Tuesday, 5th November 2024

IPL 2025 Mega Auction: ರಿಯಾದ್‌ನಲ್ಲಿ ಮೆಗಾ ಹರಾಜು; ದಿನಾಂಕ ಬಹಿರಂಗ

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಆಟಗಾರರ ರಿಟೇನ್‌ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಬಿಸಿಸಿಐ ಇದೀಗ ಮೆಗಾ ಹರಾಜಿಗೆ (IPL 2025 Mega Auction) ಎಲ್ಲಾ ತಯಾರಿ ಮಾಡುತ್ತಿದೆ. ಸೌದಿ ಅರೇಬಿಯಾದ ರಿಯಾದ್‌(RIYADH) ನಲ್ಲಿ ಐಪಿಎಲ್ 2025 ಮೆಗಾ ಹರಾಜನ್ನು ಆಯೋಜಿಸಲು ಬಿಸಿಸಿಐ(BCCI) ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಅಧಿಕಾರಿಗಳು ಸಂಭಾವ್ಯ ಸ್ಥಳಗಳಿಗೆ ಪ್ರವಾಸ ಮಾಡಿದ ನಂತರ ಐಪಿಎಲ್ 2025 ಮೆಗಾ ಹರಾಜನ್ನು ಆಯೋಜಿಸಲು ರಿಯಾದ್‌ ಆಯ್ಕೆಯಾಗಿದೆ ಎಂದು ವರದಿ ಹೇಳಿದೆ. ಆರಂಭದಲ್ಲಿ ಸಿಂಗಾಪುರ, ಲಂಡನ್ ಮತ್ತು ಜೆಡ್ಡಾದಂತಹ ನಗರಗಳ ಹೆಸರು ಕೂಡಾ ಕೇಳಿಬಂದಿತ್ತು. ಕಳೆದ ವರ್ಷ ದುಬೈನಲ್ಲಿ ನಡೆದ ಈವೆಂಟ್‌ನ ನಂತರ ಸತತ ಎರಡನೇ ವರ್ಷದ ಹರಾಜನ್ನು ಭಾರತದ ಹೊರಗೆ ನಡೆಸಲಾಗುತ್ತಿದೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಮೆಗಾ ಹರಾಜು ಕಾರ್ಯಕ್ರಮ ನವೆಂಬರ್ 24 ಮತ್ತು 25ರಂದು ನಡೆಯಲಿದೆ ಎಂದು ವರದಿಯಾಗಿದೆ. ಎರಡು ದಿನಗಳ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್‌ ನಡೆಸಲಿದೆ.

ಇದನ್ನೂ ಓದಿ IPL 2025: ಆರ್‌ಸಿಬಿಯಿಂದ ಸಿರಾಜ್‌ ಕೈಬಿಟ್ಟ ಕಾರಣ ತಿಳಿಸಿದ ನಿರ್ದೇಶಕ ಬೋಬಟ್

ಹೆಚ್ಚುವರಿ ವೇತನ

ಈ ಬಾರಿಯ ಐಪಿಎಲ್‌ ಆಡುವ ಆಟಗಾರರಿಗೆ ಹೆಚ್ಚುವರಿ ವೇತನ ಸಿಗಲಿದೆ. ತಾವು ಆಡುವ ಪ್ರತಿ ಪಂದ್ಯಕ್ಕೆ 7.5 ಲಕ್ಷ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ ಈ ಹೆಚ್ಚಿವರಿ ಹಣ ಸಿಗಲಿದೆ. ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್‌ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು 1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಹೆಚ್ಚಿನ ಅನುಕೂಲ ಸಿಗಲಿದೆ.

ಯಾವುದೇ ಆಟಗಾರ ಐಪಿಎಲ್‌ ಹರಾಜಿಗೆ ನೋಂದಣಿ ಮಾಡಿಕೊಂಡು, ಆಯ್ಕೆಯೂ ಆಗಿ, ಕೂಟಕ್ಕೂ ಮುನ್ನ ಆಡಲ್ಲ ಎಂದರೆ, ಮುಂದಿನ 2 ಕೂಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಐಪಿಎಲ್‌ನಲ್ಲಿ ಆಡಬಯಸುವ ವಿದೇಶೀಯರು ಇನ್ನು ಬೃಹತ್‌ (ಮೆಗಾ) ಹರಾಜಿನಲ್ಲಿ ತಮ್ಮ ಹೆಸರನ್ನು ಸೇರಿಸಬೇಕು. ಇಲ್ಲವಾದರೆ ಪ್ರಸಕ್ತ ಐಪಿಎಲ್‌ ಮುಗಿದ ಬಳಿಕ ನಡೆಯುವ ಕಿರು ಹರಾಜಿನಲ್ಲಿ ಅವರು ಪಾಲ್ಗೊಳ್ಳಲು ಅವಕಾಶವಿಲ್ಲ.