ಅಭಿಮತ: ಅರವಿಂದ ಸಿಗದಾಳ್, ಮೇಲುಕೊಪ್ಪ
ಮುಖ್ಯಮಂತ್ರಿಗಳು ರೈತರಿಗೆ ವಕ್ಫ್ ನೋಟೀಸ್ ಕೊಡಬೇಡಿ ಎಂದೂ, ರೈತರ ಪಹಣಿಗಳಲ್ಲಿ ‘ವಕ್ಫ್ ಆಸ್ತಿ’ ಎಂದು ಮಾಡಲಾದ ತಿದ್ದುಪಡಿಗಳನ್ನು ಸರಿಪಡಿಸಲು ಸೂಚನೆ ಕೊಟ್ಟ ಮೇಲೂ, ಪಹಣಿ ತಿದ್ದುಪಡಿಗಳ ಬಗ್ಗೆ ಮತ್ತಷ್ಟು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ತಿದ್ದುಪಡಿ ಆರೋಪಗಳು (Waqf Controversy) ಬರುತ್ತಿವೆ.
ರಾಜ್ಯಾದ್ಯಂತ ‘ವಕ್ಫ್ ಆಸ್ತಿ’ ತಿದ್ದುಪಡಿ ಆಗುತ್ತಿರುವ ಸುದ್ದಿಯ ಹಿನ್ನಲೆಯಲ್ಲಿ ಯಾರಾದರು ಕಾನೂನು ತಜ್ಞರು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತಿದ್ದಿದ ಕ್ರಮದ ಬಗ್ಗೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕ ಕಾನೂನಿನ ಸಲಹೆಗಳನ್ನು ಕೊಡಬಹುದಾ?
ಈ ಸುದ್ದಿಯನ್ನೂ ಓದಿ | Lalbagh Entry Fee: ಗಮನಿಸಿ, ಲಾಲ್ಬಾಗ್ ಪ್ರವೇಶ ಇನ್ನು ದುಬಾರಿ
1. ರೈತರ ಪಹಣಿ ತಿದ್ದುವಿಕೆಯ ಅಸಂಬದ್ಧ ಕೆಲಸ ಮಾಡಿದ್ಯಾರು?
2. ಪಹಣಿಯ ಕಾಲಂ ನಂಬರ್ 11ರಲ್ಲಿ ಯಾವುದೇ ಸಪೋರ್ಟಿಂಗ್ ದಾಖಲಾತಿಗಳಿಲ್ಲದೆ ವಕ್ಫ್ ಆಸ್ತಿ ಅಂತ ಇದ್ದಕ್ಕಿದ್ದಂತೆ ತಿದ್ದಲು ಯಾರಿಗಾದರು ಅಧಿಕಾರ ಇರಲು ಸಾಧ್ಯವಾ?
3. ಭೂಮಿ ದಾಖಲಾತಿಗಳು ಕಂದಾಯ ಇಲಾಖೆಗೆ ಒಳಪಡುತ್ತದೆ ಅಲ್ವಾ?
