Tuesday, 5th November 2024

Edneer Swamiji: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದಾಳಿ, ವ್ಯಾಪಕ ಖಂಡನೆ

Edneer Shri Sachidananda Bharathi Swamiji

ಕಾಸರಗೋಡು : ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ (Edneer Swamiji, Edneer Shri Sachidananda Bharathi Swamiji) ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ (Assault Case) ನಡೆಸಿದ್ದಾರೆ. ಅವರು ಕಾಸರಗೋಡು (Kasaragod) ಬಳಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿರುವಾಗ ಈ ಘಟನೆ ನಡೆದಿದೆ.

ಕಾಸರಗೋಡು- ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ವಾಹನವನ್ನು ತಡೆದ ಪುಂಡರ ತಂಡವೊಂದು ತಗಾದೆ ಎಬ್ಬಿಸಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದು, ಹಾನಿ ಮಾಡಿದ್ದಾರೆ. ಈ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದರು. ಕಾಸರಗೋಡು ಪೋಲಿಸರು ಘಟನೆ ಮಾಹಿತಿ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.

ವ್ಯಾಪಕ ಖಂಡನೆ

ಸ್ವಾಮೀಜಿ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಕೇರಳ ಸರ್ಕಾರವನ್ನು ಆಗ್ರಹಿಸಲಾಗಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಪಾದರ ವಾಹನಕ್ಕೆ ಕಾಸರಗೋಡು ಬೊವಿಕ್ಕಾನದಲ್ಲಿ ಸಮಾಜಘಾತುಕ ಶಕ್ತಿಗಳು ಅಡ್ಡಿಪಡಿಸಿ ಹಾನಿ ಮಾಡಿರುವುದನ್ನು
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಪುಂಡರು, ಹಿಂದು ವಿರೋಧಿ ಶಕ್ತಿಗಳು ಸವಾಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅಲ್ಲಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಾಗೂ ನಮ್ಮ ಸಮಾಜದ ಪೂಜ್ಯ ಮಠಗಳಲ್ಲಿ ಒಂದಾಗಿರುವ ಎಡನೀರು ಮಠದ ಶ್ರೀಗಳ ಮೇಲಿನ ದಾಳಿ ಹಿಂದೂ ಸಮಾಜದ ಮೇಲೆ ನಡೆದಿರುವ ದಾಳಿಯಾಗಿದೆ. ಸರಕಾರ ತಕ್ಷಣ ಸಮಾಜಘಾತ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಜಾಮೀನು ರಹಿತ ಸೆಕ್ಷನ್ ಅಡಿ ಕೇಸು ದಾಖಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.

ಘಟನೆಯ ಕುರಿತು ಹಿಂದೂ ಐಕ್ಯವೇದಿ ನಾಯಕ ರಾಜನ್ ಮುಳಿಯಾರ್ ತಿಳಿಸಿದ ವಿವರ ಹೀಗಿದೆ: “ಭಾನುವಾರ ವೆಳ್ಳರಿಕುಂಡ್‌ನಲ್ಲಿ ಕಾರ್ಯಕ್ರಮ ಮುಗಿಸಿ ಎಡನೀರು ಸ್ವಾಮೀಜಿಯವರು ಬೋವಿಕಾನ, ಇರಿಯಣ್ಣಿ ದಾರಿಯಾಗಿ ಮರಳುತ್ತಿದ್ದಾಗ, ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯಕ್ರಮ ನಡೆಯುತ್ತಿತ್ತು. ಬಾವಿಕೆರೆ ಎಂಬಲ್ಲಿ ವಾಹನವೊಂದಕ್ಕೆ ಸೈಡ್ ನೀಡುವಾಗ ಸೈಕ್ಲಿಂಗ್ ಅಸೋಸಿಯೇಷನ್ ಸ್ವಯಂಸೇವಕನೊಬ್ಬ ಕೈಯ್ಯಲ್ಲಿ ಕಾರಿಗೆ ಹೊಡೆದು ಜೋರುಮಾಡಿದ್ದಲ್ಲದೇ, ದೊಣ್ಣೆಯಲ್ಲಿ ಗಾಜಿಗೆ ಬಡಿದು ಹಾನಿ ಮಾಡಿದ್ದಾನೆ. ಈ ಪ್ರಾಂತ್ಯದಲ್ಲಿ ಎಡನೀರು ಶ್ರೀಗಳನ್ನು ಅರಿಯದವರು ಯಾರೂ ಇಲ್ಲ. ಸ್ವತಃ ಸ್ವಾಮೀಜಿಯವರು ಇರುವ ಕಾರನ್ನು ಗೌರವಿಸದೇ ಆಕ್ರಮಿಸಿದ್ದಾನೆಂದರೆ ಉದ್ದೇಶಪೂರ್ವಕವಾಗಿ ಮಾಡಿದ್ದಾನೆ ಎಂದರ್ಥ” ಎಂದಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಸೈಕ್ಲಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಎಡನೀರು ಮಠಕ್ಕೆ ತೆರಳಿ ಸ್ವಾಮೀಜಿ ಅವರಲ್ಲಿ ಕ್ಷಮಾಪಣೆ ಕೋರಿದ್ದಾರೆ ಎಂದೂ ತಿಳಿದುಬಂದಿದೆ. ಎಡನೀರು ಸ್ವಾಮೀಜಿಗಳು ಪ್ರಕರಣವನ್ನು ಅಲ್ಲಿಗೇ ಕೈಬಿಟ್ಟು, ಪೊಲೀಸ್‌ ದೂರು ನೀಡದಿರಲು ನಿರ್ಧರಿಸಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Bantwala Jayarama Acharya: ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