ಕಾಫಿ ಪ್ರಿಯರಿಗೆ (Coffee lovers) ಒಂದು ಕಹಿ ಸುದ್ದಿ. ಮೂಡ್ ಸರಿ ಮಾಡುತ್ತೆ, ಕೆಲಸದ ಉತ್ಸಾಹ ಹೆಚ್ಚಿಸುತ್ತದೆ ಎನ್ನುವ ಭರವಸೆಯಲ್ಲಿ (Health Tips) ನಾವು ಕುಡಿಯುವ ಒಂದೆರಡು ಕಪ್ ಕಾಫಿ ನಮ್ಮಲ್ಲಿ ಆತಂಕದ ಕಾಯಿಲೆಯನ್ನು (anxiety disorder) ಉಂಟು ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಸಾಮಾನ್ಯವಾಗಿ ಕಾಫಿ ಎಲ್ಲ ಕಚೇರಿಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಹೀಗಾಗಿ ಹೆಚ್ಚಿನವರು ಕಾಫಿ ಸೇವನೆಯ ಅಭ್ಯಾಸವನ್ನು ಹೊಂದಿರುತ್ತಾರೆ. ಕಚೇರಿಗೆ ರಜೆ ಇರುವಾಗ ಮನೆಯಲ್ಲೇ ಒಂದೆರಡು ಬಾರಿ ಕಾಫಿ ಮಾಡಿಕೊಂಡು ಸೇವಿಸುತ್ತಾರೆ. ಇದು ನಿಧಾನವಾಗಿ ನಮಗೆ ಅರಿವಿಲ್ಲದಂತೆ ಚಟವಾಗಿ ಬೆಳೆದಿರುತ್ತದೆ.
ಸಾಮಾನ್ಯವಾಗಿ ಕೆಲಸದ ಒತ್ತಡ ಅಧಿಕವಾಗಿದ್ದರೆ ನಾವು ಒಂದೆರಡು ಕಪ್ ಅಧಿಕವಾಗಿಯೇ ಕಾಫಿ ಸೇವನೆ ಮಾಡುತ್ತದೆ. ಹೀಗೆ ಹೆಚ್ಚಿನ ಕೆಫೀನ್ ಸೇವನೆಯಿಂದ ಆತಂಕ, ನಿದ್ರಾಹೀನತೆ, ಮಾನಸಿಕ ಒತ್ತಡ, ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ.
ನಿತ್ಯ ನಾವು ಸೇವಿಸುವ ಕಾಫಿಯು ನಮ್ಮೊಳಗೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಇದು ಆತಂಕವನ್ನು ಸೃಷ್ಟಿಸುತ್ತದೆ.
ಅತಿಯಾದ ಕಾಫಿ ಸೇವನೆ ಕುರಿತು ಜನರಲ್ ಹಾಸ್ಪಿಟಲ್ ಸೈಕಿಯಾಟ್ರಿ ಮಾಸಿಕ ಆರೋಗ್ಯ ಜರ್ನಲ್ನಲ್ಲಿ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಇದರ ಪ್ರಕಾರ ಅತಿಯಾದ ಕೆಫೀನ್ ಸೇವನೆಯು ಆತಂಕದ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ಇದು ಪ್ಯಾನಿಕ್ ಅಟ್ಯಾಕ್ ಗೆ ಕಾರಣವಾಗುತ್ತದೆ.
ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ನಲ್ಲಿನ ಮತ್ತೊಂದು ಸಂಶೋಧನೆ ವರದಿಯು ಅಧಿಕ ಕೆಫೀನ್ ಸೇವನೆಯು ಒತ್ತಡ, ಹೃದಯರಕ್ತನಾಳದ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.
ದಿನಕ್ಕೆ ಮೂರು ನಾಲ್ಕು ಬಾರಿ ಗರಿಷ್ಠ 400 ಮಿ.ಗ್ರಾಂ. ಕೆಫೀನ್ ಸೇವಿಸುವುದು ಸುರಕ್ಷಿತವಾಗಿದೆ. ಇದು ವಯಸ್ಸು, ಆರೋಗ್ಯ ಪರಿಸ್ಥಿತಿ ಮೇಲೆ ಆಧಾರಿತವಾಗಿದೆ. ಗರ್ಭಿಣಿಯರು ನಿರ್ದಿಷ್ಟವಾಗಿ ಕಾಫಿ ಸೇವಿಸದೇ ಇರುವುದು ಒಳ್ಳೆಯದು. ಯಾಕೆಂದರೆ ಇದು ಗರ್ಭಪಾತ ಮತ್ತು ಕಡಿಮೆ ತೂಕದ ಮಗು ಜನನ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ ಕಾಫಿ ಸೇವನೆಯು ನೇರವಾಗಿ ಸಕ್ಕರೆಯ ಬಳಕೆಯನ್ನು ಹೆಚ್ಚಿಸುತ್ತದೆ.
ಆಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಮುಖ್ಯಸ್ಥರಾದ ಎಡ್ವಿನಾ ರಾಜ್ ಅವರ ಪ್ರಕಾರ ಅತಿಯಾದ ಕೆಫೀನ್ ಸೇವನೆಯು ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ದೇಹದಲ್ಲಿ ಕಬ್ಬಿಣ ಮತ್ತು ಸತುವಿನ ಕೊರತೆಯನ್ನು ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ.
ಅತಿಯಾದ ಕಾಫಿ ಸೇವನೆಯು ಮೂಳೆಗಳು ದುರ್ಬಲಗೊಳ್ಳಲು, ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ ಎಂದು ಎಡ್ವಿನಾ ತಿಳಿಸಿದ್ದಾರೆ.
New Research: ನೊಣ ಕುಳಿತಿದ್ದ ಹಣ್ಣುಗಳನ್ನು ತಿಂದರೆ ಆಯುಷ್ಯ ಜಾಸ್ತಿಯಾಗುತ್ತದಂತೆ; ಹೀಗೆ ಹೇಳುತ್ತದೆ ಸಂಶೋಧನೆ!
ಕೆಫೀನ್ ವ್ಯಸನವು ತಲೆನೋವು, ಆಯಾಸ ಮತ್ತು ಗಮನ ಕೇಂದ್ರಿಕರಣಕ್ಕೆ ತೊಂದರೆ ಉಂಟು ಮಾಡಬಹುದು. ಹೆಚ್ಚಿನ ಕೆಫೀನ್ ಸೇವನೆಯು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕಾಫಿಯಲ್ಲಿ ಸೇರಿಸಲಾದ ಸಕ್ಕರೆಯು ಆಗಾಗ್ಗೆ ಮೂತ್ರ ವಿಸರ್ಜನೆ, ಅನಿಯಮಿತ ಹೃದಯ ಬಡಿತ, ಹೆಚ್ಚಿನ ಕಿರಿಕಿರಿ ಮತ್ತು ಆತಂಕಕ್ಕೆ ಕಾರಣವಾಗುತ್ತದೆ.