Friday, 22nd November 2024

Halloween Party: ಹಾಲೊವನ್ ಪಾರ್ಟಿ ಇದೆ ಎಂದ ಪಾಕ್ ಮೂಲದ ವೆಬ್‌ಸೈಟ್ ಬಳಿಕ ಕ್ಷಮೆ ಯಾಚಿಸಿದ್ದು ಯಾಕೆ?

ಇಸ್ಲಾಮಾಬಾದ್‌: ಐರ್ಲಂಡ್ ನ ಡಬ್ಲಿನ್ ಪಟ್ಟಣದ ಓ’ಕರ್ನಲ್ ಸ್ಟ್ರೀಟ್‌ನಲ್ಲಿ ಹಾಲೊವನ್ ಪಾರ್ಟಿ (Halloween Party) ಇದೆ ಎಂದು ತಪ್ಪು ಸಂದೇಶವನ್ನು ರವಾನಿಸಿದ ಪಾಕಿಸ್ತಾನಿ ಮೂಲದ ವೆಬ್‌ಸೈಟ್ ಬಳಿಕ ತನ್ನ ತಪ್ಪಿಗೆ ಬೇಷರತ್ ಕ್ಷಮೆಯಾಚಿಸಿದ ಘಟನೆ ವರದಿಯಾಗಿದೆ.

ಈ ಘಟನೆಯಿಂದ “ನಮಗೆ ಮುಜುಗರವಾಗಿದೆ…” ಎಂದು ಪಾಕ್ ಮೂಲದ ವೆಬ್‌ಸೈಟ್‌ನ ಪ್ರವರ್ತಕರು ಕ್ಷಮೆಯಾಚಿಸಿದೆ. ಸುಳ್ಳು ಸಂದೇಶವನ್ನು ನಂಬಿ ಆ ಸ್ಥಳದಲ್ಲಿ ಸೇರಿದ್ದ ಪಾರ್ಟಿ ಪ್ರಿಯರಲ್ಲಿ ವೆಬ್‌ಸೈಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾತರದಿಂದ ಕಾಯುತ್ತಿದ್ದ ಪಾರ್ಟಿ ಪ್ರಿಯರನ್ನು ‘ಮಂಗ’ ಮಾಡುವ ಉದ್ದೇಶ ನಮಗಿರಲಿಲ್ಲ, ಬದಲಾಗಿ ಇದು ತಪ್ಪು ಕಲ್ಪನೆಯಿಂದಾಗಿರುವ ಒಂದು ಪ್ರಮಾದ ಎಂದು ಅದು ಹೇಳಿಕೊಂಡಿದೆ. ಈ ಸಂದೇಶ ಎಲ್ಲೆಡೆ ವೈರಲ್ ಆಗಿ ಅಕ್ಟೋಬರ್ 31ರವರೆಗೂ ಈ ತಪ್ಪು ಮಾಹಿತಿ ಎಲ್ಲೆಡೆ ಹಬ್ಬತೊಡಗಿತ್ತು.

ಈ ಬಗ್ಗೆ ಐರಿಶ್ ಟೈಮ್ಸ್ ಜತೆ ಮಾತನಾಡಿರುವ ವೆಬ್‌ಸೈಟ್‌ನ ಪ್ರವರ್ತಕರೆಂದು ಹೇಳಿಕೊಂಡ ನಝೀರ್ ಆಲಿ ಎಂಬ ವ್ಯಕ್ತಿ, ʼʼಜನರನ್ನು ತಪ್ಪು ದಾರಿಗೆಳೆಯುವುದು ತನ್ನ ಉದ್ದೇಶವಾಗಿರಲಿಲ್ಲʼʼ ಎಂದು ಹೇಳಿಕೊಂಡಿದ್ದಾರೆ. “ಇದು ನಮ್ಮ ಕಡೆಯಿಂದಲೇ ಆಗಿರುವ ತಪ್ಪು . ಇದನ್ನು ಪ್ರಕಟಿಸುವ ಮುನ್ನ ಈ ಬಗ್ಗೆ ನಾವು ಖಚಿತಪಡಿಸಿಕೊಳ್ಳಬೇಕಿತ್ತು” ಎಂದು ಆತ ಹೇಳಿದ್ದು, “ಹಾಗೆಂದು, ನಾವು ಉದ್ದೇಶಪೂರ್ವಕವಾಗಿ ಈ ಪೋಸ್ಟನ್ನು ಹಾಕಿಲ್ಲʼʼ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.

