Friday, 22nd November 2024

Lalbagh Entry Fee: ಗಮನಿಸಿ, ಲಾಲ್‌ಬಾಗ್‌ ಪ್ರವೇಶ ಇನ್ನು ದುಬಾರಿ

ಬೆಂಗಳೂರು: ರಾಜಧಾನಿಯ (Bengaluru news) ಹೃದಯ ಭಾಗದಲ್ಲಿರುವ ಲಾಲ್‌ಬಾಗ್‌ನ ಸೌಂದರ್ಯ ಸವಿಯಲು ತೆರಳುವ ಮುನ್ನ ಇದು ನಿಮಗೆ ತಿಳಿದಿರಲಿ. ತೋಟಗಾರಿಕಾ ಇಲಾಖೆ ಲಾಲ್‌ಬಾಗ್ ಪ್ರವೇಶ ಶುಲ್ಕವನ್ನು (Lalbagh Entry fee) ಏರಿಕೆ ಮಾಡಿದೆ.

ತೋಟಗಾರಿಕಾ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿರುವ ಲಾಲ್‌ಬಾಗ್‌ನ ಪ್ರವೇಶ ಶುಲ್ಕವನ್ನು ಭಾರೀ ಏರಿಕೆ ಮಾಡಲಾಗಿದೆ. ದಿನನಿತ್ಯ ಸಾವಿರಾರು ಜನ ನಗರದ ಜಂಟಾಟದಿಂದ ತಪ್ಪಿಸಿಕೊಳ್ಳಲು ಹಾಗೂ ಹೊರಗಿನ ಜಿಲ್ಲೆ- ರಾಜ್ಯಗಳಿಂದ ಬಂದವರು ಲಾಲ್‌ಬಾಗ್‌ಗೆ ಭೇಟಿ ನೀಡುತ್ತಾರೆ. ಲಾಲ್‌ಬಾಗ್‌, ಬೆಂಗಳೂರಿನ ಹಸಿರು ಹೃದಯ ಸ್ಥಾನವಾಗಿದೆ. ಇದೀಗ ಅಲ್ಲಿಗೆ ಪ್ರವೇಶಿಸಲು ಹೊಸ ದರ ನೀಡಬೇಕಿದೆ.

ಲಾಲ್‌ಬಾಗ್ ಪ್ರವೇಶಕ್ಕೆ 12 ವರ್ಷ ಮೇಲ್ಪಟ್ಟವರಿಗೆ ಮೊದಲು 30 ರೂ. ಶುಲ್ಕವಿತ್ತು. ಅದನ್ನು ಈಗ 50 ರೂ.ಗೆ ಏರಿಕೆ ಮಾಡಲಾಗಿದೆ. 6-12 ವರ್ಷದ ಮಕ್ಕಳಿಗೆ ಮೊದಲು 10 ರೂ. ಶುಲ್ಕವಿತ್ತು. ಅದನ್ನು ಈಗ 20 ರೂ.ಗಳಿಗೆ ಏರಿಕೆ ಮಾಡಲಾಗಿದೆ.

12 ವರ್ಷ ಮೇಲ್ಪಟ್ಟವರಿಗೆ 2020ರ ತನಕ 25 ರೂ. ಶುಲ್ಕವಿತ್ತು. 2021ರ ಫೆಬ್ರವರಿಯಲ್ಲಿ ಪ್ರವೇಶ ಶುಲ್ಕವನ್ನು 5 ರೂ. ಏರಿಕೆ ಮಾಡಿ, 30 ರೂ. ಮಾಡಲಾಗಿತ್ತು. ಆದರೆ ಈಗ ಅದನ್ನು 50 ರೂ. ಮಾಡಲಾಗಿದೆ.

ವಾಹನ ನಿಲುಗಡೆ ಶುಲ್ಕದ ವಿವರ: ದ್ವಿಚಕ್ರವಾಹನಕ್ಕೆ 30 ರೂ. ನಾಲ್ಕು ಚಕ್ರದ ವಾಹನಕ್ಕೆ 60 ರೂ., ಟೆಂಪೋ ಟ್ರಾಲೆರ್ಸ್‌ಗೆ 100 ರೂ. ಮತ್ತು ಬಸ್‌ಗಳಿಗೆ 200 ರೂ. ಶುಲ್ಕವಿದೆ. ಲಾಲ್‌ಬಾಗ್ ಪ್ರವೇಶ ದ್ವಾರದ ಮುಂದೆ ಹೊಸ ಶುಲ್ಕದ ಬೋರ್ಡ್‌ ಹಾಕಲಾಗಿದ್ದು, ಪರಿಷ್ಕೃತ ಶುಲ್ಕ ಈಗಾಗಲೇ ಜಾರಿಗೆ ಬಂದಿದೆ.

ಲಾಲ್‌ಬಾಗ್ ಬೆಂಗಳೂರು ನಗರದ ಪ್ರಮುಖ ಪ್ರವಾಸಿ ತಾಣ. ಇದರ ನಿರ್ವಹಣೆಯನ್ನು ತೋಟಗಾರಿಕಾ ಇಲಾಖೆ ನೋಡಿಕೊಳ್ಳುತ್ತದೆ. ಲಾಲ್‌ಬಾಗ್ ಸಸ್ಯತೋಟದಲ್ಲಿ ವಿಶ್ವದ ಹಲವಾರು ರಾಷ್ಟ್ರಗಳ ನೂರಾರು ಸಸ್ಯಗಳನ್ನು ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬರಲಾಗುತ್ತಿದೆ. 1760ರಿಂದಲೂ ದೇಶಿ ಮತ್ತು ವಿದೇಶಿ ಪುಷ್ಪ, ವೃಕ್ಷ, ಪೊದೆಗಳನ್ನು ಬೆಳೆಸಿ ಜೈವಿಕ ವೈವಿಧ್ಯಗಳನ್ನು ಕಾಪಾಡಲಾಗುತ್ತಿದೆ.

ದಕ್ಷಿಣ ಬೆಂಗಳೂರಿನಲ್ಲಿರುವ ಲಾಲ್‌ಬಾಗ್ ಸುಮಾರು 240 ಎಕರೆಗಳಷ್ಟು ವಿಸ್ತಾರವನ್ನು ಹೊಂದಿದೆ. 1854ಕ್ಕೂ ಹೆಚ್ಚು ವಿಧದ ಸಸ್ಯಗಳು ಮತ್ತು ಮರಗಳಿಗೆ ಇದು ನೆಲೆ. 1856ರಲ್ಲಿ ಇದನ್ನು ಸಸ್ಯೋದ್ಯಾನ ಎಂದು ಘೋಷಣೆ ಮಾಡಲಾಯಿತು. ಆರಂಭದಲ್ಲಿ ಉದ್ಯಾನಕ್ಕೆ ಮೊಘಲ್ ಸ್ಪರ್ಶವಿತ್ತು ಕಾಲಾನಂತರದಲ್ಲಿ ಉದ್ಯಾನದ ವಿನ್ಯಾಸವನ್ನು ತೋಟಗಾರಿಕೆ ಇಲಾಖೆ ಬದಲಾವಣೆ ಮಾಡಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ ನೂರಾರು ಜನರು, ವಾರಾಂತ್ಯ ಮತ್ತು ಸರ್ಕಾರಿ ರಜೆ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಜನರು ಲಾಲ್‌ಬಾಗ್‌ಗೆ ಭೇಟಿ ನೀಡುತ್ತಾರೆ. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುವಾಗ ದಿನಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.

ಇದನ್ನೂ ಓದಿ: Lalbagh Bandstand : ಕುಸಿಯುವ ಭೀತಿಯಲ್ಲಿ ಐತಿಹಾಸಿಕ ಲಾಲ್‌ಬಾಗ್‌ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್‌