Friday, 22nd November 2024

Director Guruprasad: ಗುರುಪ್ರಸಾದ್ ಆತ್ಮಹತ್ಯೆ; ಡಿಸಿಎಂ ಡಿಕೆಶಿ, ಕೇಂದ್ರ ಸಚಿವ ಎಚ್‌ಡಿಕೆ ಸಂತಾಪ

Director Guruprasad: ಗುರುಪ್ರಸಾದ್ ಆತ್ಮಹತ್ಯೆ; ಡಿಸಿಎಂ ಡಿಕೆಶಿ, ಕೇಂದ್ರ ಸಚಿವ ಎಚ್‌ಡಿಕೆ ಸಂತಾಪ

ಬೆಂಗಳೂರು: ಖ್ಯಾತ ನಿರ್ದೇಶಕ, ನಟ ಗುರುಪ್ರಸಾದ್ (Director Guruprasad) ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸೃಜನಶೀಲ ನಿರ್ದೇಶಕರು ಹಾಗೂ ಕನಕಪುರ ಮೂಲದವರೇ ಆದ ಗುರುಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಗಿದೆ. ಬೆಳ್ಳಿತೆರೆ ಹಾಗೂ ಕಿರುತೆರೆಗೆ ತಮ್ಮದೇ ಶೈಲಿಯ ಕೊಡುಗೆ ನೀಡಿದ ಗುರುಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರು ಹಾಗೂ ಆತ್ಮೀಯರ ನೋವಿನಲ್ಲಿ ನಾನೂ ಕೂಡ ಭಾಗಿ ಎಂದು ತಿಳಿಸಿದ್ದಾರೆ.

ಇಂತಹ ನಿರ್ಧಾರ ಸರಿಯಲ್ಲ ಎಂದ ಎಚ್‌ಡಿಕೆ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ನಿರ್ದೇಶಕ, ನಟ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಕೇಳಿ ಬಹಳ ನೋವಾಗಿದೆ. ಕನ್ನಡ ಚಿತ್ರರಂಗ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡಿದೆ. ಗುರುಪ್ರಸಾದ್ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇತ್ತೀಚೆಗೆ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಆರ್ಥಿಕ ಸಂಕಷ್ಟ ಅಥವಾ ಯಾವುದೋ ಸಮಸ್ಯೆಗೆ ಸಿಲುಕಿ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ದುರಂತ. ಏನೇ ಸಮಸ್ಯೆಗಳಿದ್ದರೂ ಎಲ್ಲವನ್ನು ಧೈರ್ಯವಾಗಿ ಎದುರಿಸಬೇಕು. ಇಂತಹ ನಿರ್ಧಾರ ಸರಿಯಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Terror Attack: ಜನನಿಬಿಡ ಮಾರುಕಟ್ಟೆಯಲ್ಲಿ ಗ್ರೆನೇಡ್‌ ಸ್ಫೋಟ; 9ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಸರಸ್ವತಿ ಪುತ್ರನಿಗೆ ಬೆಂಬಿಡದೇ ಕಾಡಿತ್ತು ಸಾಲು ಸಾಲು ವಿವಾದಗಳು!

Guruprasad

ಬೆಂಗಳೂರು: ನಿರ್ದೇಶಕ,ನಟ ಗುರುಪ್ರಸಾದ್‌(Guruprasad Death) ಆತ್ಮಹತ್ಯೆ ಬಗ್ಗೆ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತ ನೀಡಿದೆ. ಸಾಲಬಾಧೆಯಿಂದ ಖಿನ್ನತೆಗೊಳಗಾಗಿದ್ದ ಗುರುಪ್ರಸಾದ್‌, ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಸರಸ್ವತಿ ಪುತ್ರನೆಂದೇ ಖ್ಯಾತಿ ಪಡೆದಿದ್ದ ಈ ನಟ ನಿರ್ದೇಶಕ ಸದಾ ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುತ್ತಲೇ ಇದ್ದರು. ಒಂದು ಬಾರಿ ಅರೆಸ್ಟ್‌ ಕೂಡ ಆಗಿದ್ದರು.