4. ಬ್ಯಾಂಕಿನಲ್ಲಿ ಭೂಮಿ ಅಡ ಇಟ್ಟು ಸಾಲ ಮಾಡಿದಾಗ, ಕಾಲಂ 11ರಲ್ಲಿ ಅಡಮಾನದ ಬ್ಯಾಂಕಿನ ವಿವರ ಪಹಣಿಯಲ್ಲಿ ನಮೂದಾಗುತ್ತದೆ. ಬ್ಯಾಂಕ್ ಸಾಲಗಾರನ ಒಪ್ಪಿಗೆ ಸಹಿ ಪಡೆದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಕೆಲಸ ಉಪ ನೋಂದಾವಣಾಧಿಕಾರಿಗಳು ಮಾಡುತ್ತಾರೆ. ಸಾಲ ತೀರಿದ ಮೇಲೆ, ಬ್ಯಾಂಕ್ ಸಾಲ ಕ್ಲಿಯರನ್ಸ್ ಸರ್ಟಿಫಿಕೇಟ್ನ ಆಧಾರದ ಮೇಲೆ ಪಹಣಿ ಕಾಲಂ 11ರಲ್ಲಿ ಬ್ಯಾಂಕ್ ಹೆಸರನ್ನು ತೆಗೆಯಲಾಗುತ್ತದೆ. ಹೀಗಿರುವಾಗ, ಯಾವುದೇ ಸಪೋರ್ಟಿಂಗ್ ದಾಖಲಾತಿಗಳಿಲ್ಲದೆ ವಂಶ ಪಾರಂಪರೆಯಿಂದ ಬಂದ ಕೃಷಿ ಜಮೀನಿನ ಪಹಣಿಯಲ್ಲಿ ರೈತರ ಗಮನಕ್ಕೂ ಬಾರದೆ ವಕ್ಫ್ ಆಸ್ತಿ ಅಂತ ನಮೂದಾಗುವುದು ಹೇಗೆ?
5. ಯಾರ ಲಾಗಿನ್ನಲ್ಲಿ ಇದ್ದಕ್ಕಿದ್ದಂತೆ ಈ ಹೇಯ ಕೃತ್ಯ ನಡೆಯುತ್ತಿದೆ?
a) ಕಂದಾಯ ಸಬ್ ರಿಜಿಸ್ಟ್ರಾರ್?
b) ತಹಸೀಲ್ದಾರ್?
c) DC/AC?
d) ಕಂದಾಯ ಸಚಿವರ ಕಾರ್ಯಾಲಯ?
e) ವಕ್ಫ್ ಸಚಿವರ ಕಾರ್ಯಾಲಯ?
f) ವಕ್ಫ್ ಇಲಾಖೆ?
g) ವಕ್ಫ್ ಬೋರ್ಡ್?
h) ವಕ್ಫ್ ಟ್ರಿಬ್ಯುನಲ್?
I) ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ?
(ಮುಖ್ಯಮಂತ್ರಿಗಳು ಪಹಣಿಯಲ್ಲಿನ ವಕ್ಫ್ ಆಸ್ತಿ ಶಬ್ದವನ್ನು ತೆಗೆಯಲು ಹೇಳಿದ ತಕ್ಷಣ ಯಾರೋ ಅದನ್ನು ತೆಗೆಯುತ್ತಾರೆ ಅಂತಾದರೆ, ವಕ್ಫ್ ಆಸ್ತಿ ಅಂತ ಬರೆಯಲೂ ಮುಖ್ಯಮಂತ್ರಿಗಳೇ ಆದೇಶ ಕೊಟ್ಟಿದ್ದರಾ?)
6. ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಬರೆಸಿದ ಹಾಗೆ, ನಾಳೆ ವಾಸ ಮಾಡುವ ಮನೆಯ ದಾಖಲಾತಿಗಳಲ್ಲಿ (ನಮೂನೆ 9, 11A ಇತ್ಯಾದಿ) ವಕ್ಫ್ ಆಸ್ತಿ ಅಂತ ತಿದ್ದುವುದಕ್ಕೂ ಸಾಧ್ಯತೆ ಇದೆ ಅಲ್ಲವಾ?
7. ಅದೇ ರೀತಿ ಸರ್ಕಾರದ ಅಭಿವೃದ್ಧಿಗೆ ಪಡೆದ ಕೃಷಿ ಬಾಂಡ್ಗಳು, ಬ್ಯಾಂಕ್ ಠೇವಣಿಗಳು, ಲಕ್ಷಾಂತರ ಬೆಲೆಯ ವಾಹನ ದಾಖಲಾತಿಗಳು ಮುಂತಾದ ಚರಾಸ್ತಿಗಳ ದಾಖಲಾತಿಗಳ ಮೇಲೂ ಯಾರಾದರು ವಕ್ಫ್ ಆಸ್ತಿ ಅಂತ ತಿದ್ದಬಹುದಾ?
