Sunday, 24th November 2024

Supreme Court: ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ಸರ್ಕಾರಿಗಳಿಗಿಲ್ಲ: ಸುಪ್ರೀಂ ಮಹತ್ವದ ತೀರ್ಪು

Supreme Court

ನವದೆಹಲಿ: ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡೆಸಿಕೊಳ್ಳುವ ಅಧಿಕಾರ ಸರ್ಕಾರಿಗಳಿಗಿಲ್ಲ ಎಂದು ಸುಪ್ರೀಂ ಕೋರ್ಟ್‌(Supreme Court) ಮಹತ್ವದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ(CJI) ಡಿವೈ ಚಂದ್ರಚೂಡ್(D Y Chandrachud) ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಬಹುಮತದ ತೀರ್ಪು ಪ್ರಕಟಿಸಿದ್ದು, ಸಾರ್ವಜನಿಕ ಒಲಿತಿಗಾಗಿಯೂ ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊ‍ಕೊಳ್ಳುವ ಅಧಿಕಾರ ಸರ್ಕಾರಿಗಳಿಗಿಲ್ಲ ಎಂದು ಹೇಳಿದೆ.

7:1:1 ಬಹುಮತದ ತೀರ್ಪಿನಲ್ಲಿ, ನ್ಯಾಯಾಲಯವು, “ಸಾರ್ವಜನಿಕ ಒಳಿತಿಗಾಗಿ ವಸ್ತು ಮತ್ತು ಸಮುದಾಯವು ಹೊಂದಿರುವ ಸಂಪನ್ಮೂಲಗಳ ಮೇಲೆ ರಾಜ್ಯವು ಹಕ್ಕು ಸಾಧಿಸಬಹುದಾದಂತೆ ಎಲ್ಲಾ ಖಾಸಗಿ ಒಡೆತನದ ಸಂಪನ್ಮೂಲಗಳನ್ನು ರಾಜ್ಯವು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ ಎಂದಿದೆ. ಕಲಂ 39(ಬಿ) ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು “ಸಮುದಾಯದ ವಸ್ತು ಸಂಪನ್ಮೂಲಗಳು” ಎಂದು ಪರಿಗಣಿಸಬಹುದೇ ಮತ್ತು “ಸಾಮಾನ್ಯ ಒಳಿತಿಗಾಗಿ” ವಿತರಣೆಗಾಗಿ ರಾಜ್ಯ ಅಧಿಕಾರಿಗಳು ಸ್ವಾಧೀನಪಡಿಸಿಕೊಳ್ಳಬಹುದೇ ಎಂಬ ಕಾನೂನಾತ್ಮಕ ಪ್ರಶ್ನೆಯ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.

ಖಾಸಗಿ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರಬಹುದು. ಆದರೆ ವ್ಯಕ್ತಿಯ ಒಡೆತನದ ಪ್ರತಿಯೊಂದು ಸಂಪನ್ಮೂಲವು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರುವುದು ಅನಿವಾರ್ಯವಲ್ಲ ಎಂದು ಪೀಠವು ಮೂರು ಭಾಗಗಳ ತೀರ್ಪಿನಲ್ಲಿ ಹೇಳಿದೆ.

ಈ ತೀರ್ಪಿನೊಂದಿಗೆ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳಿದ್ದ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ 1978 ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವರ್ಷದ ಮೇ 1 ರಂದು ವಿಚಾರಣೆ ನಡೆಸಿದ ನಂತರ ಸಂವಿಧಾನ ಪೀಠವು ಖಾಸಗಿ ಆಸ್ತಿ ಪ್ರಕರಣದ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಇಂದಿನ ಆರ್ಥಿಕ ರಚನೆಯಲ್ಲಿ ಖಾಸಗಿ ವಲಯಕ್ಕೆ ಪ್ರಾಮುಖ್ಯತೆ ಇದೆ ಎಂದು ಸಿಜೆಐ ಹೇಳಿದರು. ತೀರ್ಪು ನೀಡುವಾಗ, ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದರು. ಆಸ್ತಿಯ ಸ್ಥಿತಿಗತಿ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಅದರ ಅಗತ್ಯತೆ ಮತ್ತು ಅದರ ಕೊರತೆಯಂತಹ ಪ್ರಶ್ನೆಗಳು ಖಾಸಗಿ ಆಸ್ತಿಗೆ ಸಮುದಾಯದ ಆಸ್ತಿಯ ಸ್ಥಾನಮಾನವನ್ನು ನೀಡಬಹುದು ಎಂದು ಹೇಳಿದ್ದಾರೆ.

ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಜೆಬಿ ಪರ್ದಿವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್, ಎಸ್‌ಸಿ ಶರ್ಮಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರು ಬಹುಮತದ ತೀರ್ಪು ನೀಡಿದರು. ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಪ್ರತ್ಯೇಕ ತೀರ್ಪನ್ನು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: DK Shivakumar: ಅಕ್ರಮ ಆಸ್ತಿ ಗಳಿಕೆ ಕೇಸ್‌ನಲ್ಲಿ ಡಿಕೆಶಿಗೆ ರಿಲೀಫ್‌; ಅರ್ಜಿ ವಿಚಾರಣೆ 1 ತಿಂಗಳು ಮುಂದೂಡಿದ ಸುಪ್ರೀಂ ಕೋರ್ಟ್‌