಾರ್ ನಟನಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿತ್ತು. ಅಲ್ಲದೆ ಈ ಚಿತ್ರ ಜಗ್ಗೇಶ್ ಅವರ ವೃತ್ತಿಜೀವನಕ್ಕೆ ಹೊಸ ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಿತ್ತು. ವಿಶೇಷ ಎಂದರೆ ಇದು ನವರಸ ನಾಯಕ ಜಗ್ಗೇಶ್ ಅವರ 100ನೇ ಚಿತ್ರ. ಬ್ಲ್ಯಾಕ್ ಕಾಮಿಡಿ ಕಾನ್ಸೆಪ್ಟ್ನಲ್ಲಿ ತೆರೆಕಂಡ ಈ ಚಿತ್ರದಲ್ಲಿ ಜಗ್ಗೇಶ್ ಅವರ ಅಭಿನಯ ಸಾಕಷ್ಟು ಗಮನ ಸೆಳೆದಿತ್ತು. ಹೀಗೂ ಸಿನಿಮಾ ಮಾಡಬಹುದು ಎನ್ನುವುನ್ನು ʼಮಠʼದ ಮೂಲಕ ಗುರುಪ್ರಸಾದ್ ತೋರಿಸಿ ಕೊಟ್ಟಿದ್ದರು. ಸ್ಯಾಂಡಲ್ವುಡ್ನ ಸಿದ್ಧ ಸೂತ್ರಗಳನ್ನು ಮೀರಿ ತಯಾರಾದ ಈ ಸಿನಿಮಾ ವಿಮರ್ಶಕರ ಗಮನವನ್ನೂ ಸೆಳೆಯಿತು. ವಿ.ಮನೋಹರ್ ಸಂಗೀತ ನೀಡಿದ ಈ ಚಿತ್ರದ ʼತಪ್ಪು ಮಾಡದವ್ರುʼ ಹಾಡು ಇಂದಿಗೂ ಜನಪ್ರಿಯ. ಜಗ್ಗೇಶ್ ಜತೆಗೆ ಬಿರಾದರ್, ಆರ್.ಎನ್.ಸುದರ್ಶನ್, ತಬಲಾ ನಾಣಿ, ಮಂಡ್ಯ ರಮೇಶ್ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ʼಎದ್ದೇಳು ಮಂಜುನಾಥʼ
ಮೊದಲ ಚಿತ್ರದಲ್ಲೇ ಸಾಕಷ್ಟು ಗಮನ ಸೆಳೆದ ಗುರುಪ್ರಸಾದ್ ಕನ್ನಡ ಅತ್ಯುತ್ತಮ ನಿರ್ದೇಶಕರಾಗುವ ಎಲ್ಲ ಸಾಧ್ಯತೆಗಳನ್ನು ಪ್ರದರ್ಶಿಸಿದ್ದರು. ʼಮಠʼದ ಯಶಸ್ಸಿನಿಂದ ಪ್ರೇರಿತರಾಗಿ ಗುರುಪ್ರಸಾದ್ ಮತ್ತು ಜಗ್ಗೇಶ್ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡರು. ಅದುವೇ 2009ರಲ್ಲಿ ತೆರೆಕಂಡ ʼಎದ್ದೇಳು ಮಂಜುನಾಥʼ. ಆ ಮೂಲಕ ಮತ್ತೊಮ್ಮೆ ಸ್ಯಾಂಡಲ್ವುಡ್ನಲ್ಲಿ ಈ ಜೋಡಿ ಗೆದ್ದು ಬೀಗಿತು. ಈ ಬಾರಿಯೂ ವಿಭಿನ್ನ ಕಥೆಯನ್ನೊಂದನ್ನು ಗುರುಪ್ರಸಾದ್ ವಿಶಿಷ್ಟ ಮಾದರಿಯಲ್ಲಿ ತೆರೆ ಮೇಲೆ ಪ್ರಸ್ತುತಪಡಿಸಿದ್ದರು. ಸೋಮಾರಿ, ನಿರುದ್ಯೋಗಿ ಮಧ್ಯ ವಯಸ್ಕ ಮಂಜುನಾಥನ ಪಾತ್ರದಲ್ಲಿ ಜಗ್ಗೇಶ್ ನಟನೆ ಗಮನ ಸೆಳೆದಿತ್ತು. ಅವರೊಂದಿಗೆ ಯಜ್ಞಾ ಶೆಟ್ಟಿ ಮತ್ತು ತಬಲಾ ನಾಣಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಕೂಡ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗುವ ಜತೆಗೆ ಪ್ರೇಕ್ಷಕರ ಗಮನವನ್ನೂ ಸೆಳೆದಿತ್ತು. ಅತ್ಯುತ್ತಮ ಚಿತ್ರಕಥೆಗಾಗಿ ಗುರುಪ್ರಸಾದ್ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಈ ಎರಡೂ ಚಿತ್ರಗಳು ಜಗ್ಗೇಶ್ ಅವರ ವೃತ್ತಿ ಜೀವನವನ್ನೇ ಬದಲಾಯಿಸಿದ್ದವು. ಅವರು ಮತ್ತೊಮ್ಮೆ ತಮ್ಮ ಚಾರ್ಮ್, ನಟನಾ ಕೌಶಲ್ಯವನ್ನು ತೆರೆ ಮೇಲೆ ಪ್ರದರ್ಶಿಸಿದ್ದರು.
ಇದಾದ ಬಳಿಕ ಈ ಹಿಟ್ ಜೋಡಿ ಅನೇಕ ವರ್ಷಗಳ ಕಾಲ ಜತೆಯಾಗಿ ಸಿನಿಮಾ ಮಾಡಿರಲಿಲ್ಲ. ಇಬ್ಬರ ಕಾಂಬಿನೇಷನ್ನ ಚಿತ್ರಗಳಿಗಾಗಿ ಅಭಿಮಾನಿಗಳು ಕಾಯುತ್ತಲೇ ಇದ್ದರು. ಕೊನೆಗೂ ಅದಕ್ಕೆ ಮುಹೂರ್ತವೊಂದು ಕೂಡಿ ಬಂದಿತ್ತು. ಈ ವರ್ಷಾರಂಭದಲ್ಲಿ ಗುರುಪ್ರಸಾದ್-ಜಗ್ಗೇಶ್ ಜೋಡಿಯ ʼರಂಗನಾಯಕʼ ತೆರೆಗೆ ಬಂದಿತ್ತು. ಸುಮಾರು 15 ವರ್ಷಗಳ ಬಳಿಕ ಇವರು ಒಂದಾಗುತ್ತಿರುವುದರಿಂದ ನಿರೀಕ್ಷೆ ಜೋರಾಗಿತ್ತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತ್ತು.
ಈ ಸುದ್ದಿಯನ್ನೂ ಓದಿ: Director Guruprasad: ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು ದಾಖಲು; ಕಾರಣವೇನು?