Monday, 25th November 2024

DK Shivakumar: ಅಕ್ರಮ ಆಸ್ತಿ ಗಳಿಕೆ ಕೇಸ್‌ನಲ್ಲಿ ಡಿಕೆಶಿಗೆ ರಿಲೀಫ್‌; ಅರ್ಜಿ ವಿಚಾರಣೆ 1 ತಿಂಗಳು ಮುಂದೂಡಿದ ಸುಪ್ರೀಂ ಕೋರ್ಟ್‌

DK Shivakumar

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ತನಿಖೆಗೆ ಈ ಹಿಂದಿನ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದ ಕಾಂಗ್ರೆಸ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ 4 ವಾರಗಳ ಕಾಲ ಮುಂದೂಡಿದೆ.

ಕಾಂಗ್ರೆಸ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಈ ಹಿಂದೆ ತಿರಸ್ಕರಿಸಿತ್ತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ, ಅರ್ಜಿ ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿದೆ.

ಸಿಬಿಐ ತನಿಖೆ ಪುನರಾರಂಭಿಸುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಯತ್ನಾಳ್‌ ಅವರು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇದೆ. ಈ ಸಂಬಂಧ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್‌ ಈ ಹಿಂದೆ ನೋಟಿಸ್‌ ನೀಡಿತ್ತು. ಇದಕ್ಕೆ ಉತ್ತರಿಸಲು ಡಿ.ಕೆ. ಶಿವಕುಮಾರ್‌ ಅವರ ವಕೀಲರು ಕಾಲಾವಕಾಶ ಕೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ವಿಚಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ. ಯತ್ನಾಳ್ ಪರ ಹಿರಿಯ ವಕೀಲ ಕೆ.ಪರಮೇಶ್ವರ್ ವಾದ ಮಂಡಿಸಿದ್ದು, ಡಿ.ಕೆ. ಶಿವಕುಮಾರ್ ಪರ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Supreme Court: ಪಟಾಕಿ ಮೇಲಿನ ನಿಷೇಧದ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲವೇಕೆ? ದಿಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌

ಏನಿದು ಪ್ರಕರಣ?

ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಕೆಶಿಯವರು ಇಂಧನ ಸಚಿವರಾಗಿದ್ದಾಗ 74.43 ಕೋಟಿ ರೂ.ಗಳಷ್ಟು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಸಿಬಿಐ ಅರೋಪಿಸಿತ್ತು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ 2019ರಲ್ಲಿ ರಾಜ್ಯ ಸರ್ಕಾರಕ್ಕೆ ಸಿಬಿಐ ಅರ್ಜಿ ಸಲ್ಲಿಸಿತ್ತು. 2019ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಸಿಬಿಐ ಮನವಿಗೆ ಸ್ಪಂದಿಸಿ ತನಿಖೆಗೆ ಅನುಮತಿ ನೀಡಿತ್ತು. ಆನಂತರ ಸಿಬಿಐ, ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು.

ಇದಕ್ಕೂ ಮೊದಲು 2017ರಲ್ಲಿ ಶಿವಕುಮಾರ್‌ ಅವರ ದೆಹಲಿ ನಿವಾಸ ಸೇರಿ ಹಲವು ಕಡೆ ಏಕಕಾಲಕ್ಕೆ ದಾಳಿ ನಡೆಸಿದಾಗ ಒಟ್ಟಾರೆ 8,59,69,100 ರೂಪಾಯಿ ಪತ್ತೆಯಾಗಿತ್ತು. ಶಿವಕುಮಾರ್‌ ಅವರಿಗೆ ಸೇರಿದ ಸ್ಥಳದಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದರ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆದಾಯ ತೆರಿಗೆ ಕಾಯಿದೆ 1961ರ ವಿವಿಧ ಸೆಕ್ಷನ್‌ಗಳ ಅಡಿ ಶಿವಕುಮಾರ್‌ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದರ ಬೆನ್ನಿಗೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. 2019ರ ಸೆ. 3ರಂದು ಶಿವಕುಮಾರ್‌ ಅವರನ್ನು ಬಂಧಿಸಲಾಗಿತ್ತು. ಸುಮಾರು 48 ದಿನಗಳ ಜೈಲುವಾಸದ ಬಳಿಕ ಅವರಿಗೆ ಜಾಮೀನು ಲಭಿಸಿತ್ತು. ಆನಂತರ ಭ್ರಷ್ಟಾಚಾರ ನಿಷೇಧ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ತನಿಖೆ ನಡೆಸಲು 2019ರ ಸೆಪ್ಟೆಂಬರ್‌ 25ರಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಿಬಿಐಗೆ ಸಮ್ಮತಿ ನೀಡಿತ್ತು. ಈ ಅನುಮತಿಯನ್ನು ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಹಿಂಪಡೆದಿತ್ತು.