Sunday, 10th November 2024

ಝೂಮ್ ಕಾರ್ಯಕ್ರಮವೆಂದರೆ ಮೈ ಜುಮ್ ಎನ್ನುತ್ತದೆ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಒಂದೆರೆಡು ವಾರಗಳ ಹಿಂದಿನ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ಟರು ಝೂಮ್ ಮೀಟಿಂಗ್‌ಗಳ ಅನಾಹುತದ ಬಗ್ಗೆ ಬರೆದಿದ್ದರು. ಅದನ್ನು ಓದಿದ ನನಗೆ ನನ್ನ ಕಾರ್ಯಕ್ರಮಗಳೂ ಇತ್ತೀಚೆಗೆ ಝೂಮ್‌ಗಳಲ್ಲಿ ನಡೆಯುತ್ತಿರುವುದು ನೆನಪಾಗಿ ಈ ವಾರ ನನಗಾದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕರೋನಾ ರೋಗ ಜನಪ್ರಿಯ ವ್ಯಕ್ತಿಗಳನ್ನು ಮನೆಪ್ರಿಯ, ಮೂಲೆಪ್ರಿಯರನ್ನಾಗಿ ಮಾಡಿ ಮುದ್ದೆ ಮಾಡಿತು. ದೊಡ್ಡ ಸಿನಿಮಾ ನಟರೇ ಕೆಲಸವಿಲ್ಲದೆ ಕುಳಿತರು. ಗಳಿಸಿಟ್ಟಿದ್ದನ್ನು ತಿನ್ನಲಾರಂಭಿಸಿದರು. ನಾನು ಯೋಗ ಮಾಡ್ತಿದ್ದಿನಿ, ಹೆಂಡತಿ, ಮಕ್ಕಳಿಗೆ ಟೈಮ್
ಕೊಡ್ತೀದಿನಿ, ನನ್ನ ಹಳೇ ಸಿನಿಮಾಗಳನ್ನ ನೋಡ್ತಿದಿನಿ, ಟೋಟಲಿ ಐ ಆ್ಯಮ್ ಎನ್‌ಜಾಯಿಂಗ್ ಕರೋನಾ ಹೋಮ್ ಅರೆಸ್ಟ್  ಎಂದೆಲ್ಲ ಟ್ವೀಟ್ ಮಾಡಿದರು. ಫೇಸ್‌ಬುಕ್‌ಗಳಲ್ಲಿ ಹರಿಬಿಟ್ಟರು.

ಕೆಲವರು ತಮ್ಮ ಸಿನಿಮಾ, ತಮ್ಮ ಸೀರಿಯಲ್‌ಗಳ ಅಭಿನಯ ಕಂಡು ಬೆಚ್ಚಿಬಿದ್ದರು. ಅದಕ್ಕೆ ಕರೋನಾ ಬಂದು ನನ್ನ ಮನೆ ಸೇರುವಂತೆ ಮಾಡಿತೆ? ಎಂದು ಆತ್ಮಾವಲೋಕನವನ್ನೂ ಮಾಡಿಕೊಂಡರು. ಆದರೆ ಬಹಳಷ್ಟು ನಾಟಕ, ಆರ್ಕೆಸ್ಟ್ರಾ, ನಗೆ ಹಬ್ಬ ಗಳ ಕಲಾವಿದರು ತೀವ್ರ ಸಂಕಟ ಅನುಭವಿಸಿಬಿಟ್ಟರು. ಕಲಾವಿದರು ಹೇಗೆಂದರೆ, ತಮ್ಮ ಕೆಲಸ ನಡೆದಾಗ, ಜನ ಕರೆಯುತ್ತಿರು ವಾಗ, ಕಾರ್ಯಕ್ರಮಗಳ ಭರಾಟೆ, ಕೈಯಲ್ಲಿ ಕಾಸು ಕೂಡಿದಾಗ ಇನ್ನಿಲ್ಲದ ಶೋಕಿ ಮಾಡಿಬಿಡುತ್ತಾರೆ. ನಾವು ಹೀಗೆ ಇರುತ್ತೆವೆಂದು ಭ್ರಮಿಸಿ ಬಂದದ್ದನ್ನೆಲ್ಲ ಉಡಾಯಿಸಿಬಿಡುತ್ತಾರೆ. ಕಂತಿನಲ್ಲಿ ಕಾರು, ಮನೆ, ಸ್ವಂತ ಮೈಕ್‌ಸೆಟ್, ಲೈಟ್ಸ್‌, ಇನ್‌ಸ್ಟ್ರುಮೆಂಟ್
ಖರೀದಿಸಿ ಬಿಡುತ್ತಾರೆ.

