Friday, 22nd November 2024

Viral News: IAS ಅಧಿಕಾರಿಯನ್ನೂ ಬಿಡದ ಹ್ಯಾಕರ್ಸ್‌; ಗಮನಕ್ಕೆ ಬರದೆ ಧಾರ್ಮಿಕ ವ್ಯಾಟ್ಸ್ಆ್ಯಪ್‌ ಗ್ರೂಪ್‌ ರಚನೆ

Viral News

ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಹ್ಯಾಕರ್‌ಗಳ ಹಾವಳಿ ಮಿತಿ ಮೀರಿದೆ. ಸ್ವಲ್ಪ ಯಾಮಾರಿದರೂ ವಂಚಕರು ವೈಯಕ್ತಿಕ ಖಾತೆಗಳಿಗೇ ಲಗ್ಗೆ ಇಡುವಷ್ಟರ ಮಟ್ಟಿಗೆ ತಲುಪಿದ್ದಾರೆ. ಈ ಮೂಲಕ ಹ್ಯಾಕರ್‌ಗಳು ಕೆಲವರಿಂದ ಲಕ್ಷ ಲಕ್ಷ ರೂ. ಪೀಕಿಸಿದರೆ, ಹಲವರ ಖಾಸಗಿ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳೂ, ಅಧಿಕಾರಿಗಳೂ ಈ ವಂಚನೆಯ ಜಾಲಕ್ಕೆ ಸಿಲುಕುವ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಇಂತಹದ್ದೇ ಘಟನೆ ಕೇರಳದಲ್ಲಿ ನಡೆದಿದೆ. ಇಲ್ಲಿ ವಂಚನೆಗೊಳಗಾಗಿದ್ದು ಅಂತಿಂಥವರಲ್ಲ, ಐಎಎಸ್‌ (IAS) ಅಧಿಕಾರಿ ಎನ್ನುವುದು ಗಂಭೀರ ವಿಚಾರ. ಸದ್ಯ ಈ ಸುದ್ದಿ ದೇಶಾದ್ಯಂತ ಸದ್ದು ಮಾಡುತ್ತಿದೆ (Viral News).

ಐಎಎಸ್‌ ಅಧಿಕಾರಿಯ ಮೊಬೈಲ್‌ ಅನ್ನು ಹ್ಯಾಕ್‌ ಮಾಡಿದ ಸೈಬರ್‌ ವಂಚಕರು ಅವರ ಹೆಸರಿನಲ್ಲಿ ಎರಡೆರಡು ಧರ್ಮ ಆಧಾರಿತ ವ್ಯಾಟ್ಸ್ಆ್ಯಪ್‌ ಗ್ರೂಪ್‌ ರಚಿಸಿದ್ದಾರೆ. ತಮ್ಮ ಗಮನಕ್ಕೆ ಬಾರದೆ, ತಮ್ಮ ಹೆಸರಿನಲ್ಲಿ ರಚಿಸಲಾದ ಈ ಗ್ರೂಪ್‌ ನೋಡಿ ಆಘಾತಕ್ಕೊಳಗಾದ ಅವರು ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಏನಿದು ಘಟನೆ?

ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರಾಗಿರುವ ಅಧಿಕಾರಿ ಕೆ.ಗೋಪಾಲಕೃಷ್ಣನ್ ವಂಚನೆಗೆ ಒಳಗಾದವರು. ಹ್ಯಾಕರ್‌ಗಳು ತಮ್ಮನ್ನು ʼಮಲ್ಲು ಹಿಂದೂ ಆಫೀಸರ್ಸ್‌ʼ ಮತ್ತು ʼಮಲ್ಲು ಮುಸ್ಲಿಂ ಆಫೀಸರ್ಸ್ʼ ಎಂಬ 2 ವ್ಯಾಟ್ಸ್ಆ್ಯಪ್‌ ಗುಂಪುಗಳಿಗೆ ಅಡ್ಮಿನ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ʼದಿ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ವರದಿ ಮಾಡಿದೆ.

ʼಮಲ್ಲು ಹಿಂದೂ ಆಫೀಸರ್ಸ್‌ʼ ಎಂಬ ಗ್ರೂಪ್‌ ಅನ್ನು ಅ. 30ರಂದು ರಚಿಸಲಾಗಿದೆ. ಇತರ ಹಿರಿಯ ಅಧಿಕಾರಿಗಳನ್ನು ಈ ಗ್ರೂಪ್‌ಗೆ ಸೇರಿಸಲಾಗಿದೆ. ಅಂತಹ ಗುಂಪಿನ ಅನೌಪಚಾರಿಕತೆಯನ್ನು ಇತರ ಅಧಿಕಾರಿಗಳು ಎತ್ತಿ ತೋರಿಸಿದ ನಂತರ ಅವರು ಅದನ್ನು ಡಿಲೀಟ್‌ ಮಾಡಿದ್ದಾರೆ. ಅಚ್ಚರಿ ಎಂದರೆ ಇತರರು ಹೇಳುವ ತನಕ ಅವರಿಗೆ ಇಂತಹದ್ದೊಂದು ಗ್ರೂಪ್‌ ಇದೆ ಎನ್ನುವುದೇ ಗೊತ್ತಿರಲಿಲ್ಲ.

11 ವ್ಯಾಟ್ಸ್ಆ್ಯಪ್‌ ಗ್ರೂಪ್‌

ಕೆಲವು ಹ್ಯಾಕರ್‌ಗಳು ತಮ್ಮ ಫೋನ್‌ ಹ್ಯಾಕ್‌ ಮಾಡಿ ಇಂತಹ 11 ವ್ಯಾಟ್ಸ್ಆ್ಯಪ್‌ ಗ್ರೂಪ್‌ಗಳನ್ನು ರಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮಾತ್ರವಲ್ಲ ʼಮಲ್ಲು ಮುಸ್ಲಿಂ ಆಫೀಸರ್ಸ್‌ʼ ಎಂಬ ಗ್ರೂಪ್‌ ಅನ್ನೂ ರಚಿಸಲಾಗಿದೆ. ಇದಕ್ಕೆ ಕೆ.ಗೋಪಾಲಕೃಷ್ಣನ್ ಅವರನ್ನು ಅಡ್ಮಿನ್‌ ಮಾಡಲಾಗಿದೆ. ಇತರ ಅಧಿಕಾರಿಗಳು ಎಚ್ಚರಿಸಿದ ಬಳಿಕ ಅವರು ಈ ಗ್ರೂಪ್‌ ಅನ್ನೂ ಡಿಲೀಟ್‌ ಮಾಡಿದ್ದಾರೆ. ತಿರುವನಂತಪುರಂ ಪೊಲೀಸ್‌ ವರಿಷ್ಠಾಧಿಕಾರಿ ಸ್ಪರ್ಜನ್‌ ಕುಮಾರ್‌ ಅವರು ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಗಂಭೀರವಾಗಿ ಪರಿಗಣಿಸಿದ ಸರ್ಕಾರ

ವ್ಯಾಟ್ಸ್ಆ್ಯಪ್‌ ಗ್ರೂಪ್‌ ರಚಿಸಿರುವ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಣಮಿಸಿದ್ದು, ತನಿಖೆಗೆ ಆದೇಶ ನೀಡಲಾಗುವುದು ಎಂದು ರಾಜ್ಯ ಕೈಗಾರಿಕೆ ಸಚಿವ ಪಿ.ರಾಜೀವ್‌ ಹೇಳಿದ್ದಾರೆ. ಯಾವುದೇ ಅಧಿಕಾರಿಯನ್ನು ಗ್ರೂಪ್‌ಗೆ ಸೇರಿಸಿಲ್ಲ ಎಂದು ಕೆ.ಗೋಪಾಲಕೃಷ್ಣನ್ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ರಿಬ್ಬನ್‌ ಕತ್ತರಿಸಿ ಯು ಟರ್ನ್‌, ರೋಡ್‌ ಹಂಪ್‌ ಉದ್ಘಾಟಿಸಿದ ಮಿನಿಸ್ಟರ್‌! ಅಭಿವೃದ್ದಿ ಹರಿಕಾರ ಎಂದು ನೆಟ್ಟಿಗರಿಂದ ಫುಲ್‌ ಟ್ರೋಲ್‌