ಮುಂಬಯಿ: ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿ ಸೋಲಿನ ಆಘಾತವನ್ನು ಮರೆತು ಟೀಮ್ ಇಂಡಿಯಾ ಆಸ್ಟ್ರೇಲಿಯಾ(Border Gavaskar Trophy) ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಅಣಿಯಾಗಬೇಕಿದೆ. ಈ ಹಿಂದಿನ ಎರಡು ಆಸೀಸ್ ಪ್ರವಾಸದಲ್ಲಿಯೂ ಭಾರತ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಭಾರತಕ್ಕೆ ಆಸೀಸ್ ವಿರುದ್ಧ ಸರಣಿ ಗೆಲ್ಲಲೇ ಬೇಕು. ಇದೇ ಕಾರಣಕ್ಕೆ ಬ್ಯಾಟಿಂಗ್ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಕೆ.ಎಲ್ ರಾಹುಲ್(KL Rahul) ಮತ್ತು ಜುರೇಲ್ ಅವರನ್ನು ಭಾರತ ಎ(India a) ತಂಡದ ಸೇರ್ಪಡೆಗೊಳಿಸಲಾಗಿದೆ. ನವೆಂಬರ್ 7 ರಿಂದ ಮೆಲ್ಬೋರ್ನ್ನಲ್ಲಿ ನಡೆಯಲಿರುವ ಆಸೀಸ್ ಎ ವಿರುದ್ಧದ ಎರಡನೇ ಚತುರ್ದಿನ ಪಂದ್ಯದಲ್ಲಿ ಉಭಯ ಆಟಗಾರರು ಆಡಲಿದ್ದಾರೆ.
ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ರಾಹುಲ್ ಆಸೀಸ್ ಎ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದರೆ ಅವರಿಗೆ ಟೆಸ್ಟ್ನಲ್ಲಿ ಸ್ಥಾನ ಸಿಗುವುದು ಖಚಿತ. ವೇಗದ ಪಿಚ್ನಲ್ಲಿ ನಿಂತು ಆಡುವ ಅನುಭವಿ ಆಟಗಾರರ ಅಗತ್ಯವಿದೆ. ಹೀಗಾಗಿ ರಾಹುಲ್ಗೆ ಸರಣಿ ಆರಂಭಕ್ಕೂ ಮುನ್ನವೇ ಎ ತಂಡದ ಪರ ಆಡಿ ಅಲ್ಲಿನ ಪಿಚ್ಗೆ ಹೊಂದಿಕೊಳ್ಳುವಂತೆ ಬಿಸಿಸಿಐ ಸೂಚನೆ ನೀಡಿದೆ. ಒಂದೊಮ್ಮೆ ರಾಹುಲ್ ಆಸೀಸ್ನಲ್ಲಿಯೂ ವಿಫಲವಾದರೆ ಅವರಿಗೆ ಭಾರತ ತಂಡದ ಬಾಗಿಲು ಬಹುತೇಕ ಮುಚ್ಚಿ ಹೋಗುವುದರಲ್ಲಿ ಅನುಮಾನವೇ ಬೇಡ. ಈಗಾಗಲೇ ಏಕದಿನ ಮತ್ತು ಟಿ20 ಕ್ರಿಕೆಟ್ ನಿಂದ ಅವರನ್ನು ದೂರ ಇಡಲಾಗಿದೆ.
ಒಂದೊಮ್ಮೆ ಭಾರತ ಆಸೀಸ್ ವಿರುದ್ಧ ಸರಣಿ ಸೋತು ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರದಿದ್ದರೆ, ಮುಂದಿನ 2025-27ರ ಆವೃತ್ತಿಗೆ ಹೊಸ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಒಬ್ಬೊಬ್ಬರೇ ಹಿರಿಯ ಆಟಗಾರರನ್ನು ತಂಡದಿಂದ ಕೈ ಬಿಡುವ ಸಾಧ್ಯತೆ ಕಂಡುಬಂದಿದೆ.
ಇದನ್ನೂ ಓದಿ IND vs NZ: ಭಾರತಕ್ಕೆ ಕಬ್ಬಿಣದ ಕಡಲೆಯಾದ ಸ್ಪಿನ್ ಪಿಚ್
ನಾಯಕ ರೋಹಿತ್ ಶರ್ಮ (37 ವರ್ಷ), ವಿರಾಟ್ ಕೊಹ್ಲಿ (36 ವರ್ಷ), ರವೀಂದ್ರ ಜಡೇಜಾ (36 ವರ್ಷ) ಮತ್ತು ಆರ್. ಅಶ್ವಿನ್ (38 ವರ್ಷ) ತಂಡದ ನಾಲ್ವರು ಪ್ರಮುಖ ಹಿರಿಯ ಆಟಗಾರರಾಗಿದ್ದು, ಇವರೆಲ್ಲರೂ ವೃತ್ತೀಜಿವನದ ಸಂಧ್ಯಾಕಾಲದಲ್ಲಿದ್ದಾರೆ. ಆಸೀಸ್ ಪ್ರವಾಸದ ಸರಣಿ ಈ ನಾಲ್ವರು ಜತೆಯಾಗಿ ಆಡುವ ಕೊನೇ ಸರಣಿ ಆಗಿರಲಿದೆ ಎನ್ನಲಾಗಿದೆ. ಇವರ ಜತೆಗೆ ರಾಹುಲ್ ಕೂಡ ನಿರೀಕ್ಷಿತ ಪ್ರದರ್ಶನ ತೋರದೇ ಹೋದರೆ ಅವರಿಗೂ ಕೊನೆಯ ಸರಣಿಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಹುಲ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.
ಭಾರತ ಎ ತಂಡ: ಋತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಬಾಬಾ ಇಂದರ್ಜೀತ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಮುಖೇಶ್ ಕುಮಾರ್, ಖಲೀಲ್ ಅಹ್ಮದ್ , ನವದೀಪ್ ಸೈನಿ, ಮಾನವ್ ಸುತಾರ್, ತನುಷ್ ಕೋಟ್ಯಾನ್, ಕೆಎಲ್ ರಾಹುಲ್ ಮತ್ತು ಧ್ರುವ್ ಜುರೇಲ್.