ಉತ್ತರಪ್ರದೇಶ: ಉತ್ತರ ಪ್ರದೇಶದ ಹಾಪುರದ ನಗರ್ ಕೊಟ್ವಾಲಿ ಪ್ರದೇಶದಲ್ಲಿ ಮೊಬೈಲ್ ಫೋನ್ ಮಾರಾಟಗಾರರೊಬ್ಬರ ಮೇಲೆ ಮಾಜಿ ಶಾಸಕರೊಬ್ಬರ ಪುತ್ರ ಮತ್ತು ಅವನ ಸಹಚರರು ಸೇರಿ ಹಲ್ಲೆ ನಡೆಸಿದ್ದಾರೆ. ದೆಹಲಿ ರಸ್ತೆಯ ರೆಸ್ಟೋರೆಂಟ್ ಒಂದರಲ್ಲಿ ಈ ದಾಳಿ ನಡೆದಿದ್ದು, ಈ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ಪಟೇಲ್ ನಗರದ ನಿವಾಸಿಯಾದ ಅಂಕುಶ್ ಕುಕ್ರೇಜಾ ಹಲ್ಲೆಗೊಳಗಾದ ವ್ಯಕ್ತಿ. ಇವರು ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಂಕುಶ್ ಅವರು ತಿಳಿಸಿದ ಪ್ರಕಾರ, ಶ್ರೀನಗರ ಪ್ರದೇಶದ ಮಾಜಿ ಶಾಸಕರ ಪುತ್ರ ಸತೇಂದ್ರ ಅಲಿಯಾಸ್ ಬಾಬಿ ಅಂಗಡಿಗೆ ಭೇಟಿ ನೀಡಿ ತೊಂದರೆ ಕೊಡಲು ಶುರುಮಾಡಿದ್ದು ಅಲ್ಲದೇ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನಂತೆ. ಇದಕ್ಕೆ ಅಂಕುಶ್ ನಿರಾಕರಿಸಿದಾಗ ಅದಕ್ಕೆ ಬದಲಾಗಿ ಮೊಬೈಲ್ ಫೋನ್ ಕೇಳಿದ್ದಾನಂತೆ. ಅಂಕುಶ್ ಅದಕ್ಕೂ ಕೂಡ ನಿರಾಕರಿಸಿದ್ದಾರಂತೆ.
ಇತ್ತೀಚೆಗೆ ಅಂಕುಶ್ ದೆಹಲಿ ರಸ್ತೆಯಲ್ಲಿರುವ ರೆಸ್ಟೋರೆಂಟ್‍ನಲ್ಲಿ ಉದ್ಯೋಗಿ ವಿನೀತ್ ಅವರೊಂದಿಗೆ ಊಟಕ್ಕೆ ಹೋಗಿದ್ದಾಗ ಬಾಬಿ ತನ್ನ ಸಹಚರರೊಂದಿಗೆ ರೆಸ್ಟೋರೆಂಟ್‍ಗೆ ಬಂದು ಪಿಸ್ತೂಲ್, ಚಾಕು ಮತ್ತು ಕಬ್ಬಿಣದ ರಾಡ್‍ಗಳು ಸೇರಿದಂತೆ ಕೆಲವು ಆಯುಧಗಳನ್ನು ಬಳಸಿ ಅಂಕುಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಅಂಕುಶ್ ತೀವ್ರವಾಗಿ ಗಾಯಗೊಂಡಿದ್ದಾರಂತೆ. ಈ ಘಟನೆಯು ರೆಸ್ಟೋರೆಂಟ್ ಒಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
हापुड़ में पूर्व विधायक के बेटे ने की मारपीट : मोबाइल विक्रेता ने मारपीट का लगाया आरोप, VIDEO VIRAL @hapurpolice #hapur pic.twitter.com/qmB9h6F2mG
— Tricity Today (@tricitytoday) November 4, 2024
ವೈರಲ್ ವಿಡಿಯೊದಲ್ಲಿ ಎಂಟರಿಂದ ಹತ್ತು ಮಂದಿ ಯುವಕರು ರೆಸ್ಟೋರೆಂಟ್‍ಗೆ ನುಗ್ಗಿ ಟೇಬಲ್ ಬಳಿ ಕುಳಿತಿದ್ದ ಅಂಕುಶ್‍ರನ್ನು ಸುತ್ತುವರಿದು ಹೊಡೆಯಲು ಶುರುಮಾಡಿದ್ದಾರೆ. ಅವರು ಅಂಕುಶ್‍ರನ್ನು ಅರೆಬೆತ್ತಲೆಗೊಳಿಸಿ ರೆಸ್ಟೋರೆಂಟ್ ಒಳಗೆ ಕ್ರೂರವಾಗಿ ಥಳಿಸಿದ್ದಲ್ಲದೇ ಅಂಕುಶ್‍ನನ್ನು ರೆಸ್ಟೋರೆಂಟ್‍ನಿಂದ ಹೊರಗೆ ಎಳೆದುಕೊಂಡು ಬಂದು ಥಳಿಸಿದ್ದಾರೆ. ಈ ದಾಳಿಯಲ್ಲಿ ಅಂಕುಶ್ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ:ನನ್ನ ತಂದೆಗೆ ಅಪಾಯಕಾರಿ ಔಷಧ ಕೊಡುತ್ತಿದ್ದಾರೆ…ಖ್ಯಾತ ನಟಿ ವಿರುದ್ಧ ಮಲಮಗಳಿಂದ ಗಂಭೀರ ಆರೋಪ; ಪೋಸ್ಟ್ ವೈರಲ್
ಅಂಕುಶ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದು, ಈ ಹಲ್ಲೆಯು ಸುಲಿಗೆ ವಿಚಾರಕ್ಕೆ ಸಂಬಂಧಿಸಿಲ್ಲ. ಎರಡು ಗುಂಪಿನ ನಡುವಿನ ಹಳೆಯ ದ್ವೇಷದಿಂದಾಗಿ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.