Friday, 22nd November 2024

Guinness World Record: ಕುಂಬಳಕಾಯಿಯ ದೋಣಿಯಲ್ಲಿ ನದಿಯಲ್ಲಿ 73.5 ಕಿ.ಮೀ. ಪ್ರಯಾಣ

Guinness World Record

ಕುಂಬಳಕಾಯಿಯನ್ನೇ ದೋಣಿಯನ್ನಾಗಿ (pumpkin boat) ಮಾಡಿ ಅದರ ಮೇಲೆ ಕುಳಿತು ನದಿಯಲ್ಲಿ 73.5 ಕಿ.ಮೀ. ಸಾಗಿ ಅಮೆರಿಕದ ವ್ಯಕ್ತಿಯೊಬ್ಬರು (US man) ಗಿನ್ನೆಸ್ ದಾಖಲೆ (Guinness World Record) ಮಾಡಿದ್ದಾರೆ. ದೋಣಿಯಾಗಿ ಬಳಸುವಷ್ಟು ದೊಡ್ಡದಾದ ಕುಂಬಳಕಾಯಿ (pumpkin) ಬೆಳೆಯುವ ಮೂಲಕ ತಮ್ಮ ಜೀವಿತಾವಧಿಯ ಕನಸು ನನಸು ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಅಮೆರಿಕದ ಗ್ಯಾರಿ ಕ್ರಿಸ್ಟೆನ್ಸೆನ್ ವಾಷಿಂಗ್ಟನ್‌ನ ಕೊಲಂಬಿಯಾ ನದಿಯಲ್ಲಿ (Columbia River) ಕುಂಬಳಕಾಯಿಯ ದೋಣಿಯಲ್ಲಿ 73.5 ಕಿ.ಮೀ. ಸಾಗಿ ಕುಂಬಳಕಾಯಿ ದೋಣಿಯ ಮೂಲಕ ಸುದೀರ್ಘ ಪ್ರಯಾಣದ ದಾಖಲೆಯನ್ನು ನಿರ್ಮಿಸಿದರು.

46 ವರ್ಷ ವಯಸ್ಸಿನ ಗ್ಯಾರಿ ತಾವೇ ಬೆಳೆದ ಭಾರೀ ಗಾತ್ರದ ಕುಂಬಳಕಾಯಿಯನ್ನು ದೋಣಿಯನ್ನಾಗಿ ಕೆತ್ತಿಸಿ ಅದರಲ್ಲಿ ನದಿಯ ಉದ್ದಕ್ಕೂ ಪ್ರಯಾಣ ಮಾಡಲು 26 ಗಂಟೆ ಕಾಲ ತೆಗೆದುಕೊಂಡರು. ಅದಕ್ಕೆ ಅವರು “ಪಂಕಿ ಲೋಫ್‌ಸ್ಟರ್” (Punky Loafster) ಎಂದು ಹೆಸರಿಸಿದರು.

2011ರಿಂದ ಈ ದೈತ್ಯ ಕುಂಬಳಕಾಯಿಯನ್ನು ಅವರು ಬೆಳೆಯುತ್ತಿದ್ದರು. ತಮ್ಮ ಮೊದಲ ದೋಣಿ ಗಾತ್ರದ ಕುಂಬಳಕಾಯಿಯನ್ನು 2013 ರಲ್ಲಿ ಕೆತ್ತಿದ್ದರು. ಬಳಿಕ ಅದರಲ್ಲಿ ಸಣ್ಣ ನೌಕಾಯಾನ ಮಾಡಿ ತಮ್ಮ ಕನಸು ನನಸು ಮಾಡಿಕೊಂಡರು.

Guinness World Record

ಬಳಿಕ ದಾಖಲೆ ಬರೆಯಲು ಯೋಚಿಸಿದ ಅವರು ಇದಕ್ಕಾಗಿ ದೀರ್ಘಕಾಲ ಶ್ರಮಿಸಿದರು. ಅಂತಿಮವಾಗಿ ಈ ವರ್ಷದಲ್ಲಿ ದೋಣಿ ಪ್ರಯಾಣಕ್ಕೆ ಸೂಕ್ತವಾದ ಕುಂಬಳಕಾಯಿಯನ್ನು ಬೆಳೆಸಿದರು.

“ಪಂಕಿ ಲೋಫ್‌ಸ್ಟರ್” 14 ಅಡಿ ಗಾತ್ರವಿದ್ದು, ಗ್ಯಾರಿಯ ವಿಶಿಷ್ಟ ಪ್ರಯಾಣಕ್ಕಾಗಿ ದೋಣಿಯಾಗಿ ಪರಿವರ್ತಿಸುವ ಮೊದಲು 555 ಕೆ.ಜಿ. ಗಿಂತ ಹೆಚ್ಚು ತೂಕವಿತ್ತು. ಅದನ್ನು ಕೊಯ್ಲು ಮಾಡಿದಾಗಕುಂಬಳಕಾಯಿ ಗ್ರ್ಯಾಂಡ್ ಪಿಯಾನೋದಷ್ಟು ತೂಕವಿತ್ತು.

Guinness World Record

ಅಕ್ಟೋಬರ್ 11ರಂದು ಕುಂಬಳಕಾಯಿಯ ದೋಣಿಯನ್ನು ಮಾಡಲು ಅವರು ಸಿದ್ಧತೆ ನಡೆಸತೊಡಗಿದರು. ಇದನ್ನು ದಾಖಲಿಸಿಕೊಳ್ಳಲು ಕೆಮರವನ್ನು ಅಳವಡಿಸಿಕೊಂಡರು.

ಕುಂಬಳಕಾಯಿಯ ದೋಣಿಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗ್ಯಾರಿ ಅವರ ಪ್ರಯಾಣದ ಉದ್ದಕ್ಕೂ ಹಲವಾರು ಕಯಾಕ್ ಮತ್ತು ದೋಣಿಗಳನ್ನು ಅನುಸರಿಸಿದರು.

ಎರಡು ಗಂಟೆಗಳ ಪ್ರಯಾಣದ ಬಳಿಕ ಭಾರಿ ಗಾಳಿ ಕಾಣಿಸಿಕೊಂಡು ಕುಂಬಳಕಾಯಿಯ ಬದಿಗಳಲ್ಲಿ ಅಲೆಗಳು ಬರಲು ಪ್ರಾರಂಭಿಸಿದವು. ಕುಂಬಳಕಾಯಿಗೆ ಕಡಲತೀರದ ಚೂಪಾದ ಬಂಡೆಯೊಂದು ಚುಚ್ಚುತ್ತದೆ ಎನ್ನುವ ಭಯವಿತ್ತು. ಹೀಗಾಗಿ ರಾತ್ರಿಯಿಡೀ ನಿದ್ದೆ ಬಿಟ್ಟು ಪ್ರಯಾಣಿಸಿ ಸುರಕ್ಷಿತ ಲ್ಯಾಂಡಿಂಗ್ ಗಾಗಿ ಸೂರ್ಯೋದಯದವರೆಗೆ ಕಾದಿರುವುದಾಗಿ ಅವರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.