Friday, 15th November 2024

Maharashtra Elections 2024: ವಿಪಕ್ಷಗಳ ದೂರವಾಣಿ ಕದ್ದಾಲಿಸಿದ ಆರೋಪ; ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಆದೇಶ

Maharashtra Elections 2024

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Elections 2024)ಯ ಕಣ ರಂಗೇರಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ‍ಮಧ್ಯೆ ಚುನಾವಣೆಗೆ 2 ವಾರ ಬಾಕಿ ಇರುವಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ವಿಪಕ್ಷಗಳ ದೂರವಾಣಿ ಕದ್ದಾಳಿಕೆ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ (Rashmi Shukla) ಅವರನ್ನು ವರ್ಗಾವಣೆ ಮಾಡಲು ಚುನಾವಣಾ ಆಯೋಗ (Election Commission)ವು ಆದೇಶಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಕಡೆಗೆ ಒಲವು ಹೊಂದಿದ್ದಾರೆ ಮತ್ತು ಅವರು ಉನ್ನತ ಹುದ್ದೆಯಲ್ಲಿದ್ದರೆ ನ್ಯಾಯಯುತ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಆರೋಪಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಶುಕ್ಲಾ ಅವರ ಉಸ್ತುವಾರಿಯನ್ನು ತಕ್ಷಣವೇ ಹಿರಿಯ ಐಪಿಎಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ಮತ್ತು ಮುಂದಿನ ರಾಜ್ಯ ಪೊಲೀಸ್ ಮುಖ್ಯಸ್ಥರ ಆಯ್ಕೆಗಾಗಿ ನಾಳೆಯೊಳಗೆ ಮೂರು 3 ಹೆಸರನ್ನು ಕಳುಹಿಸುವಂತೆ ಚುನಾವಣಾ ಆಯೋಗವು ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಗೆ ಸೂಚಿಸಿದೆ. ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯ ಸಮಯದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

ಏಕನಾಥ ಸಿಂಧೆ ನೇತೃತ್ವದ ಆಡಳಿತರೂಢ ಮಹಾಯುತಿ ಮೈತ್ರಿಯ ಕುಮ್ಮಕ್ಕಿನಿಂದ ಪೊಲೀಸ್‌ ವರಿಷ್ಠಾಧಿಕಾರಿ ಶುಕ್ಲಾ ದೂರವಾಣಿ ಕದ್ದಾಲಿಕೆ ಮಾಡಿರುವುದಾಗಿ ಕಾಂಗ್ರೆಸ್‌ ಮತ್ತು ಶಿವಸೇನಾ (ಯುಬಿಟಿ) ಆರೋಪಿಸಿತ್ತು. “2019ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಬಿಜೆಪಿಗಾಗಿ ನೇರವಾಗಿ ಕೆಲಸ ಮಾಡುತ್ತಿದ್ದ ಶುಕ್ಲಾ ನಮ್ಮ ಎಲ್ಲ ಫೋನ್‌ ಟ್ಯಾಪ್ ಮಾಡುತ್ತಿದ್ದರು ಮತ್ತು ನಮ್ಮ ಯೋಜನೆಗಳ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದರು” ಎಂದು ರಾಜ್ಯಸಭಾ ಸಂಸದ ಮತ್ತು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಮಾಧ್ಯಮಗಳಿಗೆ ತಿಳಿಸಿದ್ದರು.

“ಹೀಗಿರುವಾಗ ಅವರು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುತ್ತಾರೆ ಎಂದು ನಾವು ನಿರೀಕ್ಷಿಸುವುದು ಹೇಗೆ? ಚುನಾವಣೆ ನಡೆಸುವ ಅಧಿಕಾರವನ್ನು ಅವರಿಗೆ ನೀಡಬಾರದು ಎಂದು ನಾವು ಹೇಳಿದ್ದೇವೆ. ಮಹಾರಾಷ್ಟ್ರದ ಚುನಾವಣೆಯನ್ನು ಪೊಲೀಸರ ಒತ್ತಡದ ಆಧಾರದ ಮೇಲೆ ನಡೆಸಲಾಗುತ್ತಿದೆ” ಎಂದು ಅವರು ಆರೋಪಿಸಿದ್ದರು. ಅಲ್ಲದೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಶುಕ್ಲಾ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿದ್ದರು.

1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶುಕ್ಲಾ ಅವರು ಮಹಾರಾಷ್ಟ್ರದ ಪೊಲೀಸ್ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅವರು ಸಶಸ್ತ್ರ ಸೀಮಾ ಬಲದ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: Maharashtra Elections 2024: ವಿಚ್ಛೇದನ..ಮದುವೆ.. ಮತ್ತೆ ಡಿವೋರ್ಸ್‌- ಇದು ಪೂಜಾ ಖೇಡ್ಕರ್‌ ತಂದೆಯ ಚುನಾವಣಾ ಅಫಿಡವಿಟ್‌ನ ಇಂಟ್ರೆಸ್ಟಿಂಗ್‌ ಸ್ಟೋರಿ!