ಚೆಕ್‌ ಬೌನ್ಸ್‌ ಕೇಸ್‌-ಅರೆಸ್ಟ್‌

2015ರಲ್ಲಿ ಶ್ರೀನಿವಾಸ್ ಎನ್ನುವವರು ಎರಡನೇ ಸಲ ಚಿತ್ರದ ಮೂಲಕ ಗುರುಪ್ರಸಾದ್‌ ಅವರ ಡೈರೆಕ್ಷನ್‌ ತಂಡ ಸೇರಿದರು. ಇದೇ ಸಿನಿಮಾ ಚಿತ್ರೀಕರಣ ಹಂತರದಲ್ಲಿದ್ದಾಗ ತಮಗೆ ಪರಿಚಯವಿದ್ದ ಮಾರ್ವಾಡಿಯೊಬ್ಬರಿಂದ ಹದಿನೇಳು ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ನಂತರ ತಮ್ಮ ಪತ್ನಿಯ ಒಡವೆಯನ್ನೆಲ್ಲಾ ಮಾರಿ ಹದಿಮೂರು ಲಕ್ಷ ರುಪಾಯಿಗಳನ್ನು ಗುರುಪ್ರಸಾದ್‌ ಕೈಗೊಪ್ಪಿಸಿದ್ದರು. ʻನಮ್ಮ ಡೈರೆಕ್ಟ್ರು ಕಷ್ಟದಲ್ಲಿದ್ದಾರೆ. ಆರ್ಥಿಕ ಸಂಕಷ್ಟಗಳು ಅವರ ಪ್ರತಿಭೆಯನ್ನು ನುಂಗಿಹಾಕಬಾರದುʼ ಅಂದುಕೊಂಡು ಗುರು ಕಷ್ಟದಲ್ಲಿದ್ದಾಗಲೆಲ್ಲಾ ಕೈ ಹಿಡಿದವರು ಶ್ರೀನಿವಾಸ್.‌ ಆದರೆ ಗುರುಪ್ರಸಾದ್‌ ಶಿಷ್ಯನ ನಿಯತ್ತನ್ನು ಉಳಿಸಿಕೊಳ್ಳಲಿಲ್ಲ. ಬದಲಿಗೆ ಕೊಟ್ಟ ಹಣ ವಾಪಾಸು ಕೇಳಿದರೆ ಈಗ, ಆಗ ಅಂತಾ ಅಲೆದಾಡಿಸಿದರು. ಕೊನೆಗೆ ಗುರುಪ್ರಸಾದ್ ಚೆಕ್ ಕೂಡ ಬೌನ್ಸ್ ಆಗಿತ್ತು. ಇದರಿಂದ ಶ್ರೀನಿವಾಸ್ ಹೈರಾಣಾಗಿ ಗಿರಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬೆಂಗಳೂರಿನ ಗಿರಿ ನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿದ್ದರು. ಆದರೆ ಅರೆಸ್ಟ್​ ಆದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ಗುರುಪ್ರಸಾದ್ ನಾನೇನೂ ತಪ್ಪು ಮಾಡಿಲ್ಲ. ಚೆಕ್​ಬೌನ್ಸ್​ಆಗಿದೆ ಅಷ್ಟೇ ಎಂದಿದ್ದರು.

ಪ್ರಚಾರಕ್ಕೆ ಬಾರದೇ ಸತಾಯಿಸಿದ್ದ ಗುರುಪ್ರಸಾದ್‌

ಇನ್ನೂ ಎರಡನೇ ಸಲ ಚಿತ್ರದ ಸಮಯದಲ್ಲಿ ಕೂಡ ಗುರುಪ್ರಸಾದ್ ವಿವಾದ ಮೈಮೇಲೆ ಎಳೆದುಕೊಂಡರು. ಒಂಬತ್ತು ತಿಂಗಳ ಒಳಗೆ ಸಂಪೂರ್ಣ ಚಿತ್ರೀಕರಣ ಮುಗಿಸುವುದಾಗಿ ಹೇಳಿದ ಗುರುಪ್ರಸಾದ್ ಚಿತ್ರದ ಚಿತ್ರೀಕರಣ ಮುಗಿಸಲು ಹತ್ ಹತ್ರ ನಾಲ್ಕು ವರ್ಷಗಳನ್ನು ತೆಗೆದುಕೊಂಡರು. ಇದು ಸಾಲದು ಎಂಬಂತೆ ಚಿತ್ರ ಬಿಡುಗಡೆಗೆ ಸಿದ್ಧವಾದಾಗ ಪ್ರಚಾರಕ್ಕೆ ಬಾರದೇ ಸತಾಯಿಸಿದರು. ಈ ಕಾರಣಕ್ಕೆ ಎರಡನೇ ಸಲ ಚಿತ್ರದ ನಿರ್ಮಾಪಕ ಯೋಗೀಶ್ ನಾರಾಯಣ್ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದರು.

ಹಣ ವಂಚನೆ ಆರೋಪ

ಕೇವಲ ಇದು ಮಾತ್ರವಲ್ಲದೇ ಗುರುಪ್ರಸಾದ್ ವಿರುದ್ಧ ಟೋಟಲ್‌ ಕನ್ನಡ ಹೆಸರಿನಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿ. ಲಕ್ಷ್ಮೀಕಾಂತ್‌ ಅವರು ಜಯನಗರ ಪೊಲೀಸ್‌ ಠಾಣೆಯಲ್ಲಿ ಕಂಪ್ಲೇಂಟು ನೀಡಿದ್ದರು. ನಮ್ಮ ಮಳಿಗೆಯಿಂದ ಕನ್ನಡದ ಪುಸ್ತಕಗಳನ್ನು ಖರೀದಿಸಿ 65,755 ರೂಪಾಯಿಗಳನ್ನು ನೀಡದೇ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಿರ್ದೇಶಕ ಗುರುಪ್ರಸಾದ್‌ ಅವರು 3 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಅವರ ಮೃತದೇಹ ಅಪಾರ್ಟ್‌ಮೆಂಟ್‌ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ನಿನ್ನೆ ಗುರುಪ್ರಸಾದ್‌ ಹುಟ್ಟುಹಬ್ಬ. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್‌ ಕೊಟ್ಟಿದೆ.

ಈ ಸುದ್ದಿಯನ್ನೂ ಓದಿ: Giri Dwarakish: ತಮಿಳಿನ ಹಲವು ಸಿನಿಮಾಗಳಲ್ಲಿ ದ್ವಾರಕೀಶ್‌ ಕಿರಿಯ ಮಗ ಗಿರಿಗೆ ಅವಕಾಶ