Tuesday, 5th November 2024

MB Patil: ಹೂಡಿಕೆ ಯೋಜನೆಗಳ ಕ್ಷಿಪ್ರ ಅನುಮೋದನೆಗೆ ಮೈಕ್ರೋಸಾಫ್ಟ್ ಕಂಪನಿಯಿಂದ ಸಾಫ್ಟ್‌ವೇರ್ ಅಭಿವೃದ್ಧಿ

MB Patil

ಬೆಂಗಳೂರು: ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ನೀಡಲಾಗಿರುವ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳೊಳಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ನೀಡಲು ಮೈಕ್ರೋಸಾಫ್ಟ್ ಕಂಪನಿಯ (Microsoft Company) ನೆರವಿನಿಂದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ್‌ (MB Patil) ತಿಳಿಸಿದ್ದಾರೆ.

ಏಕಗವಾಕ್ಷಿ ಯೋಜನೆ ಜಾರಿ ಸಂಬಂಧ ಮೈಕ್ರೋಸಾಫ್ಟ್ ಸಂಸ್ಥೆ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ನಂತರ ಮಾತನಾಡಿದ ಸಚಿವರು, ನೆರೆಹೊರೆಯ ಕೆಲವು ರಾಜ್ಯಗಳಲ್ಲಿ ಕೈಗಾರಿಕಾ ಹೂಡಿಕೆ ಯೋಜನೆಗಳಿಗೆ 60-70 ದಿನಗಳಲ್ಲಿ ಪ್ರತಿಯೊಂದು ಅನುಮೋದನೆಯನ್ನೂ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಸರಾಸರಿ 300 ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದನ್ನು 60-70 ದಿನಗಳಿಗೆ ಇಳಿಸಬೇಕೆಂಬುದು ತಮ್ಮ‌ ಗುರಿಯಾಗಿದೆ. ಇಲ್ಲದೆ ಹೋದರೆ ನಾವು ಹೂಡಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ತಂತ್ರಜ್ಞಾನದ ನೆರವು ನೀಡುವಂತೆ ಮೈಕ್ರೋಸಾಫ್ಟ್ ಕಂಪನಿಗೆ ಜವಾಬ್ದಾರಿ ವಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | DK Shivakumar: ವಕ್ಫ್‌ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ, ರಾಜಕೀಯ ಮಾಡುತ್ತಿದ್ದಾರೆ; ಡಿ.ಕೆ. ಶಿವಕುಮಾರ್

ಕೈಗಾರಿಕಾ ಯೋಜನೆಗಳಿಗೆ ರಾಜ್ಯದಲ್ಲಿ ಅಗ್ನಿಶಾಮಕ, ಕಾನೂನು, ಅರಣ್ಯ ಮುಂತಾದ 33 ಇಲಾಖೆಗಳ ಅನುಮೋದನೆ ಬೇಕಾಗುತ್ತದೆ. ಜತೆಗೆ 147 ಬಗೆಯ ಸೇವೆಗಳಿವೆ. ಇವನ್ನು ಒಂದೇ ಕಡೆ ತರಬೇಕಾಗಿದೆ. ಈ ಸಾಫ್ಟ್‌ವೇರ್ ಇದನ್ನು ಸುಗಮಗೊಳಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಹಾಗೂ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪರಿಚಯಿಸಲಾಗುವುದು. ಆ ಮೂಲಕ ಕೈಗಾರಿಕಾ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೂ ತಮ್ಮ ವ್ಯಾಪ್ತಿಯ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕೋರಲಾಗುವುದು ಎಂದು ಸಚಿವರು ತಿಳಿಸಿದರು.

ಇದರ ಜತೆಗೆ ಉದ್ಯಮಿಗಳು ಕೂಡ ಕೂತಲ್ಲೇ ತಮ್ಮ ಯೋಜನೆ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೂ ಇದು ನೆರವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಲುವಾಗಿಯೇ ವಿಶೇಷವಾದ ವೆಬ್‌ಸೈಟ್ ಕೂಡ ವಿನ್ಯಾಸ ಮಾಡಿದ್ದು, ಅದು ಕೂಡ ಬಳಕೆ ಸ್ನೇಹಿಯಾಗಿದೆ. ರಾಜ್ಯದಲ್ಲೇ ಹೂಡಿಕೆ ಏಕೆ ಮಾಡಬೇಕು? ಹೇಗೆ ಮಾಡಬೇಕು? ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಿದೆ. ಕೇವಲ ಕನ್ನಡ, ಇಂಗ್ಲೀಷ್ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಮಾಹಿತಿ ಲಭ್ಯವಾಗಲಿದೆ. ಇದಕ್ಕೆ ಕೃತಕ ಬುದ್ಧಿಮತ್ತೆಯ ನೆರವು ಕೂಡ ಪಡೆಯಲಾಗಿದೆ. ಜತೆಗೆ ಧ್ವನಿ ಮಾಧ್ಯಮದಲ್ಲೂ ಕೂಡ ಉದ್ಯಮಿಗಳು ತಮ್ಮಿಚ್ಛೆಯ ಭಾಷೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಇಂತಹ ಅತ್ಯಾಧುನಿಕ ಸೌಲಭ್ಯ ಈ ಉಪಕ್ರಮದಡಿ ಇರಲಿದೆ. ಇದಕ್ಕೆ ‘ಉಮಾ’ (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂದು ಹೆಸರು ಇಟ್ಟಿದ್ದು, ದೇಶದಲ್ಲೇ ಈ ರೀತಿಯ‌ ವ್ಯವಸ್ಥೆ ಹೊಂದುವ ರಾಜ್ಯ ನಮ್ಮದಾಗಲಿದೆ ಎಂದು ಅವರು‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Rudra Garuda Purana Movie: ರಿಷಿ ಅಭಿನಯದ ʼರುದ್ರ ಗರುಡ ಪುರಾಣʼ ಚಿತ್ರದ ʼಕಣ್ಮುಂದೆ ಬಂದುʼ ಹಾಡು ಕೇಳಿ

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಆಯುಕ್ತ ಡಾ.ಮಹೇಶ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಮೈಕ್ರೋಸಾಫ್ಟ್‌ನ ಯೋಜನಾ ನಿರ್ದೇಶಕ ಪುನೀತ್ ಉಪಸ್ಥಿತರಿದ್ದರು.