8. ವಕ್ಫ್ ಆಸ್ತಿ ಅಂತ ತಿದ್ದಿದ್ದು ರೈತರ ಅರಿವಿಗೆ ಬಾರದೇ 12-13 ವರ್ಷಗಳು ಕಳೆದ ಮೇಲೆ, ಕಾನೂನಾತ್ಮಕವಾಗಿ ಶಾಶ್ವತವಾಗಿ ಅದು ವಕ್ಫ್ ಆಸ್ತಿ ಅಂತಾಗುವ ಸಾಧ್ಯತೆ ಇದೆಯಾ?
9. ವಕ್ಫ್ ಆಸ್ತಿ ಅಂತ ತಿದ್ದಿದ ಹಾಗೆ, ನಾಳೆ ರೈತರ ಭೂಮಿಯ ಪಹಣಿಯನ್ನು ಮುಜರಾಯಿ ಆಸ್ತಿ ಎಂದು ತಿದ್ದಲು ಅವಕಾಶ ಇದ್ದಿರಬಹುದು ಅಲ್ವಾ? ಹೀಗಾಗಲು ಅವಕಾಶ ಇದ್ದರೆ, ಒಂದು ದಿನ ರೈತರೆಲ್ಲ ತಮ್ಮ ಚರಾಸ್ತಿ, ಸ್ತಿರಾಸ್ತಿಗಳನ್ನು ವಕ್ಫ್ ಬೋರ್ಡಿಗೆ, ದೇವಸ್ಥಾನಕ್ಕೆ ಕೊಟ್ಟು ಬೀದಿಯಲ್ಲಿ ನಿಲ್ಲುವಂತಾಗುತ್ತದಾ?
10. ಸಂವಿಧಾನದಲ್ಲಿನ ಆಸ್ತಿಯ ಹಕ್ಕು ಎನ್ನುವ ಹಕ್ಕು, ಪ್ರಜೆಗಳ ಜಮೀನಿನ ಪಹಣಿಯಲ್ಲಿನ ವಕ್ಫ್ ಆಸ್ತಿ ಎಂದು ಇದ್ದಕ್ಕಿದ್ದಂತೆ ತಿದ್ದುಪಡಿ ಮಾಡುವ ವಿಚಾರದಲ್ಲಿ ರೈತರಿಗೆ ಹೇಗೆ ಸಹಾಯಕವಾಗಿ ಬರುತ್ತದೆ?
11. ಒಂದು ವೇಳೆ ವಕ್ಫ್ ಆಸ್ತಿ ಎಂದು ತಿದ್ದುಪಡಿ ಮಾಡಿರುವುದು ಅಪರಾಧ ಎಂದು ಕಾನೂನಿನಲ್ಲಿ ಹೇಳಿದ್ದರೆ, ತಿದ್ದುಪಡಿ ಮಾಡಿದ ಅಪರಾಧಿಗೆ (ಕಂದಾಯ ಇಲಾಖಾ ಅಧಿಕಾರಿಗಳಿಂದ ಹಿಡಿದು – ಮುಖ್ಯಮಂತ್ರಿಗಳ ಸಚಿವಾಲಯದವರೆಗಿನ ಅಧಿಕಾರಿಗಳವರೆಗೆ ಯಾರೇ ಇರಲಿ, ಅವರಿಗೆ) ಶಿಕ್ಷೆ ಏನು?
12. ಒಂದು ಸರ್ಕಾರ ಬಂದಾಗ ಹೀಗೆ ಇದ್ದಕ್ಕಿದ್ದಂತೆ ರೈತರ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ತಿದ್ದಿದ್ದು, ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದಾಗ, ಅದೇ ತಿದ್ದುಪಡಿಯನ್ನು ಮರು ತಿದ್ದುಪಡಿ ಮಾಡಿ ಮುಜರಾಯಿ ಆಸ್ತಿ, ಪಕ್ಷದ ಆಸ್ತಿ ಅಂತೆಲ್ಲ ತಿದ್ದಬಹುದಾ?