ಕರೋನಾದಂಥ ತಿಂಗಳುಗಟ್ಟಲೆ ಕಷ್ಟಬಂದಾಗ ಆ ಕಂತುಗಳೇ ಕತ್ತಿನ ಪಟ್ಟಿ ಹಿಡಿದು ಜಗ್ಗಿ ಬೀದಿಗಿಳಿದು ಮಾನ ತೆಗೆಯುತ್ತವೆ,
ಅದಕ್ಕೆ ಹಿರಿಯರು ಹಾಸಿಗೆ ಇದ್ದಷ್ಟು ಕಾಲು ಚಾಚು, ಕುಳಿತು ಮಲಗು ಎಂದು ಎಚ್ಚರಿಸುತ್ತಿರುತ್ತಾರೆ. ಗುರುಗಳಾದ ಬೀಚಿಯವರು ಕಲಾವಿದರ ಪರಿಸ್ಥಿತಿ, ಮನಸ್ಥಿತಿ ಬಗ್ಗೆೆ ಬರೆಯುವಾಗ ಸುಖವಾಗಿದ್ದಾಗ ಹದಿನೈದು ಪೈಸೆ ಕಾರ್ಡ್ ಬರೆಯದ ಕಲಾವಿದರು, ಕಷ್ಟ ದಲ್ಲಿ ಇರುವಾಗ ಟೆಲಿಗ್ರಾಂ ಕೊಟ್ಟು ಕರೆಯಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಅನೇಕ ಕಲಾವಿದರು ಕಿರಾಣಿ ಮಾರಿದರು, ತರಕಾರಿ ಮಾರಿದರು, ಮಕ್ಕಳಿಗೆ ಟ್ಯೂಷನ್ ಹೇಳಿದರು, ಸಂಗೀತ, ನಾಟಕಗಳನ್ನು ಕಲಿಸಿದರು, ಯೂಟ್ಯೂಬ್‌ಗಳಿಗಂತೂ ಮುಗಿಬಿದ್ದು ತಮ್ಮ ಚಾನೆಲ್‌ಗಳನ್ನು ಛೂ ಬಿಟ್ಟರು (ಇದರಲ್ಲಿ ನಾನೂ ಸೇರಿದ್ದೇನೆ), ಸಭೆಗಳಲ್ಲಿ ನಮ್ಮ ಕಾರ್ಯಕ್ರಮದ ಮಧ್ಯೆ ಎದ್ದು ಹೋಗಲಾರದ ಕೆಲ ನಮ್ಮ ದ್ವೇಷಿಗಳು ಯೂಟ್ಯೂಬ್‌ನ ನಮ್ಮ ಕಾರ್ಯಕ್ರಮ ಗಳಿಗೆ ಬೆಲ್ ಬಾರಿಸಿ ಚಂದದಾರರಾಗದೆ, ನಮ್ಮದನ್ನು ಲೈಕ್, ಶೇರ್ ಮಾಡದೆ ಅಧೋಮುಖಿ ಹೆಬ್ಬೆರಳು ತೋರಿಸಿ, ನೋಡದೆಯೇ ಡಿಸ್‌ಲೈಕ್ ಮಾಡಿ ಬಿಟ್ಟರು.

ಇಂಥಾ ವಿಮರ್ಶಕರು ಎಲ್ಲಾ ರಂಗಗಳಲ್ಲೂ ಇದ್ದಾರೆ, ಇರುತ್ತಾರೆ ಕೂಡಾ. ಏಕೆಂದರೆ, ಇವರ ಕೈಲಾಗದ್ದನ್ನು ನಾವು ಮಾಡಿರು ತ್ತೇವೆ ಅಥವಾ ಮಾಡಲು ಹೋಗಿ ವಿಫಲವಾದವರೂ ಇರುತ್ತಾರೆನ್ನಿ, ಅದಕ್ಕೆ ಗುರುಗಳಾದ ಬೀಚಿಯವರು ವಿಮರ್ಶಕರೆಂದರೆ ಯಾರು? ಎಂಬ ಪ್ರಶ್ನೆಗೆ ಅದ್ಭುತ ಸರ್ವಕಾಲಿಕ, ಸತ್ಯವಾದ ಉತ್ತರ ಕೊಟ್ಟಿದ್ದಾರೆ. ಬೇರೆಯವರ ಮಕ್ಕಳನ್ನು ಕಂಡು ಮೂಗು ಮುರಿಯುವ ಬಂಜೆ ಎಂದು. ಅಂತೂ ಏನೇನು ಮಾಡಿದರೂ ಕರೋನಾ ತೊಲಗಲೇ ಇಲ್ಲ. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದೆಂಬಂತೆ, ಸಣ್ಣಗೆ ಹಿರಿ, ಕಿರಿ, ಸಿರಿ ಕಲಾವಿದರಿಗೆಲ್ಲ ಆರ್ಥಿಕ ಸಮಸ್ಯೆ ತೋರಲಾರಂಭಿಸಿತು.

ಆಗ ಇದ್ದಕ್ಕಿದ್ದಂತೆ, ಆಶಾಕಿರಣದಂತೆ ಬಂದಿದ್ದು ಆನ್‌ಲೈನ್ ಶೋ, ವರ್ಚುವಲ್ ಕಾನ್ಸರ್ಟ್ಸ್‌, ಝೂಮ್ ಪ್ರೋಗ್ರಾಂ ಇತ್ಯಾದಿ ಇತ್ಯಾದಿ. ನಮಗೂ ಒಂದು ಮೊದನೆಯದಾಗಿ ಅಮೆರಿಕಾದ ಒಂದು ಪಟ್ಟಣದಿಂದ ಒಂದು ಕಾರ್ಯಕ್ರಮ ಬಂತು, ಹೊಸ ಅನುಭವಕ್ಕೆ ಕಾದು ಕುಳಿತೆ, ನಿರಾಸೆಯಾಗಿ ಹೋಯಿತು. ವಿಶಾಲ ಸಭಾಂಗಣಗಳಲ್ಲಿ ನೂರಾರು ಸಹೃದಯ ಕನ್ನಡ ಅಭಿಮಾನಿ ಗಳ ಚಪ್ಪಾಳೆ, ಶಿಳ್ಳುಗಳ ಮಧ್ಯೆ ವೇದಿಕೆ ಏರಿ ನಿಂತು, ಕುಳಿತ, ನಿಂತ ಸಭಾಸದರನ್ನು ನೋಡುವ, ಆತ್ಮೀಯ ಪರಿಚಿತರನ್ನು ಅಲ್ಲಿಂದಲೇ ಗುರುತಿಸಿ ಮುಗುಳ್ನಗುವ, ಹುಬ್ಬೇರಿಸುವ, ಕೈ ಮುಗಿಯುವ ಆ ಸುಂದರ ರೋಮಾಂಚಕ ದೃಶ್ಯವೆಲ್ಲಿ? ಲ್ಯಾಪ್
ಟಾಪ್‌ನ ಪುಟ್ಟ ಪರದೆಯಲ್ಲಿ ಪುಟ್ಟ ಪುಟ್ಟ ಕಿಟಕಿಗಳಲ್ಲಿ ಕಾಣುವ ಮುಖಗಳೆಲ್ಲಿ? ಕಾಣುವ ಮುಖಗಳಲ್ಲಿ ಬಹಳಷ್ಟು ಗಂಟು ಮುಖಗಳೇ, ತಮ್ಮ ಮನೆಯಲ್ಲಿ ನಾವು ಕೂತಿದ್ದೇವೆ, ಇವನದೇನು? ಎಂಬ ತಾತ್ಸಾರ ಬೇರೆ ಕೆಲವು ಮುಖಗಳಲ್ಲಿ.

ಪಾಪ ಕರೆಸಿದ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಬಿಡುಗಡೆಯಿಲ್ಲ. ನಗುತ್ತಾ ಮ್ಯೂಟ್ ಮಾಡಿ, ಆನ್ ಮಾಡಿ, ಜಾಯಿನ್ ಆಗಿ, ನಿಮ್ಮ ಮನೆಯ ಟಿ.ವಿ ಆರಿಸಿ ದಯವಿಟ್ಟು ಮಾತನಾಡಬೇಡಿ ಎಂದೆಲ್ಲ ಅವರವರ ಮನೆಯಲ್ಲಿ ಕೂತವರಿಗೆ ನಿರ್ದೆಶಿಸುತ್ತಿದ್ದರು.
ಕೆಲವರಿಗಂತೂ ಶಾಲೆಯಲ್ಲಿ ಮೇಸ್ಟ್ರು ವಿದ್ಯಾರ್ಥಿಗಳಿಗೆ ಹೇಳುವಂತೆ ಸರಿಯಾಗಿ ಕೂತುಕೊಳ್ಳಿ, ಸುಮ್ನೆ ಕೂತುಕೊಳ್ಳಿ ಎಂದು ನಾನೇ ಹೇಳಬೇಕಾಯಿತು. ಅಂತೂ ಲ್ಯಾಪ್‌ಟಾಪ್ ತುಂಬಾ ಚಿಕ್ಕ ಚಿಕ್ಕ ಫ್ರೇಮುಗಳಲ್ಲಿ ನವರಸಗಳ ಅನೇಕ ಮುಖಗಳು ಕಂಡವು. ‘ನಾನು ಕಾಣ್ತಿದಿನಾ? ಮಾತಾಡೋದು ಕೇಳ್ತಿದಿಯಾ? ಎಂದು ಗುಹೆಯಲ್ಲಿ ಕುಳಿತ ಕಣ್ಣಿಲ್ಲದವನಂತೆ ಕೇಳಲಾರಂಭಿಸಿದೆ’.

‘ಚೆನ್ನಾಗಿ ಕೇಳ್ತಿದೆ ಹೇಳಿ ಸಾರ್’ ಎಂದು ಅವರೆಂದಿದ್ದು ಎಷ್ಟೋ ಹೊತ್ತು ನಾನು ಮಾತಾಡಲು ಶುರು ಮಾಡಿದ ಮೇಲೆ ಕೇಳಿಸಿತು. ಮಾತಾಡಿದ್ದು ಯವಾಗ ಕೇಳ್ತಿದಿಯೋ ಎಂದು ಕಾದು ಕೂರುವಂತಾಯಿತು. ನಮ್ಮ ಜೋಕಿಗೆ ಅವರು ನಕ್ಕಿದ್ದಂತೂ ಮಿಂಚು ಹೊಡೆದ ಎಷ್ಟೋ ಹೊತ್ತಿನ ಮೇಲೆ ಗುಡುಗು ಕೇಳಿದಂತೆ ಕೇಳುತ್ತಿತ್ತು, ಕಾಣುತ್ತಿತ್ತು. ಕೇಳುವ ವ್ಯಕ್ತಿಯ ಹಿಂದೆ ಓಡಾಡುವರು, ಅವರ ಮನೆಯಲ್ಲಿ ಮಕ್ಕಳ ಗಲಾಟೆ, ಗ್ರೈಂಡರ್ ಸದ್ದು, ಕುಕ್ಕರ್ ಸೀಟಿ, ಕೇಳುತ್ತಲೇ ಇದ್ದವು.

ನಮ್ಮದು ನಡುನಡುವೆ ಕಟ್ ಆಗುವುದು, ಇಲ್ಲಾಾ ಮೂಕಿ ಚಿತ್ರವಾಗುವುದು ನಡೆದೇ ಇತ್ತು. ಒಬ್ಬ ವ್ಯಕ್ತಿಯಂತೂ ಹಳೆಯ ಹಿಂದಿ ಸಿನಿಮಾಗಳ ಡಾನ್ ಗಳಂತೆ ನಮ್ಮ ಮುಖಕ್ಕೆ ಉದ್ದವಾಗಿ ಕತ್ತರಿ ಕಾಲು ಹಾಕಿ ಎರಡೂ ಕಾಲುಗಳ ಮಧ್ಯೆ ನಮ್ಮನ್ನು ನೋಡು ತ್ತಿದ್ದ, ಒಂದೇ, ಎರಡೇ ನಿರರ್ಗಳವಾಗಿ ಮಾತನಾಡಲು ಆಗುತ್ತಲೇ ಇರಲಿಲ್ಲ. ಕರೋನಾ ಇಷ್ಟು ಎಲ್ಲ ವಿಧದಲ್ಲೂ ಕಾಡುತ್ತದೆ ಅಂತ ಊಸಿರಲಿಲ್ಲ. ಜೋಶಿ, ನಾನು, ಮಹಾಮನಿ ಮೂವರೂ ಸೇರಿ ತಲಾ ಅರ್ಧರ್ಧ ಗಂಟೆ ಮಾತಾಡಿದರೂ, ನಾಲ್ಕೂವರೆ ತಾಸು ಹೈರಾಣವಾಗಿ ಹೋದೆವು.

ನನಗೆ ಈ ಆನ್‌ಲೈನ್ ಝೂಮ್ ಕಾರ್ಯಕ್ರಮಗಳಿಂದ ಏನೇನೂ ‘ವರ್ಕ್ ಸ್ಯಾಟಿಸ್‌ಫ್ಯಾಕ್ಷನ್’ ಸಿಗದಿದ್ದರೂ, ಇದು ಒಬ್ಬರಿಂದ ಒಬ್ಬರಿಗೆ ಹಬ್ಬಿ ಯು.ಕೆ. ಕನ್ನಡಿಗರು, ಕ್ಯಾಲಿಫೋರ್ನಿಯಾ, ಮಸ್ಕತ್, ಮೆಲ್ಬೋನ್ ಗರ್ಳಲ್ಲದೆ ಸ್ಥಳೀಯವಾಗಿಯೂ ಗ್ರಾಮೀಣ ಬ್ಯಾಂಕುಗಳು, ಸಿಮೆಂಟ್ ಕಂಪನಿ, ಆಫೀಸರ್‌ಸ್‌ ಕ್ಲಬ್‌ಗಳಿಂದಲೂ ಫೇಸ್‌ಬುಕ್ ಲೈವ್ ಕೊಡಿ, ಝೂಮ್ ಲೈವ್ ಕೊಡಿ ಎಂದು ದುಂಬಾಲು ಬಿದ್ದು, ತಲಿ ಚಿಟ್ಟುಹಿಡಿದು ಹೋಯಿತು. ಸುಮ್ಮನೆ ಖಾಲಿ ಕುಳಿತು ಏನು ಮಾಡೋದು ಕೊಡೋಣ ಅಂತ ಸಹ ಕಲಾವಿದರು ದುಂಬಾಲು ಬಿದ್ದು, ಬಂದ ಎಲ್ಲವನ್ನು ಒಪ್ಪಿಕೊಂಡು ನನ್ನನ್ನು ಎಳೆದೊಯ್ದರು. ಖಾಲಿ ಕೂಡಲಾರದೆ
ಅದ್ಯಾರೋ, ಎಲ್ಲಿಯೋ ಗೂಟ ಬಡಿದುಕೊಂಡರು ಎಂಬ ಗಾದೆಯಂತೆ ನನಗೆ ಎನಿಸಲಾರಂಭಿಸಿತು.

ಈ ದೇಶಿ ನಮ್ಮ ಕನ್ನಡಿಗರು ಬಹುತೇಕ ಶ್ರೀಮಂತ ಮನೆತನದ ಮಕ್ಕಳು, ಅಳಿಯಂದಿರು, ಸೊಸೆಯಂದಿರು ಇಲ್ಲಿದ್ದಾಗ ಯಾವ ಜನ ಸಂಪರ್ಕ, ಸಂಗೀತ, ಸಾಹಿತ್ಯದ ಗಂಧಗಾಳಿ ಇಲ್ಲದೆ ಕಳ್ಳೆಕಾಯಿ ತಿಂದು ಎಳೆ ಬಿಸಿಲಿಗೆ ಮೈ ಕಾಸಿ ಬೆಳೆದಿರುತ್ತಾರೆ, ಅಲ್ಲಿ ಹೋದ ಮೇಲೆ ಭಾರತದಲ್ಲಿ ನಮ್ಮ ಸುತ್ತಮುತ್ತ ಇದೆಲ್ಲಾ ಇತ್ತೆ? ಎಂದು ಅವರೇ ಗಾಬರಿಗೊಂಡಿರುತ್ತಾರೆ. ಅಲ್ಲಿ ಒಗ್ಗಟ್ಟು, ಸಹ ಕುಟುಂಬ, ಸ್ನೇಹ, ಸುಡುಗಾಡು, ಸಾಹಿತ್ಯ, ಸಂಗೀತ ಔಷಧಿಯಂತೆ ಅನಿವಾರ್ಯವಾಗಿರುತ್ತದೆ. ಇಲ್ಲದಿದ್ದರೆ, ದೂರ ದೇಶದಲ್ಲಿ ಎಲ್ಲರಿಂದ ದೂರ ದೂರ ಭಾರತದಲ್ಲಿದ್ದಂತೆ ಇರಲು ಸಾಧ್ಯವಿಲ್ಲ ಅಲ್ಲವೇ? ಇದರ ಪ್ರತ್ಯಕ್ಷ ಅನುಭವ ಈ ಝೂಮ್ ಪ್ರೋಗ್ರಾಂ ಗಳಿಂದ ನನಗಾಯಿತು.

ಒಬ್ಬಾಕೆಗೆ ಅಲ್ಲಿನ ಅಧ್ಯಕ್ಷರು ನನ್ನ ಪರಿಚಯ ಭಾಷಣ ಕೊಟ್ಟು, ವಿವರ ಪಡೆಯಲು ನನ್ನ ನಂಬರ್ ಕೊಟ್ಟರು. ಶುರುವಾಯಿತು ನೋಡಿ ಆಕೆಯ ಫಜೀತಿ. ದಿನಕ್ಕೆೆ ಕನಿಷ್ಠ ನನಗೆ ಹತ್ತುಬಾರಿ ಫೋನ್ ಮಾಡಿ ಮಾತನಾಡಲು ಆರಂಭಿಸಿದರು. ಹಗಲಿನ ಹನ್ನೆರಡು ತಾಸುಗಳು ನನಗಿಲ್ಲಿ ಎಲ್ಲ ಕೆಲಸ ಮುಗಿಸಿ ದಣಿದು ರಾತ್ರಿ ಮಲಗುವ ಸಮಯ, ಅಮೆರಿಕಾದಲ್ಲಿ ಅವರಿಗೆ ಹಗಲು ಸಮಯ, ಪ್ರಾಣೇಶವರೇ, ನಿಮಗೆ ತೊಂದರೆ ಕೊಡ್ತೀದಿನಿ ಕ್ಷಮಿಸಿ ಎಂದೇ ಮಾತು ಆರಂಭಿಸುತ್ತಿದ್ದ ಆ ಸಹೋದರಿಗೆ ನನ್ನ ಪರಿಚಯ ಭಾಷಣ ಮಾಡುವ ಜವಾಬ್ದಾರಿಯನ್ನು ಸಂಘದ ಅಧ್ಯಕ್ಷವಹಿಸಿದ್ದ. ಅಮೆರಿಕಾದ ಕನ್ನಡ ಸಂಘಗಳ ಅಧ್ಯಕ್ಷರೆಂದರೆ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷನಷ್ಟೆ ಗೌರವ ಅಲ್ಲಿ. ಅವರಿಗೆ ನಮ್ಮ ಪ್ರೆಸಿಡೆಂಟ್ ನನಗೆ ಹೇಳಿದಾರೆ, ಪ್ರೆಸಿಡೆಂಟ್ ಆರ್ಡರ್ಡ್ ಟು ಮಿ ಎಂದೇ ಸಂಭ್ರಮಿಸುತ್ತಾರೆ.

ನನ್ನ ಬಯೋಡೆಟಾ ಹಾಳೆಯನ್ನು ಮೇಲ್‌ಗೆ ಕಳುಹಿಸಿದೆ. ಒಂದೇ ಪೇಜು ಅಷ್ಟೆ. ಅದರಲ್ಲಿ ಜನನ, ಇಸವಿ, ಊರು, ವಿದ್ಯಾಭ್ಯಾಸ,
ಉದ್ಯೋಗ, ಇದುವರೆಗೂ ಕೊಟ್ಟ ಕಾರ್ಯಕ್ರಮಗಳ ಸಂಖ್ಯೆೆ, ಹೋದ ಊರುಗಳು, ಬಂದ ಪ್ರಶಸ್ತಿಗಳು, ಹವ್ಯಾಸಗಳು ಇಷ್ಟೆ. ಇದರ ಮೇಲೆ ನೀವೇನಾದರೂ ಸೇರಿಸಿ ಹೇಳಿ ಎಂದೆ. ಎದೆ ಒಡೆದುಕೊಂಡ ಆಕೆ ಒಂದು ಪೇಜು ಇದೆನಾ? ಮೈ ಗಾಡ್ ಅಂದು  ಹೌಹಾರಿ ದಳು. ಅಲ್ಲಿಂದ ಶುರುವಾಯಿತು ನೋಡಿ, ಪ್ರತಿ ಅರ್ಧಗಂಟೆಗೊಮ್ಮೆ ಫೋನು ಸರ್, ನಿಮ್ಮ ಹೆಸರು ಮೊದಲು ಹೇಳಲಾ? ಊರಿನ ಹೆಸರು ಮೊದಲು ಹೇಳಲಾ? ನೀವು ಹೋದ ಊರುಗಳ ಎಲ್ಲ ಹೆಸರು ಹೇಳಲಾ? ಓನ್ಲಿ ಸಿಟಿಗಳ ಹೆಸರು ಹೇಳಲಾ? ನಿಮಗೆ ಬಂದಿರುವ ಪ್ರಶಸ್ತಿಗಳ ಡಿಟೇಲ್ಸ್‌ ಕಳಿಸಿ, ನಾನು ಸ್ಟಡಿ ಮಾಡಬೇಕು, ಹಾಸ್ಯ ಸಾಹಿತ್ಯದ ಬಗ್ಗೆೆಯೇ ನಿಮಗೇಕೆ ಇಷ್ಟು ಕಾಳಜಿ? ಬೀಚಿ ಎಂದರೆ ಯಾರು? ಅವರ ಡಿಟೇಲ್ಸ್‌ ಕೊಡಿ ನಾನು ಸ್ಟಡಿ ಮಾಡಬೇಕು, ನೀವು ಇದುವರೆಗೂ ಕೊಟ್ಟ ಸಭೆಗಳಲ್ಲಿ ಎಷ್ಟು ಜನರಿ ದ್ದರು? ಗಂಡಸರೆಷ್ಟು? ಹೆಣ್ಣು ಮಕ್ಕಳೆಷ್ಟು, ಅಂದ್ರ ಆ ಊರಿನ ಪಾಪ್ಯುಲೇಷನ್‌ನಲ್ಲಿ ಎಷ್ಟು ಪರ್ಸೆಂಟ್ ಜನ ಇದಕ್ಕೆ ಬಂದಿದ್ರು (ಸದ್ಯ ಅವರ ಆಧಾರ್ ನಂಬರ್‌ಗಳನ್ನು ಕೇಳಲಿಲ್ಲ ನನ್ನ ಪುಣ್ಯ) ನೀವು ಯೂಸುವಲಿ ಯಾವ ಊರ ಪ್ರೋಗ್ರಾಂಗೆ ಯಾವ ಕಲರ್ ಡ್ರೆಸ್ ಹಾಕ್ತೀರಿ, ನಿಮ್ಮ ಹತ್ತಿರ ಎಷ್ಟು ಜೊತೆ ಈ ಬಟ್ಟೆ, ಜುಬ್ಬಾ, ಜಾಕೇಟ್ ಇವೆ.

ನನಗೊಂದು ಐಡಿಯಾ ಬೇಕು. ನಿಮಗೆ ತಬಲಾ, ಕೊಳಲು ಹವ್ಯಾಸ ಇದೆ ಎಂದಿರಿ? ಗಿಟಾರ್, ಸಿತಾರ ಏಕೆ ನುಡಿಸುವುದಿಲ್ಲ, ಜನರನ್ನು ನಗಿಸಲೇಬೇಕೆಂಬ ಹಠ ನಿಮಗೇಕೆ? ನಗದಿದ್ದರೆ ಅವರನ್ನು ನೀವು ಯಾವ ದೃಷ್ಟಿಯಿಂದ ನೋಡುತ್ತೀರಿ? ನಾನು ಡಿಫರೆಂಟ್ ಆಗಿ ನಿಮ್ಮನ್ನು ಇಂಟ್ರಡ್ಯೂಸ್ ಮಾಡಲು ಯೋಚಿಸ್ತಿದಿನಿ, ನೀವು ಕೋ ಆಪರೇಟ್ ಎಲ್ಲಾ ಹೇಳಬೇಕು ಸರ್. ಒಂದೇ, ಎರಡೇ, ಆ ಯಮ್ಮ ನಾನು ಈ ವೃತ್ತಿಯನ್ನೆ ಬಿಟ್ಟು ಬಿಡಬೇಕೆನ್ನುವಷ್ಟು ವಿವರ ಕೇಳಿದಳು. ಫೋನ್ ರಿಂಗಾದರೆ ಎದೆ ಹೊಡೆದು ಕೊಳ್ಳಲಾರಂಭಿಸಿತು. ಕಡೆಗೆ ನಾನು ನಿಮ್ಮ ಪರಿಚಯ ಮಾಡಲು ಯಾವ ಕಲರ್ ಸೀರೆ ಉಟ್ಟುಕೊಳ್ಳಲಿ? ಬಾಬ್ ಇರಲಾ? ಜಡೆ
ಇರಲಾ? ಸ್ಟೇಜ್‌ನ ಯಾವ ಸೈಡ್‌ನಿಂದ ಬರಲಿ? ನಿಮ್ಮ ಬಲಕ್ಕೆ ನಿಲ್ಲಲಾ? ಎಡಕ್ಕೆ ನಿಲ್ಲಲಾ? ನಿಮಗೆ ಪ್ರೆಸಿಡೆಂಟ್ ಹಾರ ಹಾಕಿದ  ಮೇಲೆ ನಾನು ಪರಿಚಯ ಮಾಡಲಾ? ಅಥವಾ ನನ್ನ ಪರಿಚಯ ಆದ ಮೇಲೆ ಹಾರ ಹಾಕಿಸ್ಕೋತಿರಾ? ಪರಿಚಯ ಮಾಡಿದ ನಾನು ನಿಮಗೆ ಒಂದು ಬೊಕ್ಕೆ ಕೊಡ್ತಿನಿ, ನನ್ನ ಖರ್ಚಿಂದ, ಮೊದಲು ಬೊಕ್ಕೆ ಕೊಟ್ಟು ಶುರು ಮಾಡಲಾ, ಮುಗಿಸಿದ ಮೇಲೆ ಕೊಡಲಾ? ತಾಯಿ ಇದು ಆನ್‌ಲೈನ್ ಪ್ರೋಗ್ರಾಂ, ನಾನು ಸಾವಿರಾರು ಕಿಲೋ ಮೀಟರ್ ದೂರ ಇರುತ್ತೇನೆ ಎಂದರೆ, ‘ನೋ ನೋ ನೀವು ಇಲ್ಲೇ ಇದ್ದಿರಂತಲೇ ಭಾಸಿ, ಇವನ್ನು ಮಾಡಲು ಪ್ರೆಸಿಡೆಂಟ್ ಹೇಳಿದಾರೆ, ಕೊಟ್ಟಂತೆ ಮಾಡ್ತೀನಿ ಅಷ್ಟೆ ಎಂದಳು.

ಕಡೆಗೂ ಆ ದಿನ ಬಂತು. ಪರಿಚಯ ಮಾಡಬೇಕಾದ ಆ ಹೆಣ್ಣು ಮಗಳು ಪ್ರೋಗ್ರಾಂನಲ್ಲಿ ಇಲ್ಲವೆ ಇಲ್ಲ. ಕಾರಣ, ವಿಪರೀತ ತಲೆನೋವು, ಜ್ವರವಂತೆ, ಈ ಪರಿ ತಲೆ ಕೆಡಿಸಿಕೊಂಡರೆ ಇನ್ನೇನಾದೀತು? ಎಂದುಕೊಂಡೆ. ಕಾರ್ಯದರ್ಶಿಯೇ ನನ್ನ ಪರಿಚಯ ಮಾಡಿದ್ದ, ಜಗತ್ ಪ್ರಸಿದ್ಧರಿರುವ ಪ್ರಾಣೇಶರ ಪರಿಚಯ ಮಾಡಿದರೆ ಜನ ನನ್ನನ್ನು ಮೂರ್ಖ ಎನ್ನುತ್ತಾರಷ್ಟೆ, ಅವರ ಪರಿಚಯವೇ ಅವರ ಮಾತು ಎಂದು ಮಂಗಳ ಹಾಡಿಬಿಟ್ಟ. ಇಷ್ಟಕ್ಕೆ ಆ ಯಮ್ಮ ವಾರಕಾಲ ಕುದ್ದು ಹೋದಳು, ನನ್ನ ಕುದಿಸಿ-ಸೋಸಿ ಬಿಟ್ಟಳು ಎನಿಸಿತು. ಕಾಲಕಾಲಕ್ಕೆ ಪರಿಸ್ಥಿತಿ, ತಂತ್ರಜ್ಞಾನ ಬದಲಾದಂತೆಲ್ಲ ಮನುಷ್ಯನು ಹೇಗೆ ಬದಲಾಗಬೇಕೆಂಬು
ದಕ್ಕೆ ಕರೋನಾ ದಿನಗಳ, ಈ ಝೂಮ್ ಪ್ರೋಗ್ರಾಂಗಳೇ ಸಾಕ್ಷಿಯಾಗಿವೆ.

ಎಲ್ಲ ಕಲಾವಿದರು ತಮ್ಮ ತಮ್ಮ ಪರಿಮಿತಿಯೊಳಗೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮಗಳನ್ನು ಕೊಟ್ಟರು. ಆದರೆ ನಾನು ಮೊದಲೇ ಹೇಳಿದಂತೆ ಅಭಿಮಾನಿಗಳು ಇರುವ, ಅವರು ಕರೆಸಿದ ಊರುಗಳಿಗೆ ಹೋಗುವಾಗ ಇರುವ ಪ್ರಯಾಣದ ಅನುಭವ, ಆ ಅಭಿಮಾನಿ ಗಳ ಊರಲ್ಲಿ ನಮ್ಮನ್ನಿಳಿಸಿದ ಮನೆ, ಲಾಡ್ಜ್ ಅಥವಾ ತೋಟದ ಮನೆಗಳ ಅನುಭವ, ಅಲ್ಲಿನ ಜನರ ಸ್ನೇಹ, ಕಾರ್ಯಕ್ರಮ ಮುಗಿದ ಮೇಲಿನ ಜನರ ಆತ್ಮೀಯ ಮಾತು ಇವೆಲ್ಲವುಗಳನ್ನು ಝೂಮ್ ಕಾರ್ಯಕ್ರಮ ನುಂಗಿ ಹಾಕಿಬಿಡುತ್ತದೆ. ಕೇವಲ ಎದೆಯವರೆಗೂ ಮಾತ್ರ ನೋಡುವ ಅವರು ಕೆಳಗೆ ನಾವು ಹೇಗೆ ಕುಳಿತಿದ್ದೇವೆ ಎಂಬುದನ್ನು ನೋಡುವುದಿಲ್ಲ. ಮಧ್ಯ ನಾವು ಮಾತನಾಡುತ್ತಾ, ಕಾಣುವ ಪುಟ್ಟ ಪುಟ್ಟ ಕಿಟಕಿಗಳಲ್ಲಿ ಅವರ ಮನೆಗಳಲ್ಲಿನ ಅಭಿಮಾನಿಗಳನ್ನು ನೋಡುವುದು ಮುಂಬೈಯಂಥ ದೊಡ್ಡ ಶಹರು ಗಳ ಅಪಾರ್ಟ್‌ಮೆಂಟ್‌ನಲ್ಲಿ ನಾವು ಮಧ್ಯ ಅಂಗಳದಲ್ಲಿ ನಿಂತು 15-20 ಅಂತಸ್ತಿನ ಮನೆಗಳಲ್ಲಿ ವಾಸವಿರುವ ಜನರು ಕಿಟಕಿ ಗಳಲ್ಲಿ ನಿಂತು ನಮ್ಮನ್ನು ನೋಡಿದಂತೆ ಭಾಸವಾಗುತ್ತಿತ್ತು.

ಅನುಭವದ ದೃಷ್ಟಿಯಿಂದ ಇದು ನಮಗೆ ಅವಶ್ಯವಾಗಿತ್ತು ಎನಿಸಿತು. ಇನ್ನುಮುಂದೆ ಇದನ್ನೂ ನಿಷೇಧಿಸಿದರೆ, ಪ್ರತಿಯೊಬ್ಬರಿಗೂ ಅವರವರ ಮೊಬೈಲ್‌ಗೆ ಫೋನ್ ಮಾಡಿ ಒಬ್ಬೊೊಬ್ಬರಿಗೆ ಹಾಸ್ಯ ಹೇಳುವ ಪರಿಸ್ಥಿತಿ ಬಾರದಿರಲಿ ತಾಯಿ ಎಂದು ಆ ವಾಗ್ಧೇವಿ ಯನ್ನು ಬೇಡಿಕೊಳ್ಳುತ್ತಿದ್ಧೇನೆ.