Saturday, 23rd November 2024

Bangalore Traffic: ಹಬ್ಬ ಮುಗಿದ ಬಳಿಕ ಮೆಟ್ರೋ ನಿಲ್ದಾಣದಲ್ಲೂ ಮೈಲುಗಟ್ಟಲೆ ಕ್ಯೂ, ಬೇಡಪ್ಪಾ ಹಬ್ಬ ಅಂತಿದಾರೆ ಜನ!

namma metro

ಬೆಂಗಳೂರು: ದೀಪಾವಳಿ ಹಬ್ಬ (Deepavali 2024) ಹಾಗೂ ಲಾಂಗ್‌ ವೀಕೆಂಡ್‌ ನಂತರ ಬೆಂಗಳೂರಿಗೆ ಹಿಂತಿರುಗಿದ ಪ್ರಯಾಣಿಕರು ಟ್ರಾಫಿಕ್ ಜಾಮ್‌ನಿಂದ (Bangalore traffic jam) ತಪ್ಪಿಸಿಕೊಳ್ಳಲು ಮೆಟ್ರೋಗೆ (Namma Metro) ಮೊರೆ ಹೋಗಿದ್ದಾರೆ. ಇಂದು ಮುಂಜಾನೆ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸುಮಾರು 1 ಕಿ.ಮೀ ಉದ್ದದ ಸರತಿ ಸಾಲು ಕಂಡುಬಂದಿದೆ. “ಸಾಕಪ್ಪಾ ಸಾಕು ಈ ಹಬ್ಬದ ಸಹವಾಸ” ಎಂದು ಜನ ಬೇಸತ್ತುಕೊಂಡಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ 22ಕ್ಕೂ ಅಧಿಕ ಉತ್ತರ ಭಾಗದ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಕಾರು, ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದ ಜನರು ಬೆಂಗಳೂರಿನ ಟ್ರಾಫಿಕ್‌ ಜಾಮ್‌ಗೆ ಹೆದರಿ ಮೆಟ್ರೋ ರೈಲಿನಲ್ಲಿ ಹೋಗಲು ಮುಂದಾದರು. ಬೆಂಗಳೂರು ನಗರ ಪ್ರವೇಶ ಆಗುತ್ತಿದ್ದಂತೆ ನಾಗಸಂದ್ರ, ಪೀಣ್ಯ 2ನೇ ಹಂತ, ಗೊರಗುಂಟೆಪಾಳ್ಯ, ಯಶವಂತಪುರ ಸೇರಿದಂತೆ ವಿವಿಧೆಡೆ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಿಂದಾಗಿ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ಹೋದರೆ ಹೆಚ್ಚು ಸಮಯ ಆಗಲಿದೆ ಎಂದು ಮೆಟ್ರೋ ಮೊರೆ ಹೋಗಿದ್ದಾರೆ. ಹೀಗಾಗಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಾದ ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಹಸಿರು ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ಜನರು ಇಳಿದಿದ್ದಾರೆ.

1 ಕಿಮೀ ಸರತಿ ಸಾಲು: ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬರೋಬ್ಬರಿ 5-10 ಸಾವಿರ ಜನರು ಮೆಟ್ರೋ ರೈಲು ಪ್ರಯಾಣಕ್ಕೆ ಹೊರಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸರತಿ ಸಾಲಿನ ಉದ್ದ ಹನುಮಂತನ ಬಾಲದಂತೆ ಸುಮಾರು 1 ಕಿ.ಮೀ ಉದ್ದವಾಗಿತ್ತು. ಟ್ರಾಫಿಕ್ ರಹಿತ ಸಂಚಾರಕ್ಕೆ ಮೆಟ್ರೋ ಮೊರೆ ಹೋದ ಜನರಿಗೆ ಇಲ್ಲಿಯೂ ಕಾಯುವುದು ತಪ್ಪಲಿಲ್ಲ ಎಂಬ ಭಾರೀ ಬೇಸರ ಉಂಟಾಗಿತ್ತು. ಹೀಗಾಗಿ, ಮೆಟ್ರೋ ರೈಲು ಸಂಚಾರಕ್ಕೆ ಅನುಕೂಲ ಆಗುವಂತೆ ಇನ್ನೂ ಮೂರು ನಿಲ್ದಾಣಗಳನ್ನು ವಿಸ್ತರಣೆ ಮಾಡದ ರಾಜಕಾರಣಿಗಳು ಹಾಗೂ ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೆ ಮೆಟ್ರೋ ಹಸಿರು ಮಾರ್ಗದಲ್ಲಿ ಉಳಿದ ಮೂರು ಮೆಟ್ರೋ ನಿಲ್ದಾಣಗಳ ಉದ್ಘಾಟನೆ ಕೂಡ ವಿಳಂಬವಾಗಿದ್ದು, ಇದರಿಂದಲೂ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದೆ. ಹಸಿರು ಮಾರ್ಗದಲ್ಲಿ, ವಿಶೇಷವಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಅಲ್ಲಿ ಪ್ರಯಾಣಿಕರು ಸುಮಾರು ಜನರು 500 ಮೀಟರ್‌ಗಿಂತಲೂ ಹೆಚ್ಚು ಉದ್ದದ ಕ್ಯೂ ನಿಲ್ಲುವ ಸ್ಥಿತಿ ಇದೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

ಪ್ರಸ್ತುತ ಮೆಟ್ರೋ ಸಂಸ್ಥೆಯು ಮೂಲಸೌಕರ್ಯ ಹೆಚ್ಚಿಸಲು ಹೆಣಗಾಡುತ್ತಿರುವ ಕಾರಣ, ಪ್ರಯಾಣಿಕರ ದಟ್ಟಣೆ ಹಾಗು ಕಾಯುವ ಸಮಯವನ್ನು ಹೆಚ್ಚಿಸಿದೆ. ಆದಷ್ಟು ಬೇಗನೆ ಈ ಮಾರ್ಗದ ಉಳಿದ ಮೂರು ನಿಲ್ದಾಣಗಳನ್ನು ಉದ್ಘಾಟನೆ ಮಾಡಿದರೆ, ಉಳಿದ ನಿಲ್ದಾಣಗಳ ಮೇಲಿನ ಒತ್ತಡ ಕೂಡ ಕಡಿಮೆಯಾಗಲಿದೆ. ಪ್ರತಿದಿನ ಎದುರಿಸುತ್ತಿರುವ ದಟ್ಟಣೆ ಸಮಸ್ಯೆ ಕೂಡ ತಗ್ಗಲಿದೆ ಎಂದು ಬಿಎಂಆರ್‌ಸಿಎಲ್‌ಗೆ (ಮೆಟ್ರೋ) ಮನವಿ ಮಾಡಿಕೊಂಡಿದ್ದಾರೆ.