13. ಈಗಾಗಲೆ ಸಾಲ ಮಾಡಿರುವ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ತಿದ್ದುಪಡಿ ಆದರೆ, ಸದರಿ ಸಾಲ ತೀರಿಸುವ ಹೊಣೆಯೂ ವಕ್ಫ್ ಬೋರ್ಡಿಗೆ ಹೋಗುತ್ತದಾ ಹೇಗೆ!
14. ವಕ್ಫ್ ಆಸ್ತಿ ಎಂದು ತಿದ್ದುಪಡಿ ಮಾಡಿದ ಪಹಣಿಯ ಜಮೀನಿಗೆ ಮಾಡಲ್ಪಟ್ಟ ಪ್ರಧಾನಮಂತ್ರಿ ಫಸಲ್ ಬಿಮಾ ಬೆಳೆ ವಿಮೆ ಪರಿಹಾರ, ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ, ಪ್ರಧಾನಮಂತ್ರಿ ಕೃಷಿ ಸಮ್ಮಾನ್, ವಿವಿಧ ಸಬ್ಸಿಡಿ ಸೌಲಭ್ಯಗಳು ವಕ್ಫ್ ಬೋರ್ಡಿಗೆ ಹೋಗುವ ಸಾಧ್ಯತೆ ಇಲ್ಲ ಅಲ್ವಾ?
15. ವಕ್ಫ್ ಆಸ್ತಿ ಅಂತ ತಿದ್ದುಪಡಿ ಮಾಡಲ್ಪಟ್ಟ ಪಹಣಿಯ ಜಮೀನಿಗೆ ಬ್ಯಾಂಕ್ ಸಾಲ ಸಿಗುವುದಿಲ್ಲವಂತೆ ಹೌದಾ?
16. ಖಾಸಗಿ ರೈತರ ಪಹಣಿ ಅಲ್ಲದೆ, ಅನೇಕ ಸಹಕಾರಿ ಸಂಸ್ಥೆಗಳ, ಖಾಸಗಿ ಸಂಸ್ಥೆಗಳ, ಕಂಪನಿಗಳ, ಸರಕಾರಿ ಇಲಾಖೆಗಳ, ಕೃಷಿ ವಿವಿಗಳ ಒಡೆತನದಲ್ಲೂ ಜಮೀನುಗಳಿವೆ. ಅವುಗಳ ಪಹಣಿಯಲ್ಲೂ ವಕ್ಫ್ ಆಸ್ತಿ ಎಂದು ತಿದ್ದುಪಡಿ ಮಾಡಲು ಸಾಧ್ಯವಾ?
17. ಒಂದು ವೇಳೆ ಸರ್ಕಾರಿ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಭೂಮಿಯ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ತಿದ್ದುಪಡಿ ಆಗಿ, ಅದನ್ನು ಯಾರೂ ಗಮನಿಸದೇ ಇದ್ದು(ಗಮನಿಸಿದರೂ ಸುಮ್ಮನಿದ್ದು) ದಶಕಗಳ ಕಾಲಾಂತರದಲ್ಲಿ ಅವುಗಳು ಶಾಶ್ವತವಾಗಿ ವಕ್ಫ್ ಆಸ್ತಿಗಳೇ ಆಗಬಹುದಾ?
ಈ ಸುದ್ದಿಯನ್ನೂ ಓದಿ | Ayushman Vaya Vandana Card: ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ವಯ ವಂದನ ಕಾರ್ಡ್ ಪಡೆಯುವುದು ಹೇಗೆ?
ವಕ್ಫ್ ಆಸ್ತಿ ವಿಚಾರದಲ್ಲಿ ಕಾನೂನಾತ್ಮಕವಾಗಿ ಇರಬಹುದಾದ ಮಾಹಿತಿಗಳನ್ನು ತಿಳಿಯುವ ಉದ್ದೇಶದಿಂದ ಇವಿಷ್ಟು ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದೆ. ಉತ್ತರಗಳು ಸಿಗಬಹುದಾ?