ಡಬ್ಲಿನ್‌ನ ಓ’ಕರ್ನಲ್ ಸ್ಟ್ರೀಟ್‌ನಲ್ಲಿ ಪ್ರಪ್ರಥಮ ಬಾರಿಗೆ ಎಂಬಂತೆ ಆಯೋಜನೆಗೊಂಡಿದೆ ಎಂದು ಉಲ್ಲೇಖವಿದ್ದ ಈ ಪೋಸ್ಟನ್ನು ನಂಬಿ ಸಾವಿರಾರು ಜನರು ಅಲ್ಲಿ ನೆರೆದಿದ್ದರು. ಈ ವೆಬ್‌ಸೈಟ್ ಪ್ರತೀದಿನ ನೂರಾರು ಜಾಗತಿಕ ಇವೆಂಟ್ ಗಳನ್ನು ಪಕಟ ಮಾಡುತ್ತಿದ್ದು, ಇದನ್ನು ಜಾಗತಿಕ ಕಂಟೆಂಟ್ ಕ್ರಿಯೇಟರ್‌ಗಳ ಒಂದು ತಂಡವೇ ನಿರ್ವಹಿಸುತ್ತಿದೆ. ಅವರೆಲ್ಲ ವಿವಿಧ ದೇಶಗಳಲ್ಲಿದ್ದುಕೊಂಡು ಅಲ್ಲಿಂದಲೇ ಈ ವೆಬ್‌ಸೈಟ್‌ಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಪಾಕಿಸ್ತಾನಿ ವೆಬ್‌ಸೈಟ್ ಜತೆಗೆ, ಈ ಪಾರ್ಟಿಯ ಪ್ರಕಟಣೆಯನ್ನು ಬೇರೆಯವರೂ ಸಿಕ್ಕಾಪಟ್ಟೆ ಶೇರ್ ಮಾಡಿದ್ದರು ಮತ್ತಿದು ಹಾಲೋವಿನ್ ಇವೆಂಟ್ ನಡೆಯುವುದಕ್ಕಿಂತ ಮೊದಲೇ ಗೂಗಲ್ ಸರ್ಚ್‌ನಲ್ಲಿ ಟಾಪ್‌ನಲ್ಲಿ ಕಾಣಿಸಿಕೊಂಡಿತ್ತು. ಪಾರ್ಟಿ ಪ್ರಾರಂಭವಾಗಬೇಕಿದ್ದ ರಾತ್ರಿ 8 ಗಂಟೆಗೆ ಕೇವಲ ಒಂದು ಗಂಟೆ ಮೊದಲು ಗರ್ಡಾದ ಸೋಷಿಯಲ್ ಮಿಡಿಯಾ ಪೋಸ್ಟ್ ಈ ಪಾರ್ಟಿ ನಡೆಯುವುದಿಲ್ಲ ಮತ್ತು ಅಲ್ಲಿ ಸೇರಿರುವವರೆಲ್ಲರೂ ಹಿಂತಿರುಗುವಂತೆ ಪ್ರಕಟನೆಯನ್ನು ನೀಡಿತ್ತು.

ಐರ್ಲೆಂಡ್‌ನಲ್ಲಿ ನಡೆಯುವ ಹಲವಾರು ಪಾರ್ಟಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ತನ್ನ ವೆಬ್‌ಸೈಟ್ ನೀಡುತ್ತಾ ಬಂದಿದೆ. ಇದರಲ್ಲಿ ಸೈಂಟ್ ಪ್ಯಾಟ್ರಿಕ್ಸ್ ಡೇ ಫೆಸ್ಟಿವಲ್ಸ್ ಸಹ ಸೇರಿದ್ದು, ಇದುವರೆಗೂ ಇಂತಹ ಸಮಸ್ಯೆಗಳು ಎದುರಾಗಿರಲಿಲ್ಲ ಎಂದು ಅಲಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ʼʼಈ ಪೆರೇಡ್ ರದ್ದುಗೊಳ‍್ಳುವ ಬಗ್ಗೆ ನನಗೆ ಯಾವುದೇ ಪೂರ್ವಸೂಚನೆ ಇರಲಿಲ್ಲ, ನಮಗೆ ಮೊದಲೇ ಈ ಬಗ್ಗೆ ತಿಳಿಸಿದ್ದದ್ದರೆ ಈ ಪ್ರಕಟನೆಯನ್ನು ನಾವು ಮುಂಚಿತವಾಗಿಯೇ ಸೈಟ್ ನಿಂದ ತೆಗೆದುಹಾಕುತ್ತಿದ್ದೆವು. ಆದರೆ ಈ ಕರಿತಾಗಿ ನಮ್ಮನ್ನು ಯಾರೂ ಸಂಪರ್ಕಿಸಿರಲಿಲ್ಲ..” ಎಂದು ಅವರು ಹೇಳಿಕೊಂಡಿದ್ದಾರೆ.

ಇಷ್ಟು ಮಾತ್ರವಲ್ಲದೇ, ತನ್ನ ವೆಬ್‌ಸೈಟ್ ಗೂಗಲ್ ನಲ್ಲಿ ಹಾಲೊವನ್ ಸಂಬಂಧಿತ ಮಾಹಿತಿಗಳನ್ನು ನೀಡುವ ಸೈಟ್ ಗಳ ಪೈಕಿ ಉನ್ನತ ಶ್ರೇಣಿಯಲ್ಲಿದೆ, ಆದರೆ ಇದೊಂದು ಸಂಪೂರ್ಣವಾಗಿ ಹಾದಿ ತಪ್ಪಿಸುವ ಹೇಳಿಕೆಯಾಗಿತ್ತು ಎಂದವರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಐರ್ಲೆಂಡಿನ ಭದ್ರತಾ ವಿಭಾಗದ ವಕ್ತಾರರು, ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆ ವರದಿಯಾಗದೇ ಇರುವ ಕಾರಣ ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಇವೆಂಟ್‌ಗಳ ಕುರಿತಾಗಿ ವಿಶ್ವಾಸಾರ್ಹ ಮೂಲಗಳಿಂದಲೇ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಹಿಜಾಬ್‌ ವಿರೋಧಿಸಿ ಮೈ ಮೇಲಿದ್ದ ಬಟ್ಟೆ ಬಿಚ್ಚಿ ವಿದ್ಯಾರ್ಥಿನಿ ಪ್ರತಿಭಟನೆ- ಇಲ್ಲಿದೆ ವಿಡಿಯೋ