ನವದೆಹಲಿ : ಕೆಲವು ದಿನಗಳಿಂದ ದೇಶಾದ್ಯಂತ ಭಾರೀ ಸುದ್ದಿ ಮಾಡಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi)ನನ್ನು ಹೀರೋ ಎಂಬಂತೆ ಬಿಂಬಿಸಲಾಗ್ತಿದೆ. ಇದೀಗ ಇದಕ್ಕೆ ಪೂರಕ ಎಂಬಂತೆ ಆತನ ಭಾವಚಿತ್ರವಿರುವ ಟಿ ಶರ್ಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಬೆಂಗಳೂರು ಮೂಲದ ಇ ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್ (Flipkart) ಹಾಗೂ ಮೀಶೋ (Meesho) ಕಂಪನಿಗಳು ಲಾರೆನ್ಸ್ ಬಿಷ್ಣೋಯ್ ಫೋಟೋ ಮಾರಾಟ ಮಾಡಿ ಟೀಕೆಗೆ ಗುರಿಯಾಗಿವೆ. ದೊಡ್ಡವರಿಗೆ ಮಾತ್ರವಲ್ಲದೆ ಸಣ್ಣ ಮಕ್ಕಳಿಗೂ ಈ ಟಿ ಶರ್ಟ್ ಲಭ್ಯವಿದೆ ಎಂದು ತಿಳಿದಿದೆ. ಪತ್ರಕರ್ತ ಅಲಿಶನ್ ಜಾಫ್ರಿ (Alishan Jafri) ಈ ವಿಷಯದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಇದು ಆತಂಕಕಾರಿ ಎಂದು ಬರೆದುಕೊಂಡಿದ್ದಾರೆ.
People are literally selling gangster merchandise on platforms like @Meesho_Official and Teeshopper. This is just one example of India's latest online radicalisation.
— Alishan Jafri (@alishan_jafri) November 4, 2024
Thread
1/n pic.twitter.com/vzjXM360q3
ಟಿ ಶರ್ಟ್ ಫೋಟೊವನ್ನು ಹಂಚಿಕೊಂಡಿರುವ ಅವರು ಇಂತಹ ಇ ಕಾಮರ್ಸ್ ಕಂಪನಿಗಳು ಏನನ್ನು ಪ್ರಚಾರ ಮಾಡಲು ಹೊರಟಿವೆ ಎಂದು ಪ್ರಶ್ನೆ ಮಾಡಿದ್ದಾರೆ. ಗ್ಯಾಂಗ್‌ಸ್ಟರ್‌ಗಳನ್ನು ಹೀರೋ ರೀತಿಯಲ್ಲಿ ಬಿಂಬಿಸುವುದು ಆತಂಕಕಾರಿ ಎಂದು ಹೇಳಿದ್ದಾರೆ. ಅಪರಾಧ ಕೃತ್ಯಗಳನ್ನು ತಡೆಯಲು ಒಂದೆಡೆ ಪೊಲೀಸರು ಹರಸಾಹಸ ಪಡುತ್ತಿದ್ದರೆ ಇಂತಹ ಕಂಪನಿಗಳು ತಮ್ಮ ಲಾಭಕ್ಕಾಗಿ ದರೋಡೆಕೋರರನ್ನು ಹೀರೋ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಸಾಮಾಜಿಕ ಮಾಧ್ಯಮ ಒಂದು ಶಕ್ತಿಯುತ ಆಯುಧವಾಗಿದೆ ಅದನ್ನು ಸರಿಯಾಗಿ ಬಳಕೆ ಮಾಡಬೇಕು. ಸಮಾಜಕ್ಕೆ ತಪ್ಪು ಸಂದೇಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಭಾವಚಿತ್ರ ಇರುವ ಟಿ ಶರ್ಟ್‌ಗಾಗಿ ನಾವು ಹಲವು ಕಡೆ ಹುಡುಕಿದೆವು. ಫ್ಲಿಪ್‌ಕಾರ್ಟ್‌ನಲ್ಲಿನ ಟಿ-ಶರ್ಟ್‌ಗಳನ್ನು ಶೇಕಡಾ 64 ರಷ್ಟು ರಿಯಾಯಿತಿಯ ನಂತರ 249 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಟಿ ಶರ್ಟ್‌ಗಳು ಎರಡು ವಿನ್ಯಾಸದಲ್ಲಿ ಲಭ್ಯವಿದ್ದು ಕಿತ್ತಳೆ ಬಣ್ಣದ ಟಿ-ಶರ್ಟ್ ಮತ್ತು ಕಪ್ಪು ಹೂಡಿಯನ್ನು ಧರಿಸಿರುವ ಲಾರೆನ್ಸ್ ಬಿಷ್ಣೋಯ್ ಭಾವಚಿತ್ರವಿದೆ. ಒಂದು ವಿನ್ಯಾಸದಲ್ಲಿ ಗ್ಯಾಂಗ್‌ಸ್ಟರ್ ಮತ್ತು ಇನ್ನೊಂದು ವಿನ್ಯಾಸದಲ್ಲಿ ರಿಯಲ್ ಹೀರೋ ಎಂದು ಬರೆಯಲಾಗಿದೆ.
ಜಾಫ್ರಿ ಹಂಚಿಕೊಂಡಿರುವ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು ಇಂತಹ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಗಳಿಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿದ್ದು , ಇಂತಹ ಟಿ ಶರ್ಟ್‌ಗಳನ್ನು ಮಕ್ಕಳು ಹಾಕಿಕೊಳ್ಳುತ್ತಾರೆ ಅದರ ಬಗ್ಗೆ ಚಿಂತೆಯಿದೆ ಎಂದಿದ್ದಾರೆ.
ಇದನ್ನೂ ಓದಿ: Bishnoi Gang : ಲಾರೆನ್ಸ್ ಬಿಷ್ಣೋಯ್ ಪ್ರತಿಸ್ಪರ್ಧಿ ಗ್ಯಾಂಗ್‌ನಿಂದ ಡೆಲ್ಲಿಯಲ್ಲಿ ಶೂಟೌಟ್
ಹಲವು ಕೊಲೆ ಹಾಗೂ ದರೋಡೆಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಸದ್ಯ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ನಡೆದ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಈತನ ಗ್ಯಾಂಗ್ ಹೊತ್ತು ಕೊಂಡಿದೆ. ಕೃಷ್ಣಮೃಗ ಕೊಂದಿರುವ ಆರೋಪವನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್‌ಗೂ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿತ್ತು.
ಇನ್ನು ಈ ವಿಚಾರ ವಿವಾದಕ್ಕೀಡಾಗ್ತಿದ್ದಂತೆ ಎಚ್ಚತ್ತುಕೊಂಡ ಮೀಶೋ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಎನ್ನಲಾಗಿದೆ.