Sunday, 24th November 2024

Viral Video: ಅಬ್ಬಾ ಎಂಥಾ ಭೀಕರ ದೃಶ್ಯ! ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಬಸ್- ವಿಡಿಯೊ ವೈರಲ್

Viral Video

ಉತ್ತರಪ್ರದೇಶ: ಉತ್ತರ ಪ್ರದೇಶದ ಹತ್ರಾಸ್ ಬಳಿಯ ಯಮುನಾ ಎಕ್ಸ್‌ಪ್ರೆಸ್‍ ವೇನಲ್ಲಿ ಇತ್ತೀಚೆಗೆ ಸಂಜೆಯ ವೇಳೆ  ಖಾಸಗಿ ಪ್ರಯಾಣಿಕರಿರುವ ಬಸ್‍ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದು ಇಡೀ ಬಸ್‍ ಸುಟ್ಟು ಕರಕಲಾಗಿದೆ. ಈ ಘಟನೆಯನ್ನು ಅಲ್ಲಿ ನೆರೆದಿದ್ದ ಜನ ನೋಡಿ ಶಾಕ್‌ ಆಗಿದ್ದಾರೆ. ಇನ್ನು ಈ ಭೀಕರ ವಿಡಿಯೊ ಮಾಡಿ ಸೋಶಿಯಲ್ ಮಿಡಿಯಾ ಭಾರೀ ವೈರಲ್ (Viral Video)ಆಗುತ್ತಿದೆ.

ಈ ವೈರಲ್ ವಿಡಿಯೊದಲ್ಲಿ ಬಸ್‍ ಬೆಂಕಿಯಲ್ಲಿ ಧಗಧಗನೆ ಹೊತ್ತಿ ಉರಿದಿದ್ದು, ಇದನ್ನು ನೋಡಲು ಅನೇಕ ಜನರು ಅಲ್ಲಿ ಜಮಾಯಿಸಿದ್ದರಂತೆ. ಬೆಂಕಿಯ ಈ ವಿಡಿಯೊ ನೋಡಿದ ಅನೇಕರು ಅಷ್ಟು ದೊಡ್ಡ ಬಸ್‍ ಬೆಂಕಿಗೆ ಆಹುತಿಯಾಗುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ವರದಿಗಳ ಪ್ರಕಾರ, ಹತ್ರಾಸ್‍ನ ಮಿಧಾವಲಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬಸ್ ದೆಹಲಿಯ ವಾಜಿರಾಬಾದ್‍ನಿಂದ ಬಿಹಾರದ ಸುಪಾಲ್‍ಗೆ ಹೋಗುತ್ತಿದ್ದಾಗ ಅಚಾನಕ್ ಆಗಿ ಬಸ್‍ಗೆ ಬೆಂಕಿ ತಗುಲಿದೆ. ಬಸ್ಸಿನಲ್ಲಿ ಬೆಂಕಿ ಕಂಡು ಪ್ರಯಾಣಿಕರು ಭಯಭೀತರಾಗಿದ್ದಾರೆ. ಪ್ರಯಾಣಿಕರು ಸುರಕ್ಷಿತವಾಗಿ ಕೆಳಗೆ ಇಳಿಯಲಿ ಎಂದು  ಚಾಲಕ ಬೇಗನೆ ಬಸ್ ಅನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾನಂತೆ. ಈ ಸಂದರ್ಭದಲ್ಲಿ ಅವರೆಲ್ಲರೂ ತಕ್ಷಣ ಬಸ್‍ನಿಂದ ಕೆಳಗಿಳಿದಿದ್ದಾರೆ.  ಹಾಗಾಗಿ ಅದೃಷ್ಟವಶಾತ್ ಘಟನೆಯ ವೇಳೆ ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿಗೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲ.  ಆದರೆ ಬಸ್‍ನ ಟಾಪ್‌ನಲ್ಲಿ ಇರಿಸಲಾದ ಸಾಮಾನುಗಳಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದೆ. ಆದರೆ, ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸುವಷ್ಟರಲ್ಲಿ ಬಸ್ ತೀವ್ರವಾಗಿ ಹಾನಿಗೊಳಗಾಗಿತ್ತು. ಈ ಘಟನೆಯಿಂದಾಗಿ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ತಾತ್ಕಾಲಿಕವಾಗಿ  ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಇದನ್ನೂ ಓದಿ: ಮಹಿಳೆಯ ತಲೆ ಬೋಳಿಸಿ ಮೆರವಣಿಗೆ ಮಾಡಿದ ಸ್ಥಳೀಯರು!

ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ ಹತ್ರಾಸ್ ಪೊಲೀಸರು ಪ್ರತಿಕ್ರಿಯಿಸಿ, ಬಸ್‍ನಲ್ಲಿ (ಡಬಲ್ ಡೆಕ್ಕರ್) ಬೆಂಕಿಯ ಬಗ್ಗೆ ಮಾಹಿತಿ ಪಡೆದ ನಂತರ, ಸಾದಾಬಾದ್ ಪೊಲೀಸ್